ಮನೆ ರಾಜಕೀಯ ಬೆಳಗಾವಿ ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ:100 ಕಡೆ 100 ಶ್ರೀಗಂಧದ ಸಸಿ ನೆಡುವ ಕಾರ್ಯಕ್ರಮ: ಈಶ್ವರ ಖಂಡ್ರೆ

ಬೆಳಗಾವಿ ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ:100 ಕಡೆ 100 ಶ್ರೀಗಂಧದ ಸಸಿ ನೆಡುವ ಕಾರ್ಯಕ್ರಮ: ಈಶ್ವರ ಖಂಡ್ರೆ

0

ಬೆಳಗಾವಿ: ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಅಧ್ಯಕ್ಷತೆಯಲ್ಲಿ 1924 ರಲ್ಲಿ ನಡೆದಿದ್ದ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಅಂಗವಾಗಿ ಬೆಳಗಾವಿಯ 100 ಕಡೆ ತಲಾ 100 ಶ್ರೀಗಂಧದ ಸಸಿ ನೆಡಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.

Join Our Whatsapp Group

ಅರಣ್ಯಾಧಿಕಾರಿಗಳೊಂದಿಗೆ ಸುವರ್ಣಸೌಧದ 318ನೇ ಕೊಠಡಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಅರಣ್ಯ ಇಲಾಖೆ ಕೂಡ ಈ ಶತಮಾನೋತ್ಸವವನ್ನು ಸ್ಮರಣೀಯಗೊಳಿಸಲು ಬೆಳಗಾವಿ ಜಿಲ್ಲೆಯ ಆಯ್ದ 100 ಸ್ಥಳಗಳಲ್ಲಿ  ತಲಾ 100 ಅಂದರೆ 10 ಸಾವಿರ ಶ್ರೀಗಂಧದ ಸಸಿಗಳನ್ನು ನೆಟ್ಟು ಪೋಷಿಸಲು ತೀರ್ಮಾನಿಸಿದೆ. ಇದರ ಜೊತೆಗೆ ರಾಜ್ಯದಲ್ಲಿ ನಡೆಯಲಿರುವ ವನಮಹೋತ್ಸವದ ವೇಳೆ ನೆಡಲು ಉದ್ದೇಶಿಸಿರುವ 2 ಕೋಟಿ ಸಸಿಗಳ ಜೊತೆಗೆ ಹೆಚ್ಚುವರಿಯಾಗಿ ಶತಮಾನೋತ್ಸವದ ಸ್ಮರಣಾರ್ಥ 10 ಲಕ್ಷ ಸಸಿಗಳನ್ನು ನಡೆಲಾಗುವುದು ಎಂದರು.

ಶ್ರೀಗಂಧ ನಮ್ಮ ನಾಡಿನ ಅಸ್ಮಿತೆ. ಕನ್ನಡನಾಡಿಗೆ ಗಂಧದಗುಡಿ ಎಂಬ ಖ್ಯಾತಿ ಇದೆ. ಶ್ರೀಗಂಧದ ಮರಕ್ಕೆ ಬಂಗಾರದ ಬೆಲೆ ಇದೆ. ಹೀಗಾಗಿ ಮರಗಳ ಕಳ್ಳತನ ಆಗದಂತೆ ಸುರಕ್ಷಿತವಾದ 100 ಸ್ಥಳಗಳನ್ನು ಆಯ್ಕೆ ಮಾಡಿ, ಪ್ರತಿ ತಾಣದಲ್ಲಿ 100 ಶ್ರೀಗಂಧದ ಸಸಿ ನೆಟ್ಟು ಬೆಳೆಸಿ, ರಕ್ಷಿಸಲಾಗುವುದು ಎಂದು ವಿವರಿಸಿದರು.

ಶ್ರೀಗಂಧದ ಸಸಿಗಳನ್ನು ನೆಡುವ ತಾಣಗಳಲ್ಲಿ ಮಹಾತ್ಮಾಗಾಂಧೀಜಿ ಅವರು 1924ರಲ್ಲಿ ಬೆಳಗಾವಿ ಅಧಿವೇಶನದಲ್ಲಿ ಭಾಗಿಯಾಗಿದ್ದ ಛಾಯಾಚಿತ್ರಗಳು ಮತ್ತು ಅಧಿವೇಶನದ ಸಂಕ್ಷಿಪ್ತ ವಿವರವನ್ನು ಪ್ರದರ್ಶಿಸಲಾಗುವುದು.ಇದರಿಂದ ಇಂದಿನ ಪೀಳಿಗೆಗೆ ಮತ್ತು ಮುಂದಿನ ಪೀಳಿಗೆಗೆ ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಮಹತ್ವದ ತಿಳಿಯುತ್ತದೆ. ಜೊತೆಗೆ ಶ್ರೀಗಂಧದ ಬೀಡು, ಗಂಧದಗುಡಿ ಎಂಬ ಖ್ಯಾತಿ ಚಾಮರಾಜನಗರದಿಂದ ಬೆಳಗಾವಿಯವರೆಗೆ ಚಿರಸ್ಥಾಯಿಯಾಗುತ್ತದೆ ಎಂದು ಈಶ್ವರ ಖಂಡ್ರೆ ಹೇಳಿದರು.