ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದ 2012ರ ಭ್ರಷ್ಟಾಚಾರ ಪ್ರಕರಣದಲ್ಲಿ ಕೇಂದ್ರ ಕಲ್ಲಿದ್ದಲು ಸಚಿವಾಲಯದ ಮಾಜಿ ಕಾರ್ಯದರ್ಶಿ ಎಚ್ ಸಿ ಗುಪ್ತಾ ಮತ್ತು ಹಿರಿಯ ಅಧಿಕಾರಿಗಳಾದ ಕೆ ಎಸ್ ಕ್ರೋಫಾ ಮತ್ತು ಕೆ ಸಿ ಸಮ್ರಿಯಾ ಅವರನ್ನು ದೆಹಲಿಯ ಸಿಬಿಐ ವಿಶೇಷ ನ್ಯಾಯಾಲಯದ ಬುಧವಾರ ದೋಷಮುಕ್ತಗೊಳಿಸಿದೆ.
ನವಭಾರತ್ ಪವರ್ ಪ್ರೈವೇಟ್ ಲಿಮಿಟೆಡ್‌ನ ಸುಳ್ಳು ಪ್ರತಿಪಾದನೆ ಮತ್ತು ತಪ್ಪು ನಿರೂಪಣೆಗಳನ್ನು ಪರಿಶೀಲಿಸದೆ ಅದಕ್ಕೆ ಒಡಿಶಾದಲ್ಲಿ ಕಲ್ಲಿದ್ದಲು ನಿಕ್ಷೇಪಗಳ ಹಂಚಿಕೆಯಲ್ಲಿ ಅನಗತ್ಯ ಲಾಭ ಮಾಡಿಕೊಡಲು ಕ್ರಿಮಿನಲ್ ಪಿತೂರಿ ನಡೆಸಿದ ಆರೋಪದಡಿ ಹಿರಿಯ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಭ್ರಷ್ಟಾಚಾರ ತಡೆ ಕಾಯಿದೆ ಮತ್ತು ಐಪಿಸಿಯ ವಿವಿಧ ಸೆಕ್ಷನ್‌ಗಳಲ್ಲಿ ಆರೋಪಿಗಳಾಗಿದ್ದ ಅವರನ್ನು ನ್ಯಾಯಾಧೀಶ ಸಂಜಯ್ ಬನ್ಸಾಲ್ ಅವರು ದೋಷಮುಕ್ತಗೊಳಿಸಿದರು.
ಭ್ರಷ್ಟಾಚಾರ ತಡೆ ಕಾಯಿದೆ ಮತ್ತು ಐಪಿಸಿ ಅಡಿಯ ಅಪರಾಧಗಳಿಗಾಗಿ ಇದೇ ಪ್ರಕರಣದಲ್ಲಿ ಆರೋಪಿಯಾಗಿರುವ ಎನ್‌ಪಿಪಿಎಲ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ವೈ ಹರೀಶ್ ಚಂದ್ರ ಪ್ರಸಾದ್ ಮತ್ತು ಅಧ್ಯಕ್ಷ ಪಿ ತ್ರಿವಿಕ್ರಮ ಪ್ರಸಾದ್ ಅವರನ್ನೂ ನ್ಯಾಯಾಲಯ ಖುಲಾಸೆಗೊಳಿಸಿದೆ.
ನವಭಾರತ್ ಪವರ್ ಪ್ರೈವೇಟ್ ,ಲಿಮಿಟೆಡ್‌ನ ಅರ್ಜಿಯು ಸಂಪೂರ್ಣವಾಗಿದ್ದು, ಕಂಪನಿಗೆ ಅರ್ಹತೆ ಇದೆ ಮತ್ತು ಅದಕ್ಕೆ ಕಲ್ಲಿದ್ದಲು ಹಂಚಿಕೆ ಮಾಡುವಂತೆ ಕೇಂದ್ರ ವಿದ್ಯುತ್ ಸಚಿವಾಲಯ ಮತ್ತು ಒಡಿಶಾ ಸರ್ಕಾರವನ್ನು ಒಳಗೊಂಡಿರುವ ಸರ್ಕಾರಿ ಅಧಿಕಾರಿಗಳಿಗೆ ಶಿಫಾರಸು ಮಾಡಿರುವುದರಿಂದ ಆರೋಪಿತರಾದ ಸಾರ್ವಜನಿಕ ಸೇವಕರನ್ನು ಯಾವುದೇ ಅಪರಾಧಕ್ಕೆ ಹೊಣೆಗಾರರನ್ನಾಗಿ ಮಾಡಲಾಗದು ಎಂದು ನ್ಯಾಯಾಲಯ ತಿಳಿಸಿದೆ.
ಎನ್‌ಪಿಪಿಎಲ್ ಮತ್ತು ಅದರ ಉನ್ನತ ಅಧಿಕಾರಿಗಳ ಖುಲಾಸೆಗೆ ಸಂಬಂಧಿಸಿದಂತೆ, ತಪ್ಪು ನಿರೂಪಣೆಗಳನ್ನು ಮಾಡುವ ಸಂಬಂಧದಲ್ಲಿ ಕಂಪನಿಯ ಕಡೆಯಿಂದ ನಡೆದಿದೆ ಎನ್ನಲಾದ ಪಿತೂರಿಯನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಪೀಠ ತಿಳಿಸಿದೆ.