ಮನೆ ರಾಜ್ಯ ಕನಿಷ್ಠ ಬೆಂಬಲ ಬೆಲೆ ವ್ಯಾಪ್ತಿಗೆ ಎಲ್ಲ ಸಿರಿಧಾನ್ಯಗಳ ಸೇರ್ಪಡೆ: ಸಚಿವ ಚಲುವರಾಯಸ್ವಾಮಿ ಬೇಡಿಕೆ

ಕನಿಷ್ಠ ಬೆಂಬಲ ಬೆಲೆ ವ್ಯಾಪ್ತಿಗೆ ಎಲ್ಲ ಸಿರಿಧಾನ್ಯಗಳ ಸೇರ್ಪಡೆ: ಸಚಿವ ಚಲುವರಾಯಸ್ವಾಮಿ ಬೇಡಿಕೆ

0

ಬೆಂಗಳೂರು: ರಾಗಿ, ಜೋಳದಂತೆ ಇತರೆ ಸಿರಿಧಾನ್ಯಗಳನ್ನು ಕನಿಷ್ಠ ಬೆಂಬಲ ಯೋಜನೆಯ ವ್ಯಾಪ್ತಿಗೆ ತರಬೇಕು.ಜೋಳಕ್ಕೆ ಈಗ ಹಿಂಗಾರು ಹಂಗಾಮಿಗೆ ನೀಡುತ್ತಿರುವ ಬೆಂಬಲ ಬೆಲೆ ಮುಂಗಾರಿನಿಂದಲೇ ಅನ್ವಯಿಸಬೇಕು ಎಂದು ರಾಜ್ಯ ಸರ್ಕಾರ ಕೋರಿದೆ.

Join Our Whatsapp Group


ಕೇಂದ್ರ ಕೃಷಿ ಸಚಿವ ಶಿವರಾಜ ಸಿಂಗ್ ಚೌಹಾಣ್‌ರಿಗೆ ಈ ಕುರಿತು ರಾಜ್ಯದ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಶನಿವಾರ ಮನವಿ ಸಲ್ಲಿಸಿದ್ದಾರೆ.

ಸಿರಿಧಾನ್ಯ ಉತ್ಪಾದನೆಗೆ ಉತ್ತೇಜನ, ಮೌಲ್ಯವರ್ಧಿತ ಉತ್ಪನ್ನಗಳ ತಯಾರಿ, ಮಾರಾಟದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ಕೇಂದ್ರ ಸರ್ಕಾರ ನೆರವು ನೀಡಿ ಪ್ರೋತ್ಸಾಹಿಸುವ ಅಗತ್ಯವಿದೆ ಎಂದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಜ.23 ರಿಂದ 25ರವರೆಗೆ ನಡೆಯಲಿರುವ ಅಂತಾರಾಷ್ಟ್ರೀಯ ಸಾವಯವನ ಸಿರಿಧಾನ್ಯ ಮೇಳದಲ್ಲಿ ಭಾಗವಹಿಸಬೇಕು ಎಂದು ಚೌಹಾಣ್‌ರಿಗೆ ಆಹ್ವಾನಿಸಿದರು.

ಹಣ ಬಳಕೆ ಪ್ರಮಾಣಪತ್ರಕ್ಕೆ ಸಲಹೆ
ಮನವಿಗೆ ಶಿವರಾಜ್ ಸಿಂಗ್ ಚೌಹಾಣ್ ಪ್ರತಿಕ್ರಿಯಿಸಿ, ಆರ್ಥಿಕ ವರ್ಷ ಕೊನೆಯಾಗುತ್ತಿದ್ದು, ನೀಡಿದ ಅನುದಾನವನ್ನು ಸಂಪೂರ್ಣ ವೆಚ್ಚ ಮಾಡಿ ಹಣ ಬಳಕೆ ಪ್ರಮಾಣಪತ್ರ ಸಲ್ಲಿಸಿದ ಕೂಡಲೇ ಕೃಷಿ ಮತ್ತು ಇತರೆ ಇಲಾಖೆಗಳಿಗೆ ಹೆಚ್ಚುವರಿ ಅನುದಾನ ಒದಗಿಸಲಾಗುವುದು.

ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಒಟ್ಟಾಗಿ ಕಾರ್ಯನಿರ್ವಹಿಸೋಣ. ರಾಜ್ಯಕ್ಕೆ ಬೇಕಾದ ಎಲ್ಲ ನೆರವು ಒದಗಿಸಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂಬ ಆಶ್ವಾಸನೆ ನೀಡಿದರು. ಈ ಸಂದರ್ಭದಲ್ಲಿ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ಕೃಷಿ ಇಲಾಖೆ ಅಧಿಕಾರಿಗಳು ಇದ್ದರು.

ಇತರ ಬೇಡಿಕೆಗಳು

ಕೃಷಿ ಕ್ಷೇತ್ರದ ಬಲವರ್ಧನೆ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಪೂರಕವಾಗಿ ಕೇಂದ್ರದಿಂದ ವಿವಿಧ ಸಹಯಾಕ, ಆರ್ಥಿಕ ಸಹಕಾರ ಶೀಘ್ರವಾಗಿ ಒದಗಿಸುವುದು. ರಾಷ್ಟ್ರೀಯ ವಿಕಾಸ ಯೋಜನೆಯಡಿ ಕೃಷಿ ಯಾಂತ್ರಿಕರಣಕ್ಕೆ ರೈತರಿಗೆ ಅಧಿಕ ಆರ್ಥಿಕ ನೆರವು.

ಆನೇಕಲ್ ತಾಲೂಕಿನ ಕಾಚನಾಯಕನಹಳ್ಳಿಯಲ್ಲಿ ಗುರುತಿಸಿದ 20 ಎಕರೆ ಜಮೀನಿನಲ್ಲಿ ಪೆಸ್ಟಿಸೈಡ್ಸ್ ಾರ್ಮುಲೇಷನ್ ಟೆಕ್ನಾಲಜಿ ಸಂಸ್ಥೆ ಪ್ರಾರಂಭಕ್ಕೆ ಅನುಮೋದನೆ. ರಾಜ್ಯದಲ್ಲಿ ಹೆಚ್ಚುವರಿಯಾಗಿ 59 ತಾಲೂಕುಗಳು ರಚನೆಯಾಗಿವೆ. ಹೊಸದಾಗಿ 177 ತಾಂತ್ರಿಕ ನಿರ್ವಾಹಕರ ನೇಮಕಕ್ಕೆ ಮಂಜೂರಾತಿಯೊಂದಿಗೆ ಅನುದಾನ ಬಿಡುಗಡೆ

ಬೀಜ ಗುಣಮಟ್ಟ ನಿಯಂತ್ರಣ, ದಂಡ ಹಾಗೂ ಪರವಾನಗಿ ಶುಲ್ಕ ಹೆಚ್ಚಳಕ್ಕೆ ಸಂಬಂಧಿಸಿದಂತೆ ಹಾಲಿ ವಿವಿಧ ಕಾಯ್ದೆಗಳಿಗೆ ತಿದ್ದುಪಡಿ, ವ್ಯವಸ್ಥೆಗಳ ಸುಧಾರಣೆಗೆ ಕ್ರಮ. ರಾಜ್ಯದಲ್ಲಿ ಜಲಾನಯನದ ಅಭಿವೃದ್ಧಿಗೆ ಹೊಸದಾಗಿ ಸಲ್ಲಿಸಿದ 92 ಯೋಜನೆಗಳ ಪ್ರಸ್ತಾವನೆಗೆ ಅನುಮೋದಿಸಿ, ಅನುದಾನ ಒದಗಿಸುವುದು

ನರೇಗಾ ವ್ಯಕ್ತಿ ದಿನಗಳು 150ಕ್ಕೆ ಹೆಚ್ಚಿಸಲು ಮೊರೆ
ಉದ್ಯೋಗಕ್ಕಾಗಿ ಹೆಚ್ಚಿನ ಬೇಡಿಕೆಯಿರುವ ಕೆಲವು ಜಿಲ್ಲೆಗಳಲ್ಲಿ ವ್ಯಕ್ತಿ ದಿನದ ಗುರಿಯನ್ನು 100 ರಿಂದ 150 ದಿನಕ್ಕೆ ಹೆಚ್ಚಿಸಬೇಕು. ರೈತರು ಬಯಸಿದಂತೆ ತಮ್ಮ ಜಮೀನಿನಲ್ಲಿ ಕೃಷಿ ಚಟುವಟಿಕೆಗಳಿಗೆ ಈ ಯೋಜನೆಯಡಿ ಅವಕಾಶ ಕಲ್ಪಿಸಿ ಆರ್ಥಿಕ ಸ್ಥಿತಿ ಸುಧಾರಣೆಗೆ ನೆರವಾಗಬೇಕು ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮೊರೆಯಿಟ್ಟಿದ್ದಾರೆ.
ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪ್ರತ್ಯೇಕ ಮನವಿ ಸಲ್ಲಿಸಿದ ಅವರು, ನರೇಗಾದಡಿ ರಾಜ್ಯಗಳ ವಾರ್ಷಿಕ ಅನುಮೋದನೆಗಾಗಿ ಅನುದಾನ ಹಂಚಿಕೆ ವಿಳಂಬ ತಪ್ಪಿಸಲು ವಾರ್ಷಿಕ ಅನುಮೋತಿದ ಕಾರ್ಮಿಕ ಬಜೆಟ್‌ನ ಪ್ರಕಾರ ರಾಜ್ಯಕ್ಕೆ ವೇತನ ಮತ್ತು ವಸ್ತು ಮೊತ್ತ ನಿಗದಿ ಸೂಕ್ತವೆಂದರು.
ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಮಾರ್ಗಸೂಚಿಯನ್ನು ಪರಿಷ್ಕರಿಸಿ, 500ಕ್ಕಿಂತ ಕಡಿಮೆ ಜನಸಂಖ್ಯೆಯುಳ್ಳ ವಸತಿ ಪ್ರದೇಶಗಳನ್ನು ಪರಿಗಣಿಸಬೇಕು. ನರೇಗಾದಡಿ ಕೂಡ ಕೆಲವು ಸಡಿಲಿಕೆಗಳನ್ನು ಮಾಡುವುದು ಅಗತ್ಯವಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಅಂಗನವಾಡಿಗಳು ಸೇರಿ ಎಲ್ಲ ಸರ್ಕಾರಿ ಕಟ್ಟಡಗಳಿಗೆ ಕಾಂಪೌಂಡ್ ನಿರ್ಮಾಣ, ಗ್ರಾ.ಪಂ. ಗ್ರಂಥಾಲಯ, ವ್ಯಕ್ತಿಗಳಿಗೆ ಕೃಷಿ ನಂತರ ಕೊಯ್ಲು ಶೇಖರಣಾ ಘಟಕಗಳ ನಿರ್ಮಾಣ, ರೇಷ್ಮೆ ಘಟಕ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬೇಕು ಎಂದು ಪ್ರಿಯಾಂಕ್ ಖರ್ಗೆ ಕೋರಿದರು.