ಹುಬ್ಬಳ್ಳಿ: ಈಗಿನ ಕಾಂಗ್ರೆಸ್‌ಗೂ, ಮಹಾತ್ಮ ಗಾಂಧೀಜಿಗೂ ಏನು ಸಂಬಂಧ? ಈಗಿನದು ಇಂದಿರಾ ಗಾಂಧಿಯವರ ನಕಲಿ ಕಾಂಗ್ರೆಸ್. ಹಳೇಯ ಕಾಂಗ್ರೆಸ್ ತುಂಡು ತುಂಡಾಗಿ ಹೋಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವ್ಯಂಗ್ಯವಾಡಿದರು.
ಬೆಳಗಾವಿಯಲ್ಲಿ ನಡೆಯಲಿರುವ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಶತಮಾನೋತ್ಸವದ ಕುರಿತು ಸೋಮವಾರ (ಡಿ.23) ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನಲ್ಲಿ ಈಗಿರುವವರೆಲ್ಲ ನಕಲಿ ಗಾಂಧಿಗಳು. ಅದು ಕಳ್ಳಕಾಕರರ ಗುಂಪು. ಇವರ‍್ಯಾರು ಮಹಾತ್ಮ ಗಾಂಧೀಜಿ ಅವರ ಕಾಂಗ್ರೆಸ್‌ನ ವಾರಸುದಾರರಲ್ಲ. ನಕಲಿ ಕಾಂಗ್ರೆಸ್ ಗೆ ಸರ್ಕಾರಿ ದುಡ್ಡು ಯಾಕೆ ಖರ್ಚು ಮಾಡುತ್ತಿದ್ದೀರಿ ಎಂದು ಪ್ರಶ್ನಸಿದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರನ್ನು ಕಾರಿನಲ್ಲಿ ಸುತ್ತಾಡಿಸಿದ್ದು ತನಗೆ ಗೊತ್ತಿಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿಕೆ ನೀಡುತ್ತಾರೆ. ಅಂದರೆ, ಗೃಹ ಸಚಿವರನ್ನೇ ಕತ್ತಲಲ್ಲಿಟ್ಟು ಪೊಲೀಸರು ಹೀಗೆ ಮಾಡಿದ್ದಾರಾ? ಜಿಲ್ಲಾ ಉಸ್ತುವಾರಿ ಸಚಿವರು ಸಹ ಪೊಲೀಸರು ತಪ್ಪು ಮಾಡಿದ್ದಾರೆ ಎಂದಿದ್ದಾರೆ. ಹಾಗಾದರೆ ಸರ್ಕಾರದಲ್ಲಿ ಏನು ನಡೆಯುತ್ತಿದೆ? ಇದರ ಹಿಂದಿನ ಸೂತ್ರಧಾರರು ಯಾರು ಎನ್ನುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕು ಎಂದರು.
ಸಿ.ಟಿ.ರವಿ ಅವರ ಆಕ್ಷೇಪಾರ್ಹ ಹೇಳಿಕೆ ಮುಚ್ಚಿಕೊಳ್ಳಲು ಬಿಜೆಪಿ ಮುಖಂಡರು ಪೊಲೀಸರ ಮೇಲೆ ಆರೋಪ ಮಾಡುತ್ತಿದ್ದಾರೆನ್ನುವ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸುತ್ತ, ನಾವು ಯಾವಾಗಲೂ ಮರ್ಯಾದೆಯಿಂದಲೇ ವರ್ತಿಸುತ್ತಿದ್ದೇವೆ. ಅವರ ಹಾಗೆ ನಾವೇನೂ ಬಿಟ್ಟಿಲ್ಲ. ಕಾಂಗ್ರೆಸ್‌ನಲ್ಲಿ ಸಂಸ್ಕೃತಿ, ಸಂಸ್ಕಾರ ಎನ್ನುವುದೇ ಇಲ್ಲ. ಕೆಲವಷ್ಟು ನಾಯಕರನ್ನು ಹೊರತು ಪಡಿಸಿ ಉಳಿದವರೆಲ್ಲ ಅನಾಗರಿಕರ ಹಾಗೆ ವರ್ತಿಸುತ್ತಾರೆ ಎಂದು ಕುಟುಕಿದರು.














