ಪಾಲಕ್ಕಾಡ್: ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದ ನಾಲ್ವರು ವಿದ್ಯಾರ್ಥಿನಿಯರ ಮೇಲೆ ಲಾರಿಯೊಂದು ಉರುಳಿ ಬಿದ್ದು ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ಪಾಲಕ್ಕಾಡಿನಲ್ಲಿ ಗುರುವಾರ (ಡಿ.12 ರಂದು) ನಡೆದಿದೆ.
ಕೋಝಿಕ್ಕೋಡ್-ಪಾಲಕ್ಕಾಡ್ ರಾಜ್ಯ ಹೆದ್ದಾರಿ ಪನಯಂಪದಂನ ಕಲ್ಲಡಿಕೋಡ್ ನಲ್ಲಿ ಸಂಜೆ 4 ಗಂಟೆ ವೇಳೆಗೆ ಈ ಘಟನೆ ನಡೆದಿರುವುದಾಗಿ ʼ ಮಾತೃಭೂಮಿʼ ವರದಿ ಮಾಡಿದೆ.
ಶಾಲೆ ಮುಗಿಸಿ ನಾಲ್ವರು ವಿದ್ಯಾರ್ಥಿನಿಯರು ಮನೆಗೆ ವಾಪಾಸ್ ಆಗುತ್ತಿದ್ದರು. ಈ ವೇಳೆ ಕರಿಂಬಾ ಬಳಿ ಸಿಮೆಂಟ್ ಸಾಗಿಸುತ್ತಿದ್ದ ಲಾರಿ ಮತ್ತೊಂದು ಲಾರಿಗೆ ಡಿಕ್ಕಿ ಹೊಡೆದ ನಂತರ ಸ್ಕಿಡ್ ಆಗಿ ಮನೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಯರ ಮೇಲೆ ಪಲ್ಟಿಯಾಗಿ ಬಿದ್ದಿದೆ. ಪರಿಣಾಮ ಲಾರಿಯಡಿ ಬಿದ್ದು ನಾಲ್ವರು ಬಾಲಕಿಯರು ಪ್ರಾಣ ಕಳೆದುಕೊಂಡಿದ್ದಾರೆ.
ಮೃತ ವಿದ್ಯಾರ್ಥಿನಿಯರು ಕರಿಂಬಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಓದುತ್ತಿದ್ದರು ಎಂದು ವರದಿ ತಿಳಿಸಿದೆ. ಮೃತರ ಗುರುತು ಇನ್ನಷ್ಟೇ ಆಗಬೇಕಿದೆ ಎಂದು ವರದಿ ತಿಳಿಸಿದೆ.
ಅವೈಜ್ಞಾನಿಕ ಕಾಮಗಾರಿಯಿಂದ ಈ ಸ್ಥಳದಲ್ಲಿ ಅಪಘಾತಗಳು ಹೆಚ್ಚಾಗಿವೆ ಎಂದು ಸ್ಥಳೀಯರು ಹೇಳಿರುವುದಾಗಿ ವರದಿ ತಿಳಿಸಿದೆ.
ಅಪಘಾತದ ಬಳಿಕ ವಿದ್ಯಾರ್ಥಿಗಳು ಹಾಗೂ ನಿವಾಸಿಗಳು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ ಎನ್ನಕಾಗಿದೆ.