ಕಾಮಾಲೆಯ ಒಂದು ವ್ಯಾಧಿಯಲ್ಲಿ ದೇಹದಲ್ಲಿ ಅಡಗಿರಬಹುದಾದ ವ್ಯಾಧಿಯ ಗುಣ ಲಕ್ಷಣವಷ್ಟೇ, ಚರ್ಮ, ಕಣ್ಣಿನ ಒಳಭಾಗ, ಒಳಚರ್ಮ, ಮೂತ್ರ… ಹೀಗೆ ದೇಹದ ಎಲ್ಲಾ ಅಂಗಾಂಗಗಳೂ ಹಳದಿ ಬಣ್ಣಕ್ಕೆ ತಿರುಗುವುದೇ ಕಾಮಾಲೆಯ ಲಕ್ಷಣವಾಗಿರುತ್ತದೆ.
ಕಾಮಾಲೆ (ಅರಶಿಣ ಕಾಮಾಲೆ.) ಇದು ಎಲ್ಲರಿಗೂ ತಿಳಿದಿರುವ ಕಾಯಿಲೆ. ಈ ವ್ಯಾಧಿ ಬಂದರೆ ಕಣ್ಣಿನ ಬಣ್ಣ ಹಳದಿ ಬಣ್ಣಕ್ಕೆ ತಿರುಗುತ್ತದೆ. ನಾಲಿಗೆಯನ್ನು ಮೇಲಕ್ಕೆ ಎತ್ತಿ ನೋಡಿದರೆ ಆದರ ಕೆಳಭಾಗ ಹಳದಿ ಬಣ್ಣಕ್ಕೆ ಬಂದಿರುತ್ತದೆ. ಕಾಯಿಲೆ ತೀವ್ರತೆ ಹೆಚ್ಚಿದಂತೆ ಅಂಗೈ-ಅಂಗಾಲು ಮತ್ತು ಉಗುರುಗಳೂ ಸಹ ಹಳದಿ ಬಣ್ಣಕ್ಕೆ ತಿರುಗಿರುತ್ತವೆ. ಬಿಳಿಯ ಬಣ್ಣದ ಚರ್ಮದವರಾಗಿದ್ದರೆ ಆ ಚರ್ಮವೂ ಸಹ ಹಳವಿ ಬಣ್ಣಕ್ಕೆ ಬಂದಿರುತ್ತದೆ.
ಹಳದಿ ಬಣ್ಣಕ್ಕೆ ಏಕೆ ತಿರುಗುತ್ತದೆ?
ನಾವು ತಿಂದ ಆಹಾರವು ಜಠರಕ್ಕೆ ಸೇರಿ, ಅಲ್ಲಿ ಲಾಲಾರಸದೊಂದಿಗೆ ಜೀರ್ಣವಾಗಿ, ಕೆಲವು ಗಂಟೆಗಳಲ್ಲಿ ಸಣ್ಣ ಕರುಳಿಗೆ ಸೇರಿ, ಅಲ್ಲಿ ಪಿತ್ತರಸದೊಂದಿಗೆ ಸೇರಿ ಜೀರ್ಣವಾಗುತ್ತದೆ. ಪಿತ್ತ ಜನಕಾಂಗದಲ್ಲಿ (ಲಿವರ್) ತಯಾರಾದ ಪಿತ್ತರಸವು ಪಿತ್ತಾಶಯದಲ್ಲಿ ನಿಂತಿರುತ್ತದೆ. ಇದು ಮೇದಸ್ಸು ಪದಾರ್ಥವಾಗಿ ಜೀರ್ಣಕ್ರಿಯೆಗೆ ಸಹಕಾರಿಯಾಗಿ ಕೆಲಸ ಮಾಡುತ್ತದೆ. ನಾವು ಆಹಾರ ತೆಗೆದುಕೊಂಡ ನಂತರ ಜತರದಿಂದ ಸಣ್ಣಕರುಳಿಗೆ ಭಾಗಶಃ ಜೀರ್ಣವಾದ ಆಹಾರದಲ್ಲಿ ಈ ಪಿತ್ತರಸ ಬೆರೆಯುತ್ತದೆ.
ಬಿಲಿ ರುಬಿನ್ – ರಕ್ತದಲ್ಲಿ ಮೂರು ಬಗೆಯ ಜೀವಕೋಶಗಳಿರುತ್ತವೆ. ಅವು ಕೆಂಪು ರಕ್ತಕಣಗಳು, ಬಿಳಿ ರಕ್ತಕಣಗಳು ಮತ್ತು ಪ್ಲೇಟ್ಲೆಟ್ಸ್ ಗಳು, ಕೆಂಪು ರಕ್ತಕಣಗಳ ಆಯುಷ್ಯ ಸಾಮಾನ್ಯವಾಗಿ 120 ದಿನಗಳು. ಅದು ಯಶಸ್ವಿಯಾಗಿ ತನ್ನ ಕಾರ್ಯ ಮುಗಿಸಿದ ನಂತರ ಅವು ಪಿತ್ತ ಜನಕಾಂಗ, ಗುದ್ದಿ, ಅಸ್ಥಿ ಮಜ್ಜೆಯಲ್ಲಿ ನಶಿಸಿ ಹೋಗುತ್ತವೆ ಅದು ನಶಿಸಿ ಹೋಗುವಾಗ ಉತ್ಪತ್ತಿಯಾಗಿ ಬರುವ ತ್ಯಾಜ್ಯವೇ ಬಿಲಿ ರುಬಿನ್ ಎಂದು ಕರೆಯುತ್ತಾರೆ ಈ ರೀತಿ ಉತ್ಪತ್ತಿಯಾದ ಬಿಲಿರು ಬಿನ್ ಮುಖಾಂತರವಾಗಿ ಪಿತ್ತಜನಕಾಂಗಕ್ಕೆ ಬಂದು ಸೇರುತ್ತದೆ. ಅಲ್ಲಿ ಕಿಣಗಳ ಮೇಲ್ವಿಚಾರಣೆಯಲ್ಲಿ ಗ್ಲುಕ್ಯೂರೊಡೆನ್ ಎಂಬ ವಸ್ತುವಿನೊಂದಿಗೆ ಸಂಯೋಗ ಹೊಂದಿ, ಹಳದಿ ಬಣ್ಣದ ಪಿತ್ತವರ್ಣದ ವಸ್ತು Blrubin) ಮತ್ತು ಪಿತ್ತಲವಣ (Bile Salt) ಇವೆರಡು ಪಿತ್ತ ಜನಕಾಂಗದಿಂದ ಪಿತ್ತಕೋಶ ತಲುಪಿ ಅಲ್ಲಿಂದ ಪಿತ್ತನಾಳಗಳ ಮುಖಾಂತರ ಸಣ್ಣ ಕರುಳಿಗೆ ಬಂದು ಸೇರುತ್ತದೆ.
ಇಲ್ಲಿ ಈ ಬಿಲಿರುಬಿನ್ ಅಥವಾ ಹಳದಿ ಬಣ್ಣದ ಮಸ್ತು ಮತ್ತು ಲವಣ ಮಲದೊಂದಿಗೆ ಗರಿಷ್ಟ ಭಾಗ ವಿಸರ್ಜಿಸಲ್ಪಡುತ್ತದೆ. ಸ್ವಲ್ಪ ಭಾಗ ಮತ್ತೆ ರಕ್ತಕ್ಕೆ ಸೇರಿ, ಅದು ಮೂತ್ರಪಿಂಡದಲ್ಲಿ ಸೋಸಣೆಯಾಗಿ ಮೂತ್ರದ ಮುಖಾಂತರ ಹೊರಹೋಗುತ್ತದೆ. ಆದ್ದರಿಂದ ಸಾಮಾನ್ಯವಾಗಿ ಮಲವು ಹಳದಿ ಬಣ್ಣವಿರುತ್ತದೆ. ಮಲದಲ್ಲಿರುವ ಪಿತ್ತವರ್ಣದ ವಸ್ತುವೇ ಕಾರಣ. ಬೇಧಿಯಾದಾಗ ಮಲದೊಂದಿಗೆ ನೀರಿನಾಂಶ ಹೆಚ್ಚು ಹೋಗುವುದರಿಂದ ಮಲದ ಬಣ್ಣ ತೆಳು ಹಳದಿಯಾಗಿರುತ್ತದೆ. ಕಾಲರಾದಂತಹ ಕಾಯಿಲೆಯಲ್ಲಿ ಬೇಧಿ ನೀರಾಗಿರುವುದರಿಂದ ಅದು ಹಳದಿ ಬಣ್ಣ ಹೊಂದಿರುವುದಿಲ್ಲ. ಈ ರೀತಿಯ ಯಾವುದೇ ಕಾರಣದಿಂದ ಪಿತ್ತನಾಳ ಮುಚ್ಚಿ ಹೋಗಿ, ಪಿತ್ತರಸ ಕರುಳಿಗೆ ಬಾರದೆ ಇದ್ದಾಗಲೂ ಮಲ ಬಿಳಿಬಣ್ಣದಿಂದ ಕೂಡಿರುತ್ತದೆ
ಪಿತ್ತವರ್ಣವಸ್ತು – ಎರಡು ವಿಧ. ಮೂಲ ಪಿತ್ತವರ್ಣವಸ್ತು (Direct Bilirubin) ಮತ್ತು ಮಾರ್ಪಟ್ಟ ಪಿತ್ತವರ್ಣವಸ್ತು – (Indirect Bilirubin) ಇದರಲ್ಲಿ ಮಾರ್ಪಟ್ಟ ಪಿತ್ತವರ್ಣದ ವಸ್ತು ನೀರಿನಲ್ಲಿ ಕರಗುವುದರಿಂದ ಕರುಳಿನಲ್ಲಿ ರಕ್ತಕ್ಕೆ ಸೋರಿಕೆಯಾಗಿ ಅದು ಮೂತ್ರಪಿಂಡಕ್ಕೆ ಸೇರಿ; ಅಲ್ಲಿ ಸೋಸಣೆಯಾಗಿ ಮೂತ್ರದಲ್ಲಿ ವಿಸರ್ಜನೆಯಾಗುತ್ತದೆ. ಈ ರೀತಿ ಕಾಮಾಲೆ ರೋಗದಲ್ಲಿ ಮೂತ್ರವು ಹಳದಿ ಬಣ್ಣಕ್ಕೆ ತಿರುಗುತ್ತದೆ.
ಪಿತ್ತಕೋಶ ಮನುಷ್ಯನಿಗೆ ಮುಖ್ಯವಾದ ಅಂಗವೇನಲ್ಲ, ಪಿತ್ತಕೋಶ ಇರಲಿ ಅಥವಾ ಇಲ್ಲದಿರಲಿ ಮನುಷ್ಯ ಆರೋಗ್ಯವಂತ ನಾಗಿರಲು ಸಾಧ್ಯ. ಈ ಪಿತ್ತಕೋಶವು ಲಿವರ್ (ಯಕೃತ್)ನ ಹಿಂಭಾಗದಲ್ಲಿ ಹೊಟ್ಟೆಯ ಮಧ್ಯಭಾಗದಲ್ಲಿ ಇರುತ್ತದೆ. ಪಿತ್ತಕೋಶದಲ್ಲಿ ತಯಾರಾದ ಪಿತ್ತರಸವನ್ನು ಹಿಡಿದಿಟ್ಟು ಕೊಂಡಿರುವುದೇ ಇದರ ಮುಖ್ಯ ಕೆಲಸ.ಆದರೆ, ಲಿವರ್ (ಯಕೃತ್) ಇಲ್ಲದೆ ಮನುಷ್ಯ ಜೀವಿಸಲಾರ
ಏಕೆಂದರೆ, ಮನ್ಯುಷ್ಯನ ಎಲ್ಲಾ ಕ್ರಿಯೆಯಲ್ಲಿ ಇದು ಮುಖ್ಯ ಪಾತ್ರ ವಹಿಸುತ್ತದೆ. ನಾವು ತಿನ್ನುವ ಆಹಾರ, ಕುಡಿಯುವ ಪಾನೀಯಗಳು, ಮದ್ಯ, ನುಂಗುವ ಮಾತ್ರೆಗಳು ಎಲ್ಲವೂ ಯಕೃತ್ತಿನ ಮುಖಾಂತರವೇ ಹಾದು ಹೋಗುತ್ತದೆ. ಈ ಯಕೃತ್ನನ ಮುಖ್ಯವಾದ ಕೆಲಸ – ಅವುಗಳಿಂದ ಶರೀರಕ್ಕೆ ಯಾವ ಹಾನಿಯುಂಟಾಗದಂತೆ, ಅವುಗಳಲ್ಲಿ ಇರಬಹುದಾದ ದೋಷಪೂರಿತವಾದ ವಸ್ತುಗಳನ್ನು ನಿಗ್ರಹಿಸಿ ಅಥವಾ ದೋಷರಹಿತವಾಗುವಂತೆ ಮಾರ್ಪಡಿಸುವುದು. ಆದ್ದರಿಂದ ಯಾವುದೇ ವ್ಯಾಧಿಗಳು ಇದಕ್ಕೆ (ಯಕೃತ್) ಬರದಂತೆ ನಾವು ಸದಾ ಎಚ್ಚರಿಕೆಯಿಂದ ಇರಬೇಕು.














