ಭಾರತದೆಲ್ಲೆಡೆ ಕಂಡುಬರುವ ನೆಲನೆಲ್ಲಿಯನ್ನು ಕಿರುನೆಲ್ಲಿಯೆಂದೂ ಕರೆಯಲಾಗುತ್ತದೆ. ಇದು ಕಳೆಗಿಡವಾಗಿದ್ದರೂ ಔಷಧೀಯ ಗುಣಗಳ ಭಂಡಾರವಾಗಿದೆ. ಮಳೆಗಾಲದಲ್ಲಿ ಅಧಿಕವಾಗಿ ಕಂಡುಬರುವಂತಹುದಾಗಿದೆ. ಇದು ಬೆಳೆದು 5ರಿಂದ 8 ತಿಂಗಳು ಆಯಸ್ಸು ಪಡೆದು ಜನಸಾಮಾನ್ಯನ ಕಾಯಿಲೆಗೆ ಔಷಧಿಯಾಗಿ ತನ್ನ ಜೀವನ ಮುಗಿಸುವ ಪುಟ್ಟ ಸಸ್ಯ.
ಸಸ್ಯವರ್ಣನೆ
ನೆಲನೆಲ್ಲಿಯ ಎಲೆಗಳು ಚಿಕ್ಕದಾಗಿದ್ದು ನೆಲ್ಲಿಗಿಡದ ಎಲೆಗಳನ್ನೇ ಹೋಲುತ್ತವಾದ್ದರಿಂದ ಮತ್ತು ಹಣ್ಣುಗಳು ಪುಟ್ಟದಾಗಿದ್ದು ಚಿಕ್ಕಚಿಕ್ಕ ಎಲೆಗಳ ಹಿಂಬದಿಯಲ್ಲಿ ಜೋಡಣೆಗೊಂಡಿದ್ದು ನೆಲ್ಲಿಕಾಯಿಯಂತೆ ಕಾಣುತ್ತವಾದ್ದರಿಂದ ನೆಲನೆಲ್ಲಿ ಎನ್ನುವ ಹೆಸರು ಬಂದಿದೆ. ನೆಲನಲ್ಲಿ (ಫಿಲಾಂತಸ್ ಅಮರಸ್)ಯು ಯುಫೋರ್ಬಿಯೇಸಿ ಕುಟುಂಬಕ್ಕೆ ಸೇರಿದೆ. ಸಣ್ಣ ಮೂಲಿಕೆ ಜಾತಿಗೆ ಸೇರಿದ, ಒಂದು ಅಡಿ ಎತ್ತರ ಬೆಳೆಯುವ ಪುಟ್ಟ ಏಕವಾರ್ಷಿಕ ಸಸ್ಯ, ಕಾಂಡವು ಮೃದುವಾಗಿದ್ದು, ಕೆಂಪು ಮಿಶ್ರಿತ ಹಸಿರು ಬಣ್ಣದಲ್ಲಿದೆ. ಕಾಂಡದ ಮೇಲೆ ಅರ್ಧ ಅಂಗುಲ ಅಂತರದಲ್ಲಿ ಹಸಿರು ಬಣ್ಣದ ಎಲೆಗಳು ಪರ್ಯಾಯವಾಗಿ ಜೋಡಣೆಗೊಂಡಿರುತ್ತವೆ. ಎಲೆ ಕಂಕುಳಲ್ಲಿ ಹಸಿರು ಮಿಶ್ರಿತ ಹಳದಿ ಬಣ್ಣದ ಹೂಗಳು ಕಾಣಿಸಿಕೊಳ್ಳುತ್ತವೆ. ಕಾಯಿ ಹಸಿರು ಬಣ್ಣದ್ದಾಗಿದ್ದು ಸಾಸಿವೆ ಗಾತ್ರದಷ್ಟು ಇರುತ್ತದೆ.
ಮಣ್ಣು
ಈ ಸಸ್ಯವು ಎಲ್ಲಾ ವಿಧವಾದ ಮಣ್ಣುಗಳಲ್ಲಿ ಬೆಳೆಯಬಹುದಾದರೂ, ನೀರು ಬಸಿದು ಹೋಗುವ ಗೋಡು ಮಣ್ಣಿನಲ್ಲಿ ಉತ್ತಮವಾಗಿ ಬೆಳೆಯಲು ಸಾಧ್ಯ.
ಹವಾಗುಣ
ಈ ಸಸ್ಯವು ಉಷ್ಣವಲಯ ಮತ್ತು ಅತಿ ಹೆಚ್ಚಿನ ಮಳೆಯಾಗುವ ಪ್ರದೇಶಗಳಲ್ಲಿ ಕಾಣುತ್ತದೆ. ಅತಿ ಒಣಪ್ರದೇಶ ಮತ್ತು ನೀರು ನಿಂತ ಪ್ರದೇಶಗಳು ಈ ಸಸ್ಯಕ್ಕೆ ಲಾಭದಾಯಕವಲ್ಲ.
ತಳಿಗಳು
ನವಕ್ರೀತ್.
ಬೇಸಾಯ ಕ್ರಮಗಳು
ಈ ಸಸ್ಯವನ್ನು ಬೀಜದಿಂದ ವೃದ್ಧಿ ಮಾಡಬಹುದಾಗಿದೆ. ಸಸಿಗಳನ್ನುಮೊದಲು ಸಸಿಮಡಿಗಳಲ್ಲಿ ಬೆಳೆಸಬೇಕು. ಬೀಜವು ಅತಿ ಸಣ್ಣವಾದ್ದರಿಂದ ಬೀಜದೊಂದಿಗೆ ಮರಳು ಬೆರೆಸಿ ಸಸಿ ಮಂಡಿಯಲ್ಲಿ ಸಮಾನವಾಗಿ ಹರಡಿ ಬಿಟ್ಟಬಹುದು ಏಪ್ರಿಲ್ ಕೊನೆಯ ವಾರದಿಂದ ಮೇ ಕೊನೆಯ ವಾರದವರೆಗೆ ಬೀಜ ಬಿತ್ತಲು ಸೂಕ್ತ ಸಮಯ.
ಸಾಮಾನ್ಯವಾಗಿ35ರಿಂದ 40 ದಿನಗಳ 10-15ಸೆಂ. ಮಿ. ಎತ್ತರದ ಶಶಿಗಳನ್ನು 15×10 ಸೆಂ. ಮಿ. ಅಂತರದಲ್ಲಿ ನಾಟಿ ಮಾಡಬೇಕು. ನಾಟಿ ಮಾಡಿದ ತಕ್ಷಣ ನೀರು ಹಾಯಿಸುವುದರಿಂದ ಸಸಿಗಳು ಬಾಡುವುದು ಅಥವಾ ಬಾಗುವುದು ಅತಿ ಕಡಿಮೆ.”
ನೀರಾವರಿ
ಸಾಮಾನ್ಯವಾಗಿ ಮಳೆ ಚೆನ್ನಾಗಿ ಬರುವ ಪ್ರದೇಶದಲ್ಲಿ ನೀರಿನ ಅವಶ್ಯಕತೆ ಇರುವುದಿಲ್ಲ. ಆದರೂ ಹವಾಗುಣಕ್ಕೆ ತಕ್ಕಂತೆ ನೀರು ರಿ ಕೊಟ್ಟಲ್ಲಿ ಉತ್ತಮ ಇಳುವರಿ ಪಡೆಯಲು ಸಾಧ್ಯ.
ಕಳೆ ಹತೋಟಿ
ಸಸ್ಯವು ಸಣ್ಣದಾಗಿದ್ದು ಹಾಗೂ ಮೃದುವಾದ್ದರಿಂದ ಕಳೆ ಬೆಳೆಯುವಿಕೆ ಸಹಜ ಕಳೆಯನ್ನು 15 ದಿವಸಕ್ಕೊಮ್ಮೆ ತೆಗೆದರೆ ಒಳ್ಳೆಯದು.
ಕೀಟ ಮತ್ತು ರೋಗಗಳು
ಎಲೆ ತಿನ್ನುವ ಹುಳು ಮತ್ತು ಕಾಂಡ ಕೀಟಗಳು ಕಂಡುಬರುತ್ತದೆ ಹಾಗೂ ಬೂದು ರೋಗವು ಸಹ ಈ ಸಸ್ಯಕ್ಕೆಹಾನಿಯುಂಟುಮಾಡುತ್ತದೆ.
ಇದನ್ನು ಬೇವಿನ ಹಿಂಡಿಯ ಕಷಾಯವನ್ನು ಸಿಂಪಡಿಸುವುದರಿಂದ ಕೀಟದ ಹಾವಳಿಯನ್ನು ತಡೆಯಬಹುದು.
ಕೊಯ್ದು ಮತ್ತು ಇಳುವರಿ
ಬೆಳೆಯು ನಾಟಿ ಮಾಡಿದ ನಂತರ ಮೂರು ತಿಂಗಳಲ್ಲಿ ಕಟಾವಿಗೆ ಸಿದ್ಧವಾಗುತ್ತದೆ. ಸಸಿಯು ಹಸಿರಾಗಿರುವಾಗಲೆ ಕಟಾವು ಮಾಡಬಹುದು ತಡವಾಗಿ ಕೊಯ್ದು ಮಾಡಿದಲ್ಲಿ ಗುಣಮಟ್ಟ ಹೆಚ್ಚುತ್ತಾದರೂ ಕಳೆ ಎಲೆ ಉದುರುವುದರಿಂದ ಇಳುವರಿ ಕಡಿಮೆಯಾಗುವ ಸಾಧ್ಯತೆ ಹೆಚ್ಚು ಒಂದು ಚ.ಮೀಟರ್ ಪ್ರದೇಶದಿಂದ 200 ಗ್ರಾಂ ಒಣ ಸಸ್ಯದ ಇಳುವರಿಯನ್ನು ಪಡೆಯಬಹುದು.
ಉಪಯುಕ್ತ ಭಾಗಗಳು
ನೆಲನೆಲ್ಲಿ ಗಿಡದ ಸಮಗ್ರ ಭಾಗಗಳು ಔಷಧೀಯ ಗುಣ ಹೊಂದಿವೆ. ಎಲೆ, ಕಾಂಡ, ಹೂ, ಹಣ್ಣು ಮತ್ತು ಬೇರು ಎಲ್ಲವೂ ಉಪಯುಕ್ತವಾಗಿವೆ.
ರಾಸಾಯನಿಕ ಘಟಕಗಳು
ಫೈಲ್ಲಾಂಥಿನ್ ಮತ್ತು ಹೈಪೋಫೈಲ್ಲಾಂಥಿನ್ ಎಂಬ ಸಸ್ಯಕ್ಷಾರಗಳಿವೆ.