“ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂಬುದನ್ನು ತಿರಸ್ಕರಿಸಿರುವ ಆದೇಶದಲ್ಲಿನ ಒಕ್ಕಣೆಯನ್ನು ಹಿಂಪಡೆಯಬೇಕು” ಎಂದು ಕೇಂದ್ರ ಸರ್ಕಾರ ಮಾಡಿದ ಮನವಿಯನ್ನು ಸೋಮವಾರ ಕರ್ನಾಟಕ ಹೈಕೋರ್ಟ್ ಮೌಖಿಕವಾಗಿ ತಿರಸ್ಕರಿಸಿತು.
ಭಾರತೀಯ ವೈದ್ಯಕೀಯ ಪದ್ಧತಿಯ ರಾಷ್ಟ್ರೀಯ ಆಯೋಗ ಕಾಯಿದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ರಾಜ್ಯ ಖಾಸಗಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳ ಸಂಸ್ಥೆಯ ಒಕ್ಕೂಟ 2022ರಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಪೀಠವು “ಕೇಂದ್ರ ಸರ್ಕಾರವು ಯಾಕೋ ಭಾರಿ ಕಷ್ಟ ಕೊಡುತ್ತಿದೆ. ಏನು ಸಮಸ್ಯೆಯಾಗುತ್ತಿದೆ. ಅವರೇಕೆ (ಅಧಿಕಾರಿಗಳು) ಆಕ್ಷೇಪಣೆಗೆ ಒಪ್ಪಿಗೆ ನೀಡುತ್ತಿಲ್ಲ” ಎಂದಿತು.
ಕೇಂದ್ರ ಸರ್ಕಾರದ ವಕೀಲ ಎಂ ಎನ್ ಕುಮಾರ್ ಅವರು “ಆಯುಷ್ ಇಲಾಖೆಯಲ್ಲಿ ಅಧಿಕಾರಿಗಳು ಬದಲಾವಣೆಯಾಗಿದ್ದಾರೆ. ಹೊಸ ಅಧಿಕಾರಿಗೆ ಆಕ್ಷೇಪಣೆಯ ಕರಡನ್ನು ಕಳುಹಿಸಿದ್ದೇನೆ. ಅದಕ್ಕೆ ಅವರು ಒಪ್ಪಿಗೆ ನೀಡಬೇಕು. ಕೇಂದ್ರ ಸರ್ಕಾರದ ವಕೀಲನಾಗಿ ಏಳು ವರ್ಷಗಳಲ್ಲಿ ಆಯುಷ್ ಇಲಾಖೆಯಲ್ಲಿ ಮಾತ್ರ ನನಗೆ ಸಮಸ್ಯೆಯಾಗುತ್ತಿದೆ. ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು” ಎಂದು ಮತ್ತೆ ಕೋರಿದರು.
ಆನಂತರ ಭಾರತೀಯ ವೈದ್ಯ ಪದ್ಧತಿಯ ರಾಷ್ಟ್ರೀಯ ಆಯೋಗವನ್ನು (ಎನ್ಸಿಐಎಸ್ಎಂ) ಪ್ರತಿನಿಧಿಸಿದ್ದ ವಕೀಲೆ ಮಾನಸಿ ಕುಮಾರ್ ಅವರು “ಎನ್ಸಿಐಎಸ್ಎಂ ಪರವಾಗಿ ಆಕ್ಷೇಪಣೆ ಸಲ್ಲಿಸಲಾಗಿದೆ. ಹೀಗಾಗಿ, ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂಬುದನ್ನು ತಿರಸ್ಕರಿಸಲಾಗಿದೆ ಎಂಬ ಆದೇಶದಲ್ಲಿನ ಒಕ್ಕಣೆಯನ್ನು ಹಿಂಪಡೆಯಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ವಿಕ್ರಮ್ ಹುಯಿಲಗೋಳ ಅವರು “ಎನ್ಸಿಐಎಸ್ಎಂ ಆಕ್ಷೇಪಣೆಗೆ ಪ್ರತ್ಯುತ್ತರ ದಾಖಲಿಸಲು ಎರಡು ವಾರ ಕಾಲಾವಕಾಶ ನೀಡಬೇಕು” ಎಂದು ಮನವಿ ಮಾಡಿದರು.
ಇದಕ್ಕೆ ಒಪ್ಪಿದ ಪೀಠವು ಎನ್ಸಿಐಎಸ್ಎಂ ಕೋರಿಕೆಯನ್ನು ಮನ್ನಿಸಿತು. ಕೇಂದ್ರ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಲು ಹಾಗೂ ಅರ್ಜಿದಾರರಿಗೆ ಪ್ರತ್ಯುತ್ತರ ದಾಖಲಿಸಲು ಸಮಯ ನೀಡಿ, ವಿಚಾರಣೆಯನ್ನು ಜನವರಿ 20ಕ್ಕೆ ಮುಂದೂಡಿತು.
ರಾಜ್ಯ ಖಾಸಗಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳ ಸಂಸ್ಥೆಯ ಒಕ್ಕೂಟವು ಕಾಯಿದೆಯ ಸೆಕ್ಷನ್ಗಳಾದ 3, 4, 10, 12, 14, 43, 44, 55 (2) (i) (ಎಂ) ಅಸಾಂವಿಧಾನಿಕ ಎಂದು ಘೋಷಿಸಬೇಕು ಎಂದು ಕೋರಿ ಮನವಿ ಮಾಡಲಾಗಿದೆ.