ನವದೆಹಲಿ: ಫಾರ್ಮುಲಾ ಇ– ರೇಸ್’ ಪ್ರಕರಣದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದು ಮಾಡಲು ಸಾಧ್ಯವಿಲ್ಲ ಎಂದಿರುವ ಹೈಕೋರ್ಟ್ ಆದೇಶವನ್ನು ಪರಿಶೀಲಿಸಲು ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿದೆ.
ನ್ಯಾಯಮೂರ್ತಿಗಳಾದ ಬೇಲಾ ಎಂ. ತ್ರಿವೇದಿ ಮತ್ತು ಪ್ರಸನ್ನ ಬಿ. ವರಾಳೆ ಅವರನ್ನು ಒಳಗೊಂಡ ನ್ಯಾಯಪೀಠವು, ಹೈಕೋರ್ಟ್ ತೀರ್ಪಿನ ವಿಚಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ತಿಳಿಸಿತು. ನಂತರ ರಾವ್ ಪರ ವಕೀಲರು ತಮ್ಮ ಅರ್ಜಿಯನ್ನು ಹಿಂಪಡೆದರು.
ಜನವರಿ 7ರಂದು ಎಫ್‌ಐಆರ್ ರದ್ದು ಮಾಡಲು ಹೈಕೋರ್ಟ್ ನಿರಾಕರಿಸಿತ್ತು ಮತ್ತು ಬಂಧಿಸದಂತೆ ಕೆಟಿಆರ್ ಅವರು ಪಡೆದಿದ್ದ ರಕ್ಷಣೆಯನ್ನು ತೆಗೆದುಹಾಕಿತ್ತು.
ಕೆ.ಟಿ ರಾಮರಾವ್ ಅವರು ಸೂಕ್ತ ನಿಯಮಗಳನ್ನು ಪಾಲಿಸದೇ ವಿದೇಶಿ ಕಂಪನಿಗೆ ₹55 ಕೋಟಿ ವರ್ಗಾಯಿಸಲು ಅನುಮತಿ ನೀಡಿದ್ದಾರೆ ಎಂದು ಎಸಿಬಿ ಆರೋಪಿಸಿದೆ.














