ಮೃತದೇಹದೊಂದಿಗಿನ ಸಂಭೋಗವು ಭಾರತೀಯ ದಂಡ ಸಂಹಿತೆ ಸೆಕ್ಷನ್ 376 ರಡಿ ಅಥವಾ ಪೋಕ್ಸೊ ಕಾಯ್ದೆಯಡಿ ಅತ್ಯಾಚಾರವೆಂದು ಪರಿಗಣಿಸಲಾಗದು ಎಂದು ಛತ್ತೀಸಗಢ ಹೈಕೋರ್ಟ್ ಇತ್ತೀಚೆಗೆ ನೀಡಿದ ತೀರ್ಪಿನಲ್ಲಿ ಹೇಳಿದೆ.
ನ್ಯಾಯಮೂರ್ತಿಗಳಾದ ರಮೇಶ್ ಸಿನ್ಹಾ ಹಾಗೂ ಬುಭು ದತ್ತಾ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ. ಮೃತದೇಹದೊಂದಿಗಿನ ಲೈಂಗಿಕ ಕ್ರಿಯೆಯು ಯೋಚನೆ ಮಾಡಲೂ ಆಗದ ಹೀನಾಯ ಕೃತ್ಯವಾದರೂ, ಅದನ್ನು ಐಪಿಸಿ ಹಾಗೂ ಪೋಕ್ಸೊ ಕಾಯ್ದೆಯಡಿ ಅಪರಾಧ ಎಂದು ಪರಿಗಣಿಸಲಾಗದು ಎಂದು ಪೀಠ ಹೇಳಿದೆ.
ಅಲ್ಲದೇ ಈ ಎರಡೂ ಕಾನೂನು ಸಂತ್ರಸ್ತೆ ಜೀವಂತವಾಗಿದ್ದರೆ ಮಾತ್ರ ಅನ್ವಯವಾಗಲಿದೆ ಎಂದು ಕೋರ್ಟ್ ವಿವರಿಸಿದೆ.
ಕೃತ್ಯ ಹೀನಾಯವಾದರೂ, ಐಪಿಸಿಯ ಸೆಕ್ಷನ್ 363, 376 (3) ಹಾಗೂ 2012ರ ಪೋಕ್ಸೊ ಕಾಯ್ದೆಯ ಸೆಕ್ಷನ್ 6 ರಡಿ ಆರೋಪಿಯನ್ನು ಶಿಕ್ಷೆಗೆ ಗುರಿಪಡಿಸಲು ಆಗದು’ ಎಂದು ಪೀಠ ಹೇಳಿದೆ.
ಅಪ್ರಾಪ್ತೆಯನ್ನು ಅಪಹರಿಸಿ, ಅತ್ಯಾಚಾರ ಹಾಗೂ ಆಕೆಯ ಸಾವಿನ ಬಳಿಕವೂ ಲೈಂಗಿಕವಾಗಿ ದೌರ್ಜನ್ಯ ಎಸಗಿದ ಪ್ರಕರಣವೊಂದರಲ್ಲಿ ಕೋರ್ಟ್ ಈ ತೀರ್ಪು ನೀಡಿದೆ.
ಆರೋಪಿಗಳಾದ ನಿತಿನ್ ಯಾದವ್ ಹಾಗೂ ನೀಲಕಂಠ ನಾಗೇಶ ಎಂಬಿಬ್ಬರಿಗೆ ಐಪಿಸಿ ಹಾಗೂ ಪೋಕ್ಸೊ ಕಾಯ್ದೆಯ ವಿವಿಧ ಕಲಂಗಳಡಿ ಶಿಕ್ಷೆ ವಿಧಿಸಲಾಗಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣ ಏನು?
ನಿತಿನ್ ಯಾದವ್‌ನನ್ನು ಅತ್ಯಾಚಾರ, ಅಪಹರಣ ಹಾಗೂ ಕೊಲೆ ಪ್ರಕರಣದಲ್ಲಿ ದೋಷಿ ಎಂದಿರುವ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿತ್ತು. ಸಾಕ್ಷ್ಯ ನಾಶ ಹಾಗೂ ದಾರಿ ತಪ್ಪಿಸುವ ಹೇಳಿಕೆ ನೀಡಿದ ಅಪರಾಧಕ್ಕೆ ನಾಗೇಶ್‌ಗೆ 7 ವರ್ಷಷಗಳ ಜೈಲು ಶಿಕ್ಷೆ ವಿಧಿಸಿತ್ತು.
ಇದೇ ಪ್ರಕರಣದಲ್ಲಿ ಮೃತದೇಹದೊಂದಿಗೆ ಸಂಭೋಗ ನಡೆಸಿದ ನಾಗೇಶ್ ಅವರ ಕೃತ್ಯವು ಅತ್ಯಾಚಾರ ಎಂದು ಪರಿಗಣಿಸಲಾಗದು ಎಂದು ಕೆಳ ನ್ಯಾಯಲಯ ತೀರ್ಪು ನೀಡಿದ್ದರೂ, ಪ್ರಾಸಿಕ್ಯೂಷನ್ ಅದನ್ನು ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಿತ್ತು.
ಭಾರತದ ಯಾವ ಕಾನೂನು ಕೂಡ ಮೃತದೇಹದೊಂದಿಗಿನ ಸಂಭೋಗವು ಅತ್ಯಾಚಾರ ಎಂದು ಪರಿಗಣಿಸದೇ ಇದ್ದರೂ, ಸಂವಿಧಾನದ 21ನೇ ಪರಿಚ್ಛೇದವು ಘನತೆಯಿಂದ ಸಾಯುವ ಹಾಗೂ ಸತ್ತ ಬಳಿಕವೂ ಶವವನ್ನು ಘನತೆಯಿಂದ ನಡೆಸಿಕೊಳ್ಳಬೇಕು ಎನ್ನುವುದನ್ನು ಖಾತರಿಪಡಿಸುತ್ತದೆ. ಹೀಗಾಗಿ ನಾಗೇಶ್‌ನ ಕೃತ್ಯವನ್ನು ಅತ್ಯಾಚಾರವಾಗಿ ಪರಿಗಣಿಸಬೇಕು ಎಂದು ಪ್ರಾಸಿಕ್ಯೂಷನ್ ವಾದ ಮಂಡಿಸಿತ್ತು. ಆದರೆ ನಾಗೇಶ್‌ನನ್ನು ಅತ್ಯಾಚಾರದ ಅಪರಾಧಿ ಎಂದು ಪರಿಗಣಿಸಲು ಕೋರ್ಟ್ ನಿರಾಕರಿಸಿದೆ.














