ಮನೆ ಕಾನೂನು ನ್ಯಾ. ಯಾದವ್ ಭಾಷಣಕ್ಕೆ ಬೆಂಬಲ: ಸಿಎಂ ಯೋಗಿ ಪದಚ್ಯುತಿ ಕೋರಿ ಅಲಾಹಾಬಾದ್ ಹೈಕೋರ್ಟ್‌ಗೆ ಅರ್ಜಿ

ನ್ಯಾ. ಯಾದವ್ ಭಾಷಣಕ್ಕೆ ಬೆಂಬಲ: ಸಿಎಂ ಯೋಗಿ ಪದಚ್ಯುತಿ ಕೋರಿ ಅಲಾಹಾಬಾದ್ ಹೈಕೋರ್ಟ್‌ಗೆ ಅರ್ಜಿ

0

ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಕಾರ್ಯಕ್ರಮವೊಂದರಲ್ಲಿ ಅಲಾಹಾಬಾದ್ ಹೈಕೋರ್ಟ್‌ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರು ಇತ್ತೀಚೆಗೆ ಮುಸ್ಲಿಂ ಸಮುದಾಯದ ವಿರುದ್ಧ ಮಾಡಿದ ಅವಹೇಳನಕಾರಿ ಹೇಳಿಕೆಗಳನ್ನು ಸಾರ್ವಜನಿಕವಾಗಿ ಬೆಂಬಲಿಸಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಪದಚ್ಯುತಿ ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.

Join Our Whatsapp Group

ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ಸಲ್ಲಿಸಿದ ಮನವಿಯ ಪ್ರಕಾರ, ಆದಿತ್ಯನಾಥ್ ಅವರ ಹೇಳಿಕೆಗಳು ಭಾರತ ಗಣರಾಜ್ಯದ ಜಾತ್ಯತೀತ ಸ್ವರೂಪವನ್ನು ದುರ್ಬಲಗೊಳಿಸುತ್ತವೆ.

ಡಿಸೆಂಬರ್ 14 ರಂದು ಮುಂಬೈನಲ್ಲಿ ನಡೆದ ವಿಶ್ವ ಹಿಂದೂ ಆರ್ಥಿಕ ವೇದಿಕೆ- 2024 ಕಾರ್ಯಕ್ರಮದಲ್ಲಿ ಮಾತನಾಡಿದ ಆದಿತ್ಯನಾಥ್, ನ್ಯಾ. ಯಾದವ್ ಅವರಿಗೆ ವಾಗ್ದಂಡನೆ ವಿಧಿಸಲು ಪ್ರತಿಪಕ್ಷಗಳು ಯತ್ನಿಸುತ್ತಿರುವುದನ್ನು ಟೀಕಿಸಿದ್ದರು .

ಅಲ್ಲದೆ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಮಾತನಾಡುವ ವೇಳೆಯೂ ಯೋಗಿ ಅವರು ನ್ಯಾ. ಯಾದವ್‌ ಅವರ ಹೇಳಿಕೆಗಳನ್ನು ಮತ್ತೆ ಬೆಂಬಲಿಸಿದ್ದರು. ನ್ಯಾಯಾಧೀಶರು ಸತ್ಯ ಹೇಳಿದಾಗ ಕೆಲ ವ್ಯಕ್ತಿಗಳು ಬೆದರಿಕೆ ಹಾಕುತ್ತಾರೆ ಎಂದಿದ್ದರು.

ಹೀಗೆ ನ್ಯಾ. ಯಾದವ್‌ ಅವರಿಗೆ ಸಿಎಂ ಆದಿತ್ಯನಾಥ್‌ ನೀಡುತ್ತಿರುವ ಬೆಂಬಲ ಸಂವಿಧಾನಕ್ಕೆ ಅವರು ತೋರುವ ನಿಷ್ಠೆಯನ್ನು ನಂಬಿಕೆಯನ್ನು ದುರ್ಬಲಗೊಳಿಸುವುದರಿಂದ ಅವರು ಮುಖ್ಯಮಂತ್ರಿಯಾಗಿ ಸ್ವೀಕರಿಸಿದ ಪ್ರಮಾಣವಚನದ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ಪಿಯುಸಿಎಲ್‌ ತನ್ನ ಅರ್ಜಿಯಲ್ಲಿ ತಿಳಿಸಿದೆ.

ಅವರ ಹೇಳಿಕೆಗಳು ಸಂವಿಧಾನದ ಸ್ಪಷ್ಟ ಉಲ್ಲಂಘನೆಯಾಗಿದ್ದು, ಉತ್ತರ ಪ್ರದೇಶದ ಮುಖ್ಯಮಂತ್ರಿ ಹುದ್ದೆಯಿಂದ ವಜಾಗೊಳಿಸಲು ಅವರನ್ನು ಅರ್ಹರನ್ನಾಗಿಸಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ವಕೀಲೆ ಸೀಮಾ ಶ್ರೀವಾಸ್ತವ ಅವರು ಪಿಯುಸಿಎಲ್ ಪರವಾಗಿ ಹಾಜರಾಗಲಿದ್ದಾರೆ.

ನ್ಯಾಯಮೂರ್ತಿ ಯಾದವ್ ಅವರು ಡಿಸೆಂಬರ್ 8 ರಂದು ಹಿಂದೂ ಬಲಪಂಥೀಯ ಸಂಘಟನೆಯಾದ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಕಾನೂನು ಕೋಶ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾಡಿದ ಭಾಷಣ ವಿವಾದಕ್ಕೆ ಗುರಿಯಾಗಿತ್ತು.

ಏಕರೂಪ ನಾಗರಿಕ ಸಂಹಿತೆ ಕುರಿತಂತೆ ನೀಡಿದ್ದ ಉಪನ್ಯಾಸದ ವೇಳೆ ಅವರು ಬಹುಸಂಖ್ಯಾತರ ಆಶಯದಂತೆ ಭಾರತ ಕೆಲಸ ಮಾಡಲಿದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅಲ್ಲದೆ ಮುಸ್ಲಿಮರ ವಿರುದ್ಧ ಅವಹೇಳನಕಾರಿಯಾದ ಕಠ್‌ಮುಲ್ಲಾ ಎಂಬ ಪದ ಕೂಡ ಬಳಸಿದ್ದರು.

ನಂತರ ಸುಪ್ರೀಂ ಕೋರ್ಟ್ ಕೊಲಿಜಿಯಂ ಅವರಿಗೆ ಸಮನ್ಸ್ ನೀಡಿತ್ತು. ತನ್ನ ಮುಂದೆ ಹಾಜರಾಗಿದ್ದ ಯಾದವ್‌ ಅವರಿಗೆ ಹೈಕೋರ್ಟ್‌ ನ್ಯಾಯಮೂರ್ತಿ ಹುದ್ದೆಯ ಘನತೆ ಕಾಪಾಡುವಂತೆ ಅವರಿಗೆ ಸೂಚಿಸಿತ್ತು.