ರಾಮನಗರ: ಸ್ನೇಹಿತನನ್ನು ಕೊಲೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 50,000 ದಂಡ ವಿಧಿಸಿ ರಾಮನಗರ ಎರಡನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.
ಹಾರೋಹಳ್ಳಿ ತಾಲೂಕಿನ ಕೊಟ್ಟಗಾಳು ಗ್ರಾಮದಲ್ಲಿ 2018ರಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಅಣ್ಣಯ್ಯಪ್ಪ ಎಂಬಾತನನ್ನು ಸ್ನೇಹಿತರಾದ ಚಿಕ್ಕೇಗೌಡ ಹಾಗೂ ಕುಮಾರ್ ಎಂಬವರು ಕೊಲೆಗೈದಿದ್ದರು. ಚಿಕ್ಕೇಗೌಡ ಪತ್ನಿಯೊಂದಿಗೆ ಅಣ್ಣಯ್ಯಪ್ಪ ಅಸಭ್ಯವಾಗಿ ವರ್ತಿಸಿದ್ದ ಎಂಬ ವಿಚಾರಕ್ಕೆ ಗಲಾಟೆ ನಡೆದಿದ್ದು, ಗಲಾಟೆ ವಿಕೋಪಕ್ಕೆ ತಿರುಗಿ ಅಣ್ಣಯ್ಯಪ್ಪನಿಗೆ ಚಾಕು ಇರಿದು ಚಿಕ್ಕೇಗೌಡ ಹಾಗೂ ಕುಮಾರ್ ಕೊಲೆ ಮಾಡಿ ಎಸ್ಕೇಪ್ ಆಗಿದ್ದರು.
ಈ ಸಂಬಂಧ ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಕಾರ್ಯಾಚರಣೆ ನಡೆಸಿ ಅಪರಾಧಿಗಳನ್ನ ಬಂಧಿಸಲಾಗಿತ್ತು. ಈ ಸಂಬಂಧ ಕನಕಪುರ ಗ್ರಾಮಾಂತರ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.