ಬೆಂಗಳೂರು: ಟಿ.ದಾಸರಹಳ್ಳಿಯ ಮಲ್ಲಸಂದ್ರ ಹೆರಿಗೆ ಆಸ್ಪತ್ರೆ ನರ್ಸ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಲೋಕಾಯುಕ್ತ ಎಸ್ಪಿ ಶ್ರೀನಾಥ್ ಜೋಶಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹೆರಿಗೆ ಮಾಡಿಸಲು ಲಂಚ ಪಡೆಯುತ್ತಿದ್ದ ಮಲ್ಲಸಂದ್ರ ಹೆರಿಗೆ ಆಸ್ಪತ್ರೆಯ ನರ್ಸ್ ಗಂಗಲಕ್ಷ್ಮೀ ಸಿಕ್ಕಿದ್ದಿದ್ದಾರೆ. ಬೆಂಗಳೂರಿನ ಟಿ.ದಾಸರಹಳ್ಳಿಯ ಮಲ್ಲಸಂದ್ರ ಆಸ್ಪತ್ರೆಗೆ ಬಂದಿದ್ದ ಬಾಗಲಗುಂಟೆಯ ಕಮಲಮ್ಮ ಬಳಿ 6,500 ರೂಪಾಯಿ ಬೇಡಿಕೆ ಇಟ್ಟಿದ್ದಾರೆ. ಈ ಪೈಕಿ 5000 ಫೋನ್ಪೇ ಮೂಲಕ ಪಡೆದುಕೊಂಡಿದ್ದಾರೆ.
ಹೆರಿಗೆ ಮಾಡಿಸಲು ಬಾಗಲಗುಂಟೆಯ ಕಮಲಮ್ಮ ಎಂಬುವರಿಂದ ಲಂಚ ಪಡೆಯುತ್ತಿರುವಾಗಲೇ ನರ್ಸ್ ಗಂಗಲಕ್ಷ್ಮಿ ರೆಡ್ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾಳೆ. ಬಳಿಕ ಲೋಕಾಯಕ್ತ ಪೊಲೀಸರು ಗಂಗಾಲಕ್ಷ್ಮೀಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಈಕೆಯ ಕರ್ಮಕಾಂಡ ಬಗೆದಷ್ಟು ಬಯಲಾಗುತ್ತಿದೆ.
ಸಾರ್ವಜನಿಕ ಹೆರಿಗೆ ಆಸ್ಪತ್ರೆಯನ್ನ ಸ್ವಂತ ಆಸ್ಪತ್ರೆಯನ್ನಾಗಿ ಮಾಡಿಕೊಂಡಿದ್ದ ನರ್ಸ್ ಗಂಗಲಕ್ಷ್ಮೀ ಮೇಲಿನ ಆರೋಪ ಇದೇನು ಮೊದಲಲ್ಲ. ಈಕೆ ಭ್ರೂಣ ಹತ್ಯೆ ಕೇಸ್ ನಲ್ಲೂ ಭಾಗಿಯಾಗಿರುವ ಅರೋಪ ಕೇಳಿಬಂದಿದೆ. ಈಕೆಯ ಪತಿ ರಮೇಶ್ ನಿವೃತ್ತ ಪೊಲೀಸ್ ಅಧಿಕಾರಿ. ಹೀಗಾಗಿ ಈಕೆ ಏನು ಮಾಡಿದರೂ ಸಹ ನಡೆದುಕೊಂಡು ಹೋಗುತ್ತಿದೆ. ಆಸ್ಪತ್ರೆಯಲ್ಲಿ ಈಕೆ ಹೇಳಿದ್ದೆ ಅಂತಿಮ.
ಸತತ ನಾಲ್ಕು ಬಾರಿ ಈಕೆಯ ಮೇಲೆ ಗಂಭೀರ ಸ್ವರೂಪದ ಅರೋಪಗಳು ಇದ್ದರೂ ಸಹ ಇಲಾಖೆಯ ಕೆಲ ಅಧಿಕಾರಿಗಳಿಗೆ ಹಣ ಕೊಟ್ಟು ಸಾಕಷ್ಟು ವರ್ಷದಿಂದ ಒಂದೇ ಆಸ್ಪತ್ರೆಯಲ್ಲಿ ಠಿಕಾಣಿಹೂಡಿದ್ದಾಳೆ. ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಣೆ ಮಾಡುವ ಡಾಕ್ಟರ್ ಕೂಡ ಈ ನರ್ಸ್ ಹೇಳಿದ ರೀತಿಯಲ್ಲಿ ಕೆಲಸ ಮಾಡಬೇಕಿತ್ತು. ಈ ಹಿಂದೆಯೂ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಗಂಭೀರ ಪ್ರಕರಣದ ಕೇಸ್ಗಳು ದಾಖಲಾಗಿದ್ದರೂ ಯಾವುದೇ ಕ್ರಮವಾಗಿಲ್ಲ. ಹೀಗಾಗಿ ನರ್ಸ್ ಗಂಗಾಲಕ್ಷ್ಮೀ ಆಡಿದ್ದೇ ಆಟವಾಗಿತ್ತು.