ಮನೆ ಕಾನೂನು ಭೂ ಸ್ವಾಧೀನ ಅಧಿಸೂಚನೆಯಲ್ಲಿ ಮಾಲೀಕರ ಹೆಸರಿಲ್ಲದಿದ್ದಲ್ಲಿ ಹಿಂದಿರುಗಿಸಬೇಕು: ಹೈಕೋರ್ಟ್

ಭೂ ಸ್ವಾಧೀನ ಅಧಿಸೂಚನೆಯಲ್ಲಿ ಮಾಲೀಕರ ಹೆಸರಿಲ್ಲದಿದ್ದಲ್ಲಿ ಹಿಂದಿರುಗಿಸಬೇಕು: ಹೈಕೋರ್ಟ್

0

ಬೆಂಗಳೂರು: ಅಭಿವೃದ್ಧಿ ಕೆಲಸಗಳಿಗೆ ಸರ್ಕಾರದ ಭೂ ಸ್ವಾಧೀನ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ದೇಶದ ನಾಗರಿಕರು ಆಕ್ಷೇಪಣೆ ಸಲ್ಲಿಸುವ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿರುವ ಹೈಕೋರ್ಟ್, ಭೂ ಸ್ವಾಧೀನದಲ್ಲಿ ತನ್ನ ಹೆಸರನ್ನು ಉಲ್ಲೇಖಿಸದ ಭೂ ಮಾಲೀಕರ ಭೂಮಿಯನ್ನು ಹಿಂದಿರುಗಿಸಲು ಸೂಚನೆ ನೀಡಿ ಆದೇಶಿಸಿದೆ.

Join Our Whatsapp Group

ಮಂಗಳೂರಿನ ಕಂಕನಾಡಿ ಗೋರಿಗುಡ್ಡದ ಎಸ್.ಎನ್.ಡಿ ಸಂಪತ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿತು.

ಅಲ್ಲದೆ, ಪ್ರಕರಣದಲ್ಲಿ ಜಮೀನುಗಳ ಮಾಲೀಕರ ಹೆಸರಿನ ದಾಖಲೆಗಳನ್ನು ಪರಿಶೀಲಿಸದೆ ರಾಷ್ಟ್ರೀಯ ಹೆದ್ದಾರಿ ಕಾಯ್ದೆ 1956ರ ಕಲಂ 3 (ಎ) ಮತ್ತು 3 (ಡಿ) ಅಡಿಯಲ್ಲಿ ಅಧಿಸೂಚನೆಗಳನ್ನು ಹೊರಡಿಸಲಾಗಿದೆ. ಹೀಗಾಗಿ, ಕಲಂ 3(ಎ) ಮತ್ತು 3(ಡಿ) ಅಡಿಯಲ್ಲಿ ಹೊರಡಿಸಲಾದ ಅಧಿಸೂಚನೆಗಳು ಅರ್ಜಿದಾರರ ಭೂಮಿಗೆ ಅನ್ವಯಿಸುವುದಿಲ್ಲ ಮತ್ತು ಅವರು ಭೂಮಿಯನ್ನು ಬಳಸಲು ಸ್ವತಂತ್ರರಾಗಿದ್ದು, ಭೂಮಿಯನ್ನು ಹಿಂದಿರುಗಿಸಬೇಕು ಎಂದು ಪೀಠ ಹೇಳಿದೆ.

ಒಂದು ವೇಳೆ ಎನ್‌ಎಚ್‌ಎಐ ವಶಪಡಿಸಿಕೊಂಡಿರುವ ಜಮೀನನ್ನು ಬಳಕೆ ಮಾಡಿಕೊಳ್ಳುವ ದಿಸೆಯಲ್ಲಿ ಕಟ್ಟಡ ನಿರ್ಮಿಸಿದ್ದರೆ ಅದನ್ನು ತೆಗೆದು ಹಾಕಿ ಅರ್ಜಿದಾರರಿಗೆ ಮುಕ್ತಗೊಳಿಸಬೇಕು ಪೀಠ ಸೂಚಿಸಿದೆ.

ಪ್ರಕರಣವೇನು?: ಮಂಗಳೂರು ಸಮೀಪದ ಕಂಕನಾಡಿ ಬಿ.ಹಳ್ಳಿಯ ಗೋರಿಗುಡ್ಡದಲ್ಲಿರುವ ಜಮೀನಿನ ಕೆಲವು ಭಾಗಗಳನ್ನು ಎನ್‌ಎಚ್‌ಎಐ ಸ್ವಾಧೀನಪಡಿಸಿಕೊಂಡಿದ್ದನ್ನು ಪ್ರಶ್ನಿಸಿ ಅರ್ಜಿದಾರರು 2026ರಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ರಾಷ್ಟ್ರೀಯ ಹೆದ್ದಾರಿ ಕಾಯ್ದೆಯ ಕಲಂ 3(ಎ) ಅಡಿಯಲ್ಲಿ ಎನ್‌ಎಚ್‌ಎಐ ಹೊರಡಿಸಿದ ಪ್ರಾಥಮಿಕ ಅಧಿಸೂಚನೆಯಲ್ಲಿ ಆಸ್ತಿಯ ವಿವರಗಳು ಅಥವಾ ಹೆಸರನ್ನು ಪ್ರಕಟಿಸಲಾಗಿಲ್ಲ. ಅವರಿಗೆ ಯಾವುದೇ ನೋಟಿಸ್ ನೀಡಿಲ್ಲ ಅಥವಾ ವಿಚಾರಣೆಯ ಅವಕಾಶವನ್ನೂ ಒದಗಿಸಿಲ್ಲ ಎಂದು ಅವರು ಅರ್ಜಿಯಲ್ಲಿ ಪ್ರಶ್ನಿಸಿದ್ದರು.