ಮನೆ ರಾಜ್ಯ ಪಿಎಸ್‌ಐ ಅಕ್ರಮ ಪ್ರಕರಣ: ಸಚಿವ ಅಶ್ವತ್ಥ ನಾರಾಯಣ ಸಂಬಂಧಿ ಸೇರಿ ನಾಲ್ವರ ಬಂಧನ; ಪ್ರತ್ಯೇಕ ಎಫ್‌...

ಪಿಎಸ್‌ಐ ಅಕ್ರಮ ಪ್ರಕರಣ: ಸಚಿವ ಅಶ್ವತ್ಥ ನಾರಾಯಣ ಸಂಬಂಧಿ ಸೇರಿ ನಾಲ್ವರ ಬಂಧನ; ಪ್ರತ್ಯೇಕ ಎಫ್‌ ಐಆರ್‌

0

ಬೆಂಗಳೂರು (Bengaluru): ಪಿಎಸ್‌ಐ ಹುದ್ದೆಗಳ ನೇಮಕಾತಿ ಅಕ್ರಮ ಸಂಬಂಧ ಸಚಿವ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ಅವರ ಸಂಬಂಧಿ ದರ್ಶನ್‌ ಗೌಡ ಸೇರಿದಂತೆ ನಾಲ್ವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.

ಪ್ರಕರಣ ಸಂಬಂಧ ಮೂರು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿದೆ. ಕಲಾಸಿಪಾಳ್ಯ ಠಾಣೆ ಹೆಡ್‌ ಕಾನ್‌ಸ್ಟೆಬಲ್ ಎಚ್‌.ಬಿ. ಹರೀಶ್, ನೆಲಮಂಗಲ ಠಾಣೆ ಕಾನ್‌ಸ್ಟೆಬಲ್ಎ ಚ್‌.ಜಿ. ಮೋಹನ್‌ಕುಮಾರ್, ಅಭ್ಯರ್ಥಿಗಳಾದ ವಿ. ದರ್ಶನ್ ಗೌಡ ಹಾಗೂ ದಿಲೀಪ್‌ಕುಮಾರ್ ಬಂಧಿತರು.

ಇವರನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಾಗುವುದು ಎಂದು ಸಿಐಡಿ ಮೂಲಗಳು ಹೇಳಿವೆ.

ಪಿಎಸ್‌ಐ ಹುದ್ದೆಗೆ ಅಕ್ರಮವಾಗಿ ಆಯ್ಕೆಯಾಗಲು ಬಯಸಿದ್ದ ನಾಲ್ವರು ಆರೋಪಿಗಳು, ಮಧ್ಯವರ್ತಿಗಳ ಮೂಲಕ ಲಕ್ಷಾಂತರ ರೂಪಾಯಿ ನೀಡಿ ತಮ್ಮ ಒಎಂಆರ್ ಪ್ರತಿ ತಿದ್ದಿಸಿದ್ದರು. ನಾಲ್ವರ ಹೆಸರು ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿತ್ತು. ಇವರ ಒಎಂಆರ್ ಅಸಲಿ ಪ್ರತಿ ಹಾಗೂ ಕಾರ್ಬನ್ ಪ್ರತಿ ಪರಿಶೀಲಿಸಿದಾಗ, ಅಕ್ರಮ ಎಸಗಿದ್ದು ಪತ್ತೆಯಾಗಿದೆ.

ಅಕ್ರಮ ಎಸಗಿದ್ದ 22 ಅಭ್ಯರ್ಥಿಗಳ ವಿರುದ್ಧ ಈ ಹಿಂದೆ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಪೊಲೀಸ್ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್ ಹಾಗೂ ನೌಕರರು ಸೇರಿ 35ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿತ್ತು. ಇದೀಗ ಬಂಧಿಸಲಾಗಿರುವ ನಾಲ್ವರು ಆರೋಪಿಗಳ ವಿರುದ್ಧ ರಾಮಮೂರ್ತಿನಗರ, ಕೋರಮಂಗಲ ಹಾಗೂ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಎಫ್‌ಐಆರ್ ದಾಖಲಿಸಲಾಗಿದೆ.

ಆರೋಪಿ ವಿ. ದರ್ಶನ್ ಗೌಡ, ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ 5ನೇ ರ‍್ಯಾಂಕ್ ಪಡೆದಿದ್ದ. ಈತ ಸಹ ಲಕ್ಷಾಂತರ ರೂಪಾಯಿ ನೀಡಿ ಅಕ್ರಮ ಎಸಗಿದ್ದಾರೆ’ ಎಂದು ಸಿಐಡಿ ಮೂಲಗಳು ತಿಳಿಸಿವೆ. ಕುಣಿಗಲ್ ನಿವಾಸಿ ಹರೀಶ್, ಕಾನ್‌ಸ್ಟೆಬಲ್ ಆಗಿ ಪೊಲೀಸ್ ಇಲಾಖೆಗೆ ಸೇರಿ, ಹೆಡ್‌ ಕಾನ್‌ಸ್ಟೆಬಲ್ ಆಗಿದ್ದ. ಪಿಎಸ್ಐ ಆಗಲು ಲಕ್ಷಾಂತರ ಹಣ ಕೊಟ್ಟು, ಸೇವಾನಿರತರ ಮೀಸಲಾತಿಯಡಿ 2ನೇ ರ‍್ಯಾಂಕ್ ಗಳಿಸಿದ್ದ.