ನವದೆಹಲಿ: ಬೆಂಗಳೂರು ಮೂಲದ ಟೆಕ್ಕಿ ಅತುಲ್ ಸುಭಾಷ್ ಅವರ ಪತ್ನಿ ಮತ್ತು ಅತ್ತೆ-ಮಾವಂದಿರ ತೀವ್ರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪದ ಬಗ್ಗೆ ನಡೆಯುತ್ತಿರುವ ಚರ್ಚೆಯ ನಡುವೆ ವಿಚ್ಛೇದನ ಪ್ರಕರಣಗಳಲ್ಲಿ ಜೀವನಾಂಶವನ್ನು ನಿರ್ಧರಿಸುವಾಗ ಪರಿಗಣಿಸಬೇಕಾದ ಪ್ರಮುಖ ಅಂಶಗಳನ್ನು ಸುಪ್ರೀಂ ಕೋರ್ಟ್ ವಿವರಿಸಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಪ್ರಸನ್ನ ವಿ.ವರಾಳೆ ಅವರನ್ನೊಳಗೊಂಡ ಪೀಠವು ಮೊನ್ನೆ ಮಂಗಳವಾರ ವಿಚ್ಛೇದನ ಪ್ರಕರಣದಲ್ಲಿ ಜೀವನಾಂಶದ ಮೊತ್ತವನ್ನು ನಿರ್ಧರಿಸುವಾಗ, ವಿಚ್ಛೇದನದ ನಂತರದ ಮಹಿಳೆಗೆ ಜೀವನಾಂಶವನ್ನು ನಿರ್ಧರಿಸಲು ಎಂಟು ಅಂಶಗಳ ಸೂತ್ರವನ್ನು ಪರಿಚಯಿಸಿದೆ.
ನ್ಯಾಯಾಲಯವು ವಿವರಿಸಿರುವ ಅಂಶಗಳು ಹೀಗಿವೆ:
1. ಪತಿ ಮತ್ತು ಪತ್ನಿ ಇಬ್ಬರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿ.
2. ಭವಿಷ್ಯದಲ್ಲಿ ಪತ್ನಿ ಮತ್ತು ಮಕ್ಕಳಿದ್ದರೆ ಅವರ ಮೂಲಭೂತ ಅಗತ್ಯಗಳು.
3. ಪತಿ ಮತ್ತು ಪತ್ನಿ ಇಬ್ಬರ ಅರ್ಹತೆಗಳು ಮತ್ತು ಉದ್ಯೋಗದ ಸ್ಥಿತಿಗತಿ.
4. ಇಬ್ಬರೂ ವ್ಯಕ್ತಿಗಳ ಆದಾಯ ಮತ್ತು ಆಸ್ತಿಗಳ ಮೂಲಗಳು.
5. ಪತ್ನಿ ತನ್ನ ಅತ್ತೆಯ ಮನೆಯಲ್ಲಿ ವಾಸಿಸುತ್ತಿರುವಾಗ ಅನುಭವಿಸುತ್ತಿದ್ದ ಜೀವನ ಮಟ್ಟ.
6. ಪತ್ನಿಯ ಉದ್ಯೋಗ ಸ್ಥಿತಿಗತಿ.
7. ಪತ್ನಿ ಉದ್ಯೋಗಸ್ಥೆಯಾಗಿಲ್ಲದಿದ್ದರೆ, ಯಾವುದೇ ಆದಾಯ ಮೂಲ ಹೊಂದಿಲ್ಲದಿದ್ದರೆ ಕಾನೂನು ವೆಚ್ಚಗಳನ್ನು ಸರಿದೂಗಿಸಲು ಒಂದು ಸಮಂಜಸ ಮೊತ್ತ.
8. ಪತಿಯ ಆರ್ಥಿಕ ಸ್ಥಿತಿ, ಆತನ ಗಳಿಕೆ, ಇತರ ಜವಾಬ್ದಾರಿಗಳು ಮತ್ತು ನಿರ್ವಹಣೆ ಭತ್ಯೆಯ ಪ್ರಭಾವ.
ಈ ತೀರ್ಪು ಬೆಂಗಳೂರು ಮೂಲದ ಟೆಕ್ಕಿ ಅತುಲ್ ಸುಭಾಷ್ ಸಾವಿನ ನಂತರ ಕೇಳಿಬರುತ್ತಿರುವ ವ್ಯಾಪಕ ಸಾರ್ವಜನಿಕ ಆಕ್ರೋಶ ಮಧ್ಯೆ ಬಂದಿದೆ. ವೈವಾಹಿಕ ಸಮಸ್ಯೆಗಳಿಂದಾಗಿ ಹಲವು ವರ್ಷಗಳಿಂದ ಮಾನಸಿಕವಾಗಿ ನೊಂದಿದ್ದ ಸುಭಾಷ್ ಸೋಮವಾರ ಮಾರತ್ತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮಂಜುನಾಥ ಲೇಔಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು.
ಟೆಕ್ಕಿ ಮೃತಪಟ್ಟ ಕೋಣೆಯಲ್ಲಿ “ನ್ಯಾಯ ಸಿಗಬೇಕಿದೆ” ಎಂಬ ಬರಹ ಸಿಕ್ಕಿದೆ. ಸುಭಾಷ್ ತಮ್ಮ ಡೆತ್ ನೋಟ್ ನಲ್ಲಿ, ತಾನು ಅನೇಕ ಕಾನೂನು ಪ್ರಕರಣಗಳನ್ನು ಎದುರಿಸಿದ್ದೇನೆ. ತನ್ನ ಪತ್ನಿ, ಆಕೆಯ ಸಂಬಂಧಿಕರು ಮತ್ತು ಉತ್ತರ ಪ್ರದೇಶದ ನ್ಯಾಯಾಧೀಶರಿಂದ ಸಾಕಷ್ಟು ಕಿರುಕುಳ ಎದುರಿಸಿದ್ದೇನೆ.
ಟೆಕ್ಕಿ ಸುಭಾಷ್ ಸಾವು ಇತ್ತೀಚಿನ ದಿನಗಳಲ್ಲಿ ದಂಪತಿಯ ವೈವಾಹಿಕ ವಿವಾದಗಳಲ್ಲಿ ಕಾನೂನು ನಿಬಂಧನೆಗಳ ದುರುಪಯೋಗದ ಬಗ್ಗೆ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ.