ಮನೆ ಅಪರಾಧ ಮುಖ್ಯ ಶಿಕ್ಷಕನ ಶವ ಪತ್ತೆ: ಕೊಲೆ ಶಂಕೆ  

ಮುಖ್ಯ ಶಿಕ್ಷಕನ ಶವ ಪತ್ತೆ: ಕೊಲೆ ಶಂಕೆ  

0

ಮುದ್ದೇಬಿಹಾಳ: ತಾಲೂಕಿನ ಆಲಮಟ್ಟಿ ರಸ್ತೆ ಪಕ್ಕದಲ್ಲಿರುವ ಚಲಮಿ ತಾಂಡಾ ವ್ಯಾಪ್ತಿಯ ಮನೆಯೊಂದರ ಹೊರಾಂಗಣದಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ.

 
 ಯಾದಗಿರಿ ಜಿಲ್ಲೆ ಹುಣಚಗಿ ತಾಲೂಕಿನ ಹಗರಟಗಿ ಗ್ರಾಮದ ಶಂಕ್ರಪ್ಪ ಕಾಳಪ್ಪ ಬಡಿಗೇರ (58) ಮೃತಪಟ್ಟವರು ಎಂದು ಗುರುತಿಸಲಾಗಿದೆ.  

Join Our Whatsapp Group


ತಲೆಯ ಹಿಂಭಾಗದಲ್ಲಿ ಭಾರೀ ಗಾಯವಾಗಿ ಹೆಚ್ಚಿನ ಪ್ರಮಾಣದಲ್ಲಿ ರಕ್ತ ಹರಿದಿದೆ. ಪಕ್ಕದ ಕಬ್ಬಿನ ಹೊಲದಲ್ಲಿ ಕಬ್ಬು ಕಡಿಯುತ್ತಿದ್ದ ತಂಡವೊಂದು ಇದನ್ನು ಕಂಡು ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಮುದ್ದೇಬಿಹಾಳ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಇದು ಕೊಲೆ ಇರಬಹುದು ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.  


ಶಂಕ್ರಪ್ಪ ಕಾಳಪ್ಪ ಬಡಿಗೇರ ಹುಣಚಗಿ ತಾಲೂಕಿನ ಕುರೇಕನಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.  
 ಸ್ಥಳಕ್ಕೆ ಬಸವನ ಬಾಗೇವಾಡಿ ಡಿಎಸ್ಪಿ, ಮುದ್ದೇಬಿಹಾಳ ಸಿಪಿಐ, ಪಿಎಸೈ ಭೇಟಿ ನೀಡಿದ್ದಾರೆ.  


 ಹಗರಟಗಿಯಿಂದ ಶವ ಪತ್ತೆಯಾದ ಸ್ಥಳ ಅಂದಾಜು 70 ಕಿ.ಮೀ. ದೂರದಲ್ಲಿದೆ. ಅಷ್ಟು ದೂರದಲ್ಲಿರುವ ವ್ಯಕ್ತಿ ಇಲ್ಲಿ ಹೇಗೆ ಶವವಾದ ಎಂಬುದು ಪೊಲೀಸರ ನಿದ್ದೆಗೆಡಿಸಿದೆ. ವಿಜಯಪುರದ ಫೋರೆನ್ಸಿಕ್ ತಜ್ಞರ ತಂಡ ಹೆಚ್ಚಿನ ಪರಿಶೀಲನೆ ನಡೆಸಿದೆ.