“ಸರ್ಕಾರಿ ನೌಕರನೊಬ್ಬ 48 ಗಂಟೆಗಳಿಗೂ ಹೆಚ್ಚು ಕಾಲ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದ ಕಾಯಿದೆ ಅಡಿ ಬಂಧನದಲ್ಲಿದ್ದು ನಂತರ ಜಾಮೀನಿನ ಮೇಲೆ ಹೊರಬಂದಿದ್ದರೆ ಆತ ಸೇವೆಯಿಂದ ತಂತಾನೆ ಅಮಾನತುಗೊಂಡಿರುತ್ತಾನೆ. ಹೀಗಾಗಿ, ಸಕ್ಷಮ ಪ್ರಾಧಿಕಾರ ಅಮಾನತು ರದ್ದುಗೊಳಿಸಿ ಮುಂದಿನ ಔಪಚಾರಿಕ ಆದೇಶ ಹೊರಡಿಸುವ ತನಕ ಆತನ ಅಮಾನತು ಮುಂದುವರಿಯುತ್ತದೆ” ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶಿಸಿದೆ.
ಕರ್ನಾಟಕ ಆಡಳಿತ ನ್ಯಾಯಾಧಿಕರಣ (ಕೆಎಟಿ) ನೀಡಿದ್ದ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ಕುಂದಾಣ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಡಿ ಎಂ ಪದ್ಮನಾಭ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಮತ್ತು ಸಿ ಎಂ ಜೋಶಿ ಅವರ ವಿಭಾಗೀಯ ಪೀಠ ವಜಾಗೊಳಿಸಿದೆ.
“ಬಂಧನಕ್ಕೆ ಒಳಗಾಗಿದ್ದ ಸರ್ಕಾರಿ ನೌಕರ ಆನಂತರ ನ್ಯಾಯಾಲಯದಿಂದ ಜಾಮೀನು ಪಡೆದು ಹೊರಗೆ ಬಂದ ಮೇಲೆ ನೇರ ಕಚೇರಿಗೆ ಹೋಗಬಹುದೇ ಇಲ್ಲವೇ ಎಂಬುದನ್ನು 2015ರ ಸರ್ಕಾರಿ ಸುತ್ತೋಲೆಯ ಪ್ರಕಾರ ಸಕ್ಷಮ ಪ್ರಾಧಿಕಾರ ನಿರ್ಧರಿಸಬೇಕು. ಅಂತಹ ಸರ್ಕಾರಿ ಅಧಿಕಾರಿಯ ಅಮಾನತು ಆದೇಶವನ್ನು ರದ್ದುಪಡಿಸಬೇಕೋ, ಬೇಡವೋ ಎಂಬ ಬಗ್ಗೆ ಪ್ರಾಧಿಕಾರವೇ ಅಂತಿಮ ನಿರ್ಣಯ ಕೈಗೊಳ್ಳಬೇಕು” ಎಂದು ಹೇಳಿದೆ.
“ಕರ್ನಾಟಕ ನಾಗರಿಕ ಸೇವಾ ನಿಯಮಗಳು–1957ರ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮ 10 (2) (ಎ) ನಿಯಮಗಳ ಪ್ರಕಾರ ಸರ್ಕಾರಿ ನೌಕರ 48 ಗಂಟೆಗಳಿಗೂ ಹೆಚ್ಚು ಕಾಲ ಬಂಧನದಲ್ಲಿದ್ದರೆ ಸೇವೆಯಿಂದ ತಂತಾನೆ ಅಮಾನತುಗೊಳ್ಳುತ್ತಾನೆ. ಹೀಗಾಗಿ, ಸಕ್ಷಮ ಪ್ರಾಧಿಕಾರ ಎಲ್ಲಿಯವರೆಗೆ ಅಮಾನತು ರದ್ದುಗೊಳಿಸುವ ಬಗ್ಗೆ ನಿರ್ಣಯ ಮಾಡುವುದಿಲ್ಲವೋ ಅಲ್ಲಿಯವರೆಗೆ ಆತನ ಅಮಾನತು ಆದೇಶ ಮುಂದುವರಿಯುತ್ತದೆ. ಹಾಗಾಗಿ, ನಾನು ಜಾಮೀನು ಪಡೆದು ಹೊರಗೆ ಬಂದಿದ್ದೇನೆ ಎಂಬ ಏಕೈಕ ಕಾರಣದಿಂದ ಅಮಾನತು ಕೊನೆಗೊಂಡಂತಾಗುತ್ತದೆ ಎಂದು ಭಾವಿಸತಕ್ಕದ್ದಲ್ಲ. ಇದು ಎಲ್ಲಾ ಸಾರ್ವಜನಿಕ ಸೇವಕರಿಗೂ ಅನ್ವಯವಾಗುತ್ತದೆ” ಎಂದು ಪೀಠ ಆದೇಶದಲ್ಲಿ ವಿವರಿಸಿದೆ.
ಪ್ರಕರಣದ ಹಿನ್ನೆಲೆ: ದೇವನಹಳ್ಳಿ ತಾಲ್ಲೂಕಿನ ಇಲತೊರೆ ಗ್ರಾಮದಲ್ಲಿ ಅಭಿವೃದ್ಧಿಪಡಿಸಲಾದ ಬಡವಾಣೆ ಪ್ರದೇಶದಲ್ಲಿ ನೆಲದಾಳದಲ್ಲಿ ಎಲೆಕ್ಟ್ರಿಕಲ್ ಕೇಬಲ್ ಎಳೆಯಲು ಪದ್ಮನಾಭ ₹5 ಲಕ್ಷ ಲಂಚಕ್ಕೆ ಬೇಡಿಕೆ ಇರಿಸಿ ಮುಂಗಡವಾಗಿ ₹3 ಲಕ್ಷ ಪಡೆದಿದ್ದರು. ಇನ್ನೂ ₹2 ಲಕ್ಷ ಕೊಟ್ಟರೆ ಮಾತ್ರವೇ ಪರವಾನಗಿ ನೀಡುವುದಾಗಿ ತಿಳಿಸಿದ್ದರು ಎಂದು ಆಪಾದಿಸಿ ನೀಡಲಾಗಿದ್ದ ದೂರಿನಡಿ ಪದ್ಮನಾಭ ಅವರನ್ನು, ಭ್ರಷ್ಟಾಚಾರ ನಿವಾರಣಾ ಕಾಯಿದೆ–1988ರ ಸೆಕ್ಷನ್ 7(ಎ) ಅಡಿಯಲ್ಲಿ 2024ರ ಸೆಪ್ಟೆಂಬರ್ 6ರಂದು ಬಂಧಿಸಲಾಗಿತ್ತು.
ಜಾಮೀನು ಪಡೆದು ಬಂಧನದಿಂದ ಹೊರಬಂದಿದ್ದ ಪದ್ಮನಾಭ ಅವರು ಅಮಾನತು ಆದೇಶ ರದ್ದುಗೊಳಿಸುವಂತೆ ಕೋರಿ ಕೆಎಟಿಗೆ ಅರ್ಜಿ ಸಲ್ಲಿಸಿದ್ದರು. ಕೆಎಟಿಯು ಮನವಿಯನ್ನು 2024ರ ನವೆಂಬರ್ 25ರಂದು ತಿರಸ್ಕರಿಸಿತ್ತು.