ಬೆಂಗಳೂರು ವಕೀಲರ ಸಂಘದ ಚುನಾವಣೆಯನ್ನು ಮುಂದಿನ ವರ್ಷದ ಫೆಬ್ರವರಿ 2ರಂದು ನಡೆಸಲು ಉನ್ನತಾಧಿಕಾರ ಸಮಿತಿಗೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ನಿರ್ದೇಶಿಸಿದೆ.
ಜನವರಿ 19 ಅಥವಾ ಫೆಬ್ರವರಿ 2ರಂದು ಬೆಂಗಳೂರು ವಕೀಲರ ಸಂಘಕ್ಕೆ ಚುನಾವಣೆ ನಡೆಸಲು ಉನ್ನತಾಧಿಕಾರ ಸಮಿತಿಗೆ ನಿರ್ದೇಶಿಸಬೇಕು ಎಂದು ಕೋರಿ ಬೆಂಗಳೂರಿನ ಮಂಜುನಾಥ್ ನಾಯ್ಕ್ ಮತ್ತು ಚೇತನ್ ಹಾಗೂ ಚುನಾವಣೆ ನಡೆಸಲು ಇವಿಎಂ ಹಾಗೂ ಭದ್ರತೆ ಒದಗಿಸಲು ಪೊಲೀಸ್ ಇಲಾಖೆಗೆ ನಿರ್ದೇಶಿಸಬೇಕು ಎಂದು ಎಎಬಿ ನಿರ್ಗಮಿತ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
“ಉನ್ನತಾಧಿಕಾರ ಸಮಿತಿಯು ಬೆಂಗಳೂರು ವಕೀಲರ ಸಂಘದ ಚುನಾವಣೆಯನ್ನು ಫೆಬ್ರವರಿ 2ರಂದು ನಡೆಸಬೇಕು. ಡಿಸೆಂಬರ್ 30ರ ಒಳಗೆ ಅಂತಿಮ ಮತದಾರರ ಪಟ್ಟಿಯನ್ನು ಸಮಿತಿ ಬಿಡುಗಡೆ ಮಾಡಬೇಕು. ದ್ವಿಸದಸ್ಯತ್ವ ಮತ್ತು ಎಐಬಿಇ ಪರೀಕ್ಷೆ ಪಾಸಾಗದವರಿಗೆ ಮತದಾನದ ಅವಕಾಶ ಕಲ್ಪಿಸದಂತೆ ಉನ್ನತಾಧಿಕಾರ ಸಮಿತಿ ಕ್ರಮಕೈಗೊಳ್ಳಬೇಕು. ಚುನಾವಣೆಗೆ ಅಗತ್ಯವಾದ ವಿದ್ಯುನ್ಮಾನ ಮತಯಂತ್ರಗಳನ್ನು ಚುನಾವಣಾ ಆಯೋಗ ಒದಗಿಸಬೇಕು. ಬೆಂಗಳೂರು ಗ್ರಾಮಾಂತರ ಪೊಲೀಸರು ಭದ್ರತೆ ಒದಗಿಸಬೇಕು” ಎಂದು ನ್ಯಾಯಾಲಯ ಆದೇಶಿಸಿತು.
ಇದಕ್ಕೂ ಮುನ್ನ, ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ಅವರು “ಎಎಬಿ ಚುನಾವಣೆಯನ್ನು ಜನವರಿ 19 ಅಥವಾ 25ರಂದು ನಡೆಸಬೇಕು. ತಾತ್ಕಾಲಿಕ ಮತದಾರರ ಪಟ್ಟಿ ಬಿಡುಗಡೆ ಮಾಡಲಾಗಿದೆ. ಚುನಾವಣೆ ವಿಳಂಬಗೊಳಿಸುವ ಉದ್ದೇಶದಿಂದ ಸಲ್ಲಿಕೆ ಮಾಡಲಾಗುವ ಮಧ್ಯಂತರ ಅರ್ಜಿದಾರರ ಕೋರಿಕೆಗಳನ್ನು ಪುರಸ್ಕರಿಸಬಾರದು” ಎಂದರು.
ಎಎಬಿ ಮಾಜಿ ಅಧ್ಯಕ್ಷ ಶಿವರಾಮು ಅವರು “ಸೊಸೈಟಿ ರಿಜಿಸ್ಟ್ರಾರ್ ಅವರಿಗೆ ಚುನಾವಣೆ ನಡೆಸಲು ಅವಕಾಶ ಕಲ್ಪಿಸಬೇಕು. ತಮ್ಮ ಗೆಲುವನ್ನು ಸುಲಭಗೊಳಿಸಿಕೊಳ್ಳಲು ತಾತ್ಕಾಲಿಕ ಮತದಾರರ ಪಟ್ಟಿ ಬಿಡುಗಡೆ ಮಾಡಲಾಗಿದೆ. ದ್ವಿಸದಸ್ಯತ್ವ ರದ್ದುಪಡಿಸಬೇಕು. ಎಐಬಿಇ ಪರೀಕ್ಷೆ ಪಾಸಾಗದವರಿಗೆ ಮತದಾನದ ಅವಕಾಶ ನೀಡಬಾರದು” ಎಂದು ವಾದಿಸಿದರು.
ಹಿರಿಯ ವಕೀಲ ಡಿ ಆರ್ ರವಿಶಂಕರ್ ಅವರು “ಅಕ್ರಮ ತಡೆದು ಪಾರದರ್ಶಕವಾಗಿ ಚುನಾವಣೆ ನಡೆಸಲು ಪರಿವೀಕ್ಷಕರನ್ನು ನೇಮಕ ಮಾಡಬೇಕು. ಈ ಸಂಬಂಧ ಪ್ರಮಾದಗಳು ಕಂಡುಬಂದರೆ ನ್ಯಾಯಾಲಯದ ಮೆಟ್ಟಿಲೇರಲು ಅನುಮತಿಸಬೇಕು. ಈ ಮೂಲಕ ಎಎಬಿಯ ಘನತೆಯನ್ನು ಕಾಪಾಡಲು ನ್ಯಾಯಾಲಯ ಮುಂದಾಗಬೇಕು” ಎಂದು ಕೋರಿದರು.
ಈ ಸಂದರ್ಭದಲ್ಲಿ ಎಎಬಿ ಮಾಜಿ ಅಧ್ಯಕ್ಷ ಎ ಪಿ ರಂಗನಾಥ್ ಅವರು “ಕಳೆದ ಚುನಾವಣೆಯಲ್ಲಿ ವಿಜಯನಗರ ಸಾಮ್ರಾಜ್ಯದಲ್ಲಿ ಮುತ್ತು-ರತ್ನ ಮಾರಾಟ ಮಾಡಿದಂತೆ ಹಣದ ಹೊಳೆ ಹರಿಸಲಾಗಿದೆ. ಈ ನಿಟ್ಟಿನಲ್ಲಿ ರವಿಶಂಕರ್ ಅವರ ಅಭಿಪ್ರಾಯ ಮಹತ್ವವಾಗಿದೆ” ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ವಿವೇಕ್ ಅವರು “ರಂಗನಾಥ್ ಅವರು ಹಣ ಹಂಚಿದರು. ಆದರೆ, ಗೆಲುವು ದಕ್ಕಲಿಲ್ಲ. ಅದಾಗ್ಯೂ, ಎಎಬಿಗೆ ನ್ಯಾಯಸಮ್ಮತ ಪಾರದರ್ಶಕ ಚುನಾವಣೆ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ರವಿಶಂಕರ್ ಅವರ ಅಭಿಪ್ರಾಯಕ್ಕೆ ಸಹಮತವಿದೆ. ಇನ್ನು, ನ್ಯಾಯಾಲಯದ ಗೋಡೆಗಳಲ್ಲಿ ಭಿತ್ತಿಪತ್ರ ಅಂಟಿಸುವುದಕ್ಕೆ ಅನುಮತಿಸಬಾರದು. ಇದರಿಂದ ನ್ಯಾಯಾಲಯದ ಘನತೆಗೆ ಚ್ಯುತಿಯಾಗುತ್ತದೆ” ಎಂದರು.
ಮಹಿಳಾ ವಕೀಲರೊಬ್ಬರು “ಸುಪ್ರೀಂ ಕೋರ್ಟ್ ಗುರುವಾರ ಮಾಡಿರುವ ತೀರ್ಪಿಗೆ ಅನುಗುಣವಾಗಿ ಮುಂದಿನ ಎಎಬಿ ಚುನಾವಣೆಯಲ್ಲಿ ಶೇ.33ರಷ್ಟು ಮೀಸಲಾತಿಯನ್ನು ಮಹಿಳಾ ವಕೀಲರಿಗೆ ಕಲ್ಪಿಸಬೇಕು ಎಂದು ಮಧ್ಯಂತರ ಅರ್ಜಿ ಸಲ್ಲಿಸಲಾಗಿದೆ. ಅದನ್ನು ಪರಿಗಣಿಸಬೇಕು” ಎಂದರು.
ಇದಕ್ಕೆ ವಿವೇಕ್ ಸುಬ್ಬಾರೆಡ್ಡಿ ಅವರು “ಮಹಿಳಾ ವಕೀಲರಿಗೆ ಮೀಸಲಾತಿ ಕಲ್ಪಿಸಲು ಎಎಬಿ ಬೈಲಾಗೆ ತಿದ್ದುಪಡಿ ಮಾಡಬೇಕಿದೆ. ಎಎಬಿ ಆಡಳಿತ ಮಂಡಳಿಯ ಅವಧಿ ಈಗ ಮುಗಿದಿರುವುದರಿಂದ ತಿದ್ದುಪಡಿ ಸದ್ಯ ಅಸಾಧ್ಯ” ಎಂದರು.
ಅಂತಿಮವಾಗಿ ಪೀಠವು “ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣೆ ನಡೆಸುವ ನಿಟ್ಟಿನಲ್ಲಿ ಏನೆಲ್ಲಾ ಸಲಹೆಗಳನ್ನು ನೀಡಬೇಕು ಎಂದುಕೊಳ್ಳಲಾಗಿದೆ ಅವುಗಳನ್ನು ಲಿಖಿತವಾಗಿ ನೀಡಿದರೆ ಆದೇಶದಲ್ಲಿ ಸೇರ್ಪಡೆ ಮಾಡಲಾಗುವುದು” ಎಂದು ಹೇಳಿದ ನ್ಯಾಯಾಲಯವು ವಿಚಾರಣೆಯನ್ನು ಜನವರಿ 6ಕ್ಕೆ ಮುಂದೂಡಿತು.