ಮನೆ ರಾಜ್ಯ ಪಠ್ಯಪುಸ್ತಕ ಪರಿಷ್ಕರಣೆ: ಸಚಿವ ಬಿ.ಸಿ.ನಾಗೇಶ್‌ ರಿಂದ ಸಿಎಂ ಬೊಮ್ಮಾಯಿಗೆ ವರದಿ ಸಲ್ಲಿಕೆ

ಪಠ್ಯಪುಸ್ತಕ ಪರಿಷ್ಕರಣೆ: ಸಚಿವ ಬಿ.ಸಿ.ನಾಗೇಶ್‌ ರಿಂದ ಸಿಎಂ ಬೊಮ್ಮಾಯಿಗೆ ವರದಿ ಸಲ್ಲಿಕೆ

0

ಬೆಂಗಳೂರು (Bengaluru)-ಪಠ್ಯಪುಸ್ತಕ ಪರಿಷ್ಕರಣೆ ಕುರಿತ ವಿವಿಧ ಆರೋಪಗಳಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಸ್ಪಷ್ಟನೆ ನೀಡಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನೀಡಿದ ನಾಲ್ಕು ಪುಟಗಳ ವರದಿಯಲ್ಲಿ ನಾಗೇಶ್‌ ಅವರು 13 ಅಂಶಗಳ ಸ್ಪಷ್ಟೀಕರಣವನ್ನು ನೀಡಿದ್ದಾರೆ. ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ವಿಸರ್ಜಿಸಿದ್ದರೂ, ಹಲವಾರು ಅಧ್ಯಾಯಗಳು ಮತ್ತು ವಿಷಯಗಳನ್ನು ಪಠ್ಯಪುಸ್ತಕಗಳಲ್ಲಿ ಉಳಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. 

1ರಿಂದ 10ನೇ ತರಗತಿವರೆಗಿನ ಕನ್ನಡದ 15 ಪಠ್ಯಪುಸ್ತಕಗಳು, 6ರಿಂದ 10ನೇ ತರಗತಿವರೆಗೆ ಸಮಾಜ ವಿಜ್ಞಾನದ ಐದು ಪಠ್ಯಪುಸ್ತಕಗಳನ್ನು ಸಮಿತಿಯು ಪರಿಷ್ಕರಿಸಿದೆ ಎಂದು ನಾಗೇಶ್ ಸ್ಪಷ್ಟಪಡಿಸಿದ್ದಾರೆ. 

ತೃತೀಯ ಭಾಷೆಯಲ್ಲಿ ನಾಲ್ಕನ್ನು ಪರಿಷ್ಕರಿಸಲಾಯಿತು. ಒಟ್ಟಾರೆಯಾಗಿ ಪ್ರಥಮ ಭಾಷೆಯಲ್ಲಿ 165 ಅಧ್ಯಾಯಗಳು/ಕವನಗಳು, ದ್ವಿತೀಯ ಭಾಷೆಯಲ್ಲಿ 162, ತೃತೀಯ ಭಾಷೆಯಲ್ಲಿ 94 ಅಧ್ಯಾಯಗಳನ್ನು ಪಠ್ಯ ಪುಸ್ತಕಗಳಳ್ಲಿ ಉಳಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. 

ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಷ್ಕೃತ ಪಠ್ಯಪುಸ್ತಕಗಳ ಮುದ್ರಣವನ್ನು ನಿಲ್ಲಿಸುವುದಿಲ್ಲ, ಪಠ್ಯಪುಸ್ತಕಗಳ ಮರುಮುದ್ರಣ ಮಾಡುವುದಿಲ್ಲ. ಪಠ್ಯಪುಸ್ತಕಗಳ ವಿತರಣೆಯಲ್ಲಿ ಯಾವುದೇ ವಿಳಂಬವಾಗುವುದಿಲ್ಲ ಮತ್ತು ಮರು ಪರಿಷ್ಕರಣೆಯಿಂದಾಗಿ ಶಾಲಾ ಶಿಕ್ಷಣದ ಮೇಲೆ ಪರಿಣಾಮ ಬೀರುವುದಿಲ್ಲ. ಪಠ್ಯಪುಸ್ತಕಗಳ ಮರುಮುದ್ರಣ ಮಾಡುವುದಿಲ್ಲ ಎಂದು ಹೇಳಿದ್ದಾರೆ. 

9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿರುವ 12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರ ಕುರಿತಾದ ವಿಷಯವನ್ನು ಮಾತ್ರ ಮರುಪರಿಶೀಲನೆಗೆ ಪರಿಗಣಿಸಲಾಗಿರುವುದರಿಂದ ಪಠ್ಯಪುಸ್ತಕಗಳನ್ನು ಮರುಮುದ್ರಣ ಮಾಡಲಾಗುವುದಿಲ್ಲ. ಬಸವಣ್ಣನವರ ಪರಿಷ್ಕೃತ ವಿಷಯದ ಪ್ರತ್ಯೇಕ ಕಿರುಪುಸ್ತಕವನ್ನು ಮಾತ್ರ ಮುದ್ರಿಸಿ ಪಠ್ಯಪುಸ್ತಕಗಳೊಂದಿಗೆ ಶಾಲೆಗಳಿಗೆ ವಿತರಿಸಲಾಗುವುದು ಎಂದು ತಿಳಿಸಿದರು.

ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯನ್ನು ವಿಸರ್ಜಿಸಲಾಗಿದ್ದು, ಬಸವಣ್ಣನವರ ವಿಷಯ ಮರು ಪರಿಷ್ಕರಣೆ ಮೇಲ್ವಿಚಾರಣೆಗೆ ಯಾವುದೇ ಹೊಸ ಸಮಿತಿಯನ್ನು ರಚಿಸುವುದಿಲ್ಲ ಎಂದು ನಾಗೇಶ್ ಪುನರುಚ್ಚರಿಸಿದರು. 

ರಾಜ್ಯ ಸರ್ಕಾರವು ಕೆಲವು ತಜ್ಞರನ್ನು ಸಂಪರ್ಕಿಸಲು ಚಿಂತನೆ ನಡೆಸಿದೆ. ಆದರೆ, ತಜ್ಞರ ಹೆಸರನ್ನು ಬಹಿರಂಗಪಡಿಸುವುದಿಲ್ಲ ಎಂದು ತಿಳಿಸಿದ್ದಾರೆ. 

ಶುಕ್ರವಾರ ರಾತ್ರಿಯವರೆಗೆ ಶೇ.79.70ರಷ್ಟು ಪಠ್ಯಪುಸ್ತಕಗಳನ್ನು ಮುದ್ರಿಸಲಾಗಿದ್ದು, ಶೇ.66.98ರಷ್ಟು ಪಠ್ಯಪುಸ್ತಕಗಳನ್ನು ಶಾಲೆಗಳಿಗೆ ವಿತರಿಸಲಾಗಿದೆ. ಹದಿನೈದು ದಿನದೊಳಗೆ ಮುದ್ರಣ ಮತ್ತು ವಿತರಣೆ ಪ್ರಕ್ರಿಯೆ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ. 

ಇತ್ತೀಚಿನ ಮರು-ಪರಿಷ್ಕರಣೆಯೊಂದಿಗೆ ಪಠ್ಯಪುಸ್ತಕಗಳ ಮರುಮುದ್ರಣ ಮಾಡುವುದು ಎಂದರೆ ನಡೆಯುತ್ತಿರುವ ಮುದ್ರಣವನ್ನು ನಿಲ್ಲಿಸಬೇಕಿದೆ. ಇದು ಶಾಲೆಗಳ ಮೇಲೆ ಪರಿಣಾಮ ಬೀರಲಿದೆ. 

ಚಕ್ರತೀರ್ಥ ನೇತೃತ್ವದ ಸಮಿತಿಯ ಪರಿಷ್ಕೃತ ಪಠ್ಯಪುಸ್ತಕಗಳಲ್ಲಿ ತಮ್ಮ ವಿಷಯವನ್ನು ಸೇರಿಸಲು ಲೇಖಕರು ತಮ್ಮ ಅನುಮತಿಯನ್ನು ಹಿಂಪಡೆದಿರುವ ವಿಷಯದ ಕುರಿತು ಮಾತನಾಡಿದ ಸಚಿವರು, “ಅನುಮತಿ ಹಿಂಪಡೆಯಲು ಕೋರಿರುವ 14 ಲೇಖಕರ ಪೈಕಿ ಏಳು ಲೇಖಕರ ಅಧ್ಯಾಯಗಳು/ಕವನಗಳನ್ನು ಮಾತ್ರ ಮುದ್ರಿಸಲಾಗಿದೆ. ಉಳಿದವರು ಸುಮ್ಮನೆ ಹೇಳಿಕೆ ನೀಡಿದ್ದಾರೆ. ಆದರೆ, ಈ ಏಳು ಲೇಖಕರಲ್ಲಿ ಯಾರೂ ತಮ್ಮ ಒಪ್ಪಿಗೆ ನೀಡಿದ ನಂತರ ಕಾನೂನುಬದ್ಧವಾಗಿ ಅನುಮತಿಯನ್ನು ಹಿಂಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಅವರ ಪಾಠಗಳನ್ನು ಕೈಬಿಡುವ ಅಥವಾ ಪಠ್ಯಪುಸ್ತಕಗಳನ್ನು ಮತ್ತೆ ಮುದ್ರಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ಪಠ್ಯಪುಸ್ತಕಗಳು ಈಗಾಗಲೇ ಮುದ್ರಣಗೊಂಡಿರುವಾಗ ಮತ್ತು ಕಳೆದ ವರ್ಷವೇ ಸಲ್ಲಿಸಲಾದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ವರದಿಯ ಬಗ್ಗೆ ಅವರಿಗೆ ಚೆನ್ನಾಗಿ ತಿಳಿದಿತ್ತು. ಈ ಸಂದರ್ಭದಲ್ಲಿ ಈ ರೀತಿ ಮಾಡಬಾರದಿತ್ತು. ಆದರೂ, ನಾವು ಈಗಾಗಲೇ ಸಾಹಿತಿ ದೇವನೂರು ಮಹಾದೇವ ಅವರಿಗೆ ಪತ್ರ ಬರೆದಿದ್ದು, ಉಳಿದ ಆರು ಲೇಖಕರಿಗೆ ಅವರ ಗೌರವಾರ್ಥವಾಗಿ ಪತ್ರ ಬರೆಯಲಾಗುತ್ತದೆ ಎಂದಿದ್ದಾರೆ. 

ಇದೇ ವೇಳೆ ಆರ್‌ಎಸ್‌ಎಸ್ ಸಂಸ್ಥಾಪಕ ಕೆ.ಬಿ.ಹೆಡಗೇವಾರ್ ಪಾಠವನ್ನು ಪಠ್ಯ ಪುಸ್ತಕದಿಂದ ತೆಗೆದುಹಾಕಬೇಕೆಂಬ ವಿಪಕ್ಷಗಳ ಬೇಡಿಕೆಯನ್ನು ಸಿಎಂ ಬೊಮ್ಮಾಯಿ ತಿರಸ್ಕರಿಸಿದರು. ಪಾಠವನ್ನು ಉಳಿಸಿಕೊಳ್ಳುವುದರಲ್ಲಿ ತಪ್ಪೇನಿಲ್ಲ ಎಂದು ಹೇಳಿದ್ದಾರೆ.  

ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯನ್ನು ರದ್ದುಗೊಳಿಸಲಾಗಿದೆಯೇ ಅಥವಾ ವಿಸರ್ಜಿಸಲಾಗಿದೆಯೇ ಎಂಬುದರ ಕುರಿತು ಮಾತನಾಡಿ, ಸಮಿತಿಯ ಕೆಲಸ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅದನ್ನು ವಿಸರ್ಜಿಸಲಾಗಿದೆ, ಹೊಸ ಸಮಿತಿಯನ್ನು ರಚಿಸುವ ಅಗತ್ಯವಿಲ್ಲ ಎಂದು ಹೇಳಿದರು. 

ಚಕ್ರತೀರ್ಥ ಸಮಿತಿಯು ವಾಸ್ತವದ ಆಧಾರದ ಮೇಲೆ ನಿರ್ಧಾರ ಕೈಗೊಂಡಿದೆಯೇ ಹೊರತು ಸ್ವಾಮೀಜಿಗಳ ಒತ್ತಡದಿಂದಲ್ಲ, ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ಮಾಡಿದ ಬಸವಣ್ಣನವರ ಪಠ್ಯಕ್ಕೂ ಈಗಿನದ್ದಕ್ಕೂ ಹೆಚ್ಚಿನ ವ್ಯತ್ಯಾಸವಿಲ್ಲ ಎಂದು ತಿಳಿಸಿದರು.

ಹೊಸ ಪಠ್ಯಪುಸ್ತಕದಲ್ಲಿ ಒಂದು ವಾಕ್ಯದಲ್ಲಿ ವ್ಯತ್ಯಾಸವಿದ್ದು ಅದನ್ನು ಸರಿಪಡಿಸಲಾಗುವುದು. ತಮ್ಮ ಸರ್ಕಾರ ಬಸವ ಪಥದಲ್ಲಿ ನಡೆಯುತ್ತಿದ್ದು, ಹೊಸ ಪಠ್ಯಪುಸ್ತಕಗಳಲ್ಲಿ ಉತ್ತಮ ವಚನಗಳನ್ನು ಅಳವಡಿಸಲಾಗಿದೆ, ಈ ಬಗ್ಗೆ ಸ್ವಾಮೀಜಿಗಳು ಹಾಗೂ ಇತರೆ ಸಂಬಂಧಪಟ್ಟವರೊಂದಿಗೆ ಎಂದು ಹೇಳಿದರು. 

ಪಿಯು-II ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಒಂದು ಅಧ್ಯಾಯವನ್ನು ಪರಿಷ್ಕರಿಸಲು ಯೋಜಿಸಿದ್ದರೂ ಅದಕ್ಕೂ ಆಕ್ಷೇಪಣೆಗಳು ಕೇಳಿ ಬಂದಿರುವುದರಿಂದ, ಸದ್ಯಕ್ಕೆ ಈ ಆಲೋಚನೆಯನ್ನು ಕೈಬಿಡಲು ಯೋಜಿಸಲಾಗಿದೆ ಎಂದು ಸಚಿವ ನಾಗೇಶ್ ಹೇಳಿದರು.