ಮನೆ ಕಾನೂನು ಅತ್ಯಾಚಾರ ಸಂತ್ರಸ್ತೆಯ ಮಗುವನ್ನು ದತ್ತು ಪಡೆಯಲು ಜೈವಿಕ ತಂದೆಯ ಅನುಮತಿ ಬೇಕಿಲ್ಲ

ಅತ್ಯಾಚಾರ ಸಂತ್ರಸ್ತೆಯ ಮಗುವನ್ನು ದತ್ತು ಪಡೆಯಲು ಜೈವಿಕ ತಂದೆಯ ಅನುಮತಿ ಬೇಕಿಲ್ಲ

0

ಬೆಂಗಳೂರು: ಅತ್ಯಾಚಾರಕ್ಕೀಡಾದ ಸಂತ್ತಸ್ತೆಯ ಮಗುವಿನ ದತ್ತು ಪ್ರಕ್ರಿಯೆಗೆ ತಂದೆಯ ಒಪ್ಪಿಗೆಯ ಅಗತ್ಯವಿಲ್ಲ ಎಂದು ಹೇಳಿರುವ ಹೈಕೋರ್ಟ್‌, ಹೆಣ್ಣುಮಗುವಿನ ದತ್ತು ಪ್ರಕ್ರಿಯೆ ಪೂರ್ಣಗೊಳಿಸುವಂತೆ ಯಲಹಂಕ ಉಪ ನೋಂದಣಾಧಿಕಾರಿಗೆ ಆದೇಶಿಸಿದೆ.

Join Our Whatsapp Group

16 ವರ್ಷದ ಅತ್ಯಾಚಾರ ಸಂತ್ರಸ್ತೆ ಹಾಗೂ ಅವರ ತಾಯಿ ಮತ್ತು ದತ್ತು ಪಡೆಯಲು ಮುಂದಾಗಿರುವ ಬೆಂಗಳೂರಿನ ಮುಸ್ಲಿಂ ದಂಪತಿ ಜಂಟಿಯಾಗಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ| ಹೇಮಂತ್‌ ಚಂದನಗೌಡರ್‌ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಅಷ್ಟೇ ಅಲ್ಲದೇ ಮಗುವಿನ ತಂದೆಯ ಸಮ್ಮತಿ ಪತ್ರವನ್ನು ಕೇಳದೆ 2024ರ ನ. 11ರ ದತ್ತು ಡೀಡ್‌ ನೋಂದಣಿ ಮಾಡಬೇಕು ಎಂದು ಯಲಹಂಕ ಸಬ್‌ ರಿಜಿಸ್ಟ್ರಾರ್‌ಗೆ ನಿರ್ದೇಶನ ನೀಡಿದೆ.

ಈ ಪ್ರಕರಣದಲ್ಲಿ ಮುಸ್ಲಿಂ ದಂಪತಿ 51 ದಿನಗಳ ಮಗುವನ್ನು ಬಾಲ ನ್ಯಾಯ (ಆರೈಕೆ ಮತ್ತು ರಕ್ಷಣೆ) ಕಾಯಿದೆ 2015 ಮತ್ತು ಅದರಡಿ ರೂಪಿಸಿರುವ ನಿಯಮಗಳ ಅನುಸಾರವೇ ದತ್ತು ಪಡೆಯಲು ಮುಂದಾಗಿದ್ದಾರೆ. ಇಲ್ಲಿ ಪೋಷಕರು ಮಗುವಿನ ಆರೈಕೆ ಮತ್ತು ರಕ್ಷಣೆಗೆ ಅಸಮರ್ಥರಾಗಿರುವುದರಿಂದ ಅದು ಅನಾಥ ಎಂದು ಪರಿಗಣಿಸಲ್ಪಡುತ್ತದೆ. ಹಾಗಾಗಿ ಇಂತಹ ಪ್ರಕರಣದಲ್ಲಿ ಮಗುವಿನ ದತ್ತು ಪ್ರಕ್ರಿಯೆಗೆ ತಂದೆಯ ಒಪ್ಪಿಗೆ ಬೇಕಿಲ್ಲ ಎಂದು ಆದೇಶಿಸಿದೆ.

ನೈತಿಕತೆ ಆಧಾರದ ಮೇಲೆ ಪರಿಗಣನೆ

ದತ್ತು ಪ್ರಕ್ರಿಯೆ ನಡೆಯದಿದ್ದರೆ ಮಗುವು ಸಂವಿಧಾನದ ಕಲಂ 21ರ ಪ್ರಕಾರ ಜೀವಿಸುವ ಹಕ್ಕಿನಿಂದ ವಂಚಿತವಾಗುತ್ತದೆ. ಆದ್ದರಿಂದ ಒಟ್ಟಾರೆ ಮಗುವಿನ ಬೆಳವಣಿಗೆ ಮತ್ತು ಯೋಗಕ್ಷೇಮದ ದೃಷ್ಟಿಯಿಂದ ಶಾಸನಾತ್ಮಕ ಹಕ್ಕಿಗಿಂತ ನೈತಿಕತೆ ಆಧಾರದ ಮೇಲೆ ಇಡೀ ಪ್ರಕರಣವನ್ನು ಪರಿಗಣಿಸಬೇಕಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಅರ್ಜಿದಾರರು 2023ರ ನ.1ರಿಂದ 2024ರ ಜೂ.20ರ ನಡುವೆ ಅತ್ಯಾಚಾರಕ್ಕೆ ಒಳಗಾಗಿದ್ದರು. ಆರೋಪಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಆ ನಡುವೆ 2024ರ ಸೆ.30ರಂದು ಸಂತ್ರಸ್ತೆ ಮಗುವಿಗೆ ಜನ್ಮ ನೀಡಿದ್ದು, ಆ ಮಗುವಿನ ತಂದೆ (ಆರೋಪಿ) ಇದೀಗ ನ್ಯಾಯಾಂಗ ಬಂಧನದಲ್ಲಿದ್ದಾನೆ. ಹಾಗಾಗಿ ತಂದೆಯ ಅನುಮತಿ ಅನಗತ್ಯವಾಗಿದೆ ಎಂದು ನ್ಯಾಯಾಲಯ ಹೇಳಿದೆ.