ಮನೆ ರಾಜಕೀಯ ವಿಜಯೇಂದ್ರ ವರ್ಸಸ್‌ ಸೋಮಣ್ಣ: ವಿಜಯೇಂದ್ರನನ್ನು ಹರಕೆಯ ಕುರಿ ಮಾಡಬೇಡಿ

ವಿಜಯೇಂದ್ರ ವರ್ಸಸ್‌ ಸೋಮಣ್ಣ: ವಿಜಯೇಂದ್ರನನ್ನು ಹರಕೆಯ ಕುರಿ ಮಾಡಬೇಡಿ

0

ಮೈಸೂರು (Mysuru): ಬಿಜೆಪಿಯಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ವರ್ಸಸ್‌ ಸಚಿವ ವಿ.ಸೋಮಣ್ಣ ಎಂಬಂತಹ ವಾತಾವರಣ ಸೃಷ್ಟಿಯಾಗಿದೆ. ವಿಧಾನಪರಿಷತ್‌ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಇದು ಕಂಡುಬಂದಿದೆ.

ಸಚಿವ ವಿ.ಸೋಮಣ್ಣ ಅವರು ತಮ್ಮ ಭಾಷಣದ ವೇಳೆ ವಿಜಯೇಂದ್ರ ಪರ ಜೈಕಾರ ಕೂಗಿದ ಕಾರ್ಯಕರ್ತರಿಗೆ ಚಾಟಿ ಏಟು ನೀಡಿದ್ದಾರೆ. ನಾನು 40 ವರ್ಷ ರಾಜಕೀಯ ನೋಡಿದ್ದೇನೆ. ಈ ಎಲ್ಲ ಆಟಗಳನ್ನ ನೋಡಿದ್ದೇನೆ. ಸ್ವಲ್ಪ ಸುಮ್ಮನೆ ಕುಳಿತುಕೊಳ್ಳಿ ಎಂದಿದ್ದಾರೆ. ಈ ನಡುವೆ ವೇದಿಕೆ ಮೇಲೆ ವಿಜಯೇಂದ್ರಗೆ ಹೂಗುಚ್ಚ ನೀಡಲು ಬಂದ ಕಾರ್ಯಕರ್ತನ ಮೇಲೆ ಸೋಮಣ್ಣ ಸಿಡಿಮಿಡಿಗೊಂಡರಲ್ಲದೆ, ಇದೇನಿದು ಶಿಸ್ತು ಕಲಿತುಕೊಳ್ಳಿ ಎಂದು ತಾಕೀತು ಮಾಡಿದ್ದಾರೆ.

ವಿಜಯೇಂದ್ರ ಪರ ಘೋಷಣೆಗಳಿಂದ ಕಿರಿಕಿರಿಗೆ ಒಳಗಾದವರಂತೆ ಕಂಡ ಸೋಮಣ್ಣ ಅವರು, ವಿಜಯೇಂದ್ರನಿಗೆ ಅದೃಷ್ಟ ಇದ್ದರೆ ಅವನೂ ಉನ್ನತ ಸ್ಥಾನಕ್ಕೆ ಹೋಗುತ್ತಾನೆ. ಸುಮ್ಮನೆ ವಿಜಯೇಂದ್ರನಿಗೆ ರೈಲು ಹತ್ತಿಸಿ ಹಾಳು ಮಾಡಬೇಡಿ. ವಿಜಯೇಂದ್ರ ಮುಂದೆ ಯಾರನ್ನು ಚಿಕ್ಕವರಾಗಿ ಮಾಡಬೇಡಿ. ಘೋಷಣೆ ಕೂಗಿ ಕೂಗಿ ವಿಜಯೇಂದ್ರ ನನ್ನು ಹರಕೆಯ ಕುರಿ ಮಾಡಬೇಡಿ. ನಾನು ಐದಾರು ಬಾರಿ ಶಾಸಕನಾಗಿ ಕೆಲಸ ಮಾಡಿದ್ದೇನೆ. ಗೌರವ ಕೊಡವುದನ್ನು ಕಲಿಯಿರಿ ಎಂದಿದ್ದಾರೆ.

ಸೋಮಣ್ಣ ಮಾತಿಗೆ ವಿಜಯೇಂದ್ರ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ಈ ವೇಳೆ ಅಭಿಮಾನಿಗಳನ್ನು ವಿಜಯೇಂದ್ರ ಅವರು ಸಮಾಧಾನಿಸಿದ್ದಾರೆ.

ಆಕ್ರೋಶದಲ್ಲಿ ಭಾಷಣ:

ಆಕ್ರೋಶದಲ್ಲಿ ಭಾಷಣ ಮಾಡಿದ ಸೋಮಣ್ಣ ಅವರು, ಬೆಂಗಳೂರಿನಲ್ಲಿ ಸ್ವತಂತ್ರವಾಗಿಯೂ ಗೆದ್ದಿದ್ದೇನೆ. ಕೆಂಪೇಗೌಡರ ಬೆಂಗಳೂರಿನಲ್ಲಿ ಈ ಸೋಮಣ್ಣ ಐದು ಬಾರಿ ಶಾಸಕನಾಗಿದ್ದಾನೆ. ಇದನ್ನು ಅರ್ಥ ಮಾಡಿಕೊಳ್ಳಿ. ನನ್ನ ದುಡಿಮೆಯೂ ಬಹಳ ದೊಡ್ಡದಿದೆ. ಇದನ್ನು ಅರ್ಥ ಮಾಡಿಕೊಳ್ಳಿ. ಯಡಿಯೂರಪ್ಪ ಅವರನ್ನು ಯಾರು ಹೇಗೆ ನಡೆಸಿಕೊಂಡರು ಎಂಬುದು ಗೊತ್ತಿದೆ. ವಿಜಯೇಂದ್ರ ಎಂಎಲ್‌ ಸಿ ಆಗಬೇಕೆಂದು ಮೊದಲು ಹೇಳಿದವನು ನಾನು. ಬೇರೆಯವರ ಬಗ್ಗೆ ಮಾತಾಡವಾಗ ಎಲ್ಲಾ ಯೋಚನೆ ಮಾಡಿ. ವಿಜಯೇಂದ್ರಗೆ 41 ವರ್ಷ ನನಗೆ 71 ವರ್ಷ. ನನಗೂ ವಿಜಯೇಂದ್ರನಿಗೂ ಯಾಕೆ ಪೈಪೋಟಿ ತರುತ್ತೀರಾ? ಎಂದು ಪ್ರಶ್ನಿಸಿದ್ದಾರೆ.

ಈ ಸಮಾಜಕ್ಕೆ ನನ್ನದೇ ಆದ ಕೊಡುಗೆ ಇದೆ. ಸೋಮಣ್ಣನ ಶಕ್ತಿಯೂ ಇದೆ. ವಿಜಯೇಂದ್ರ ವರುಣಾದಲ್ಲಿ ಆದರೂ ಸ್ಪರ್ಧಿಸಲಿ, ಹನೂರಿನಲ್ಲಾದರೂ ಸ್ಪರ್ಧಿಸಲಿ. ಹೈಕಮಾಂಡ್ ಹೇಳಿದಂತೆ ಅವರ ಸ್ಪರ್ಧೆ ನಡೆಯುತ್ತೆ. ನನ್ನ ಕ್ಷೇತ್ರದ ಜನ ನನ್ನನ್ನು ತಲೆ ಮೇಲೆ ಹೊತ್ತು ಕೊಂಡು ಮೆರೆಯುತ್ತಿದ್ದಾರೆ. ಮೊದಲು ನೀವು ಸರಿಯೋಗಿ. ನನಗೆ ನನ್ನದೆ ಆದ ಕ್ಷೇತ್ರವಿದೆ ಎಂದಿದ್ದಾರೆ.

ಸಭೆಗೂ ಮುನ್ನ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ  ಅಧ್ಯಕ್ಷ ಕಾಪು ಸಿದ್ದಲಿಂಗ ಸ್ವಾಮಿ ಅವರು, ವಿಜಯೇಂದ್ರ ಹಾಗೂ ವಿ. ಸೋಮಣ್ಣ ನಮ್ಮ ಸಮಾಜದ ಎರಡು ಕಣ್ಣುಗಳು. ಇಬ್ಬರು ನಾಯಕರು ಬಂದಾಗ ಪ್ರತ್ಯೇಕ ಘೋಷಣೆ ಮುಜುಗರ ತರಬೇಡಿ ಎಂದು ಕಾರ್ಯಕರ್ತರಿಗೆ ಎಚ್ಚರಿಕೆಯ ಸಂದೇಶ ನೀಡಿದ್ದರು. ಆದರೂ ಕಾರ್ಯಕರ್ತರು ವಿಜಯೇಂದ್ರ ಪರ ಘೋಷಣೆ ಕೂಗಿದ್ದಾರೆ.

ಮೋದಿ ಕಾಮಧೇನು: ಪ್ರತಾಪ್‌ ಸಿಂಹ

ಮೋದಿ ಕೇಳಿದ್ದೆಲ್ಲಾ ಕೊಡುವ ಕಾಮಧೇನು. ಮೋದಿ ಅವರು ಮೈಸೂರಿಗೆ ಬರುವಾಗ ಅವರನ್ನು ಪರಿಷತ್ ಚುನಾವಣೆಯ ಗೆಲುವಿನೊಂದಿಗೆ ಸ್ವಾಗತಿಸೋಣ. ವಿಜಯೇಂದ್ರ – ಸೋಮಣ್ಣ ಅವರು ಜೋಡೆತ್ತುಗಳಾಗಿ ದುಡಿದರೆ ಮೈಸೂರು ಭಾಗದಲ್ಲಿ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ದಿಗ್ವಿಜಯ ಖಚಿತ ಎಂದರು.

ಪ್ರಚಾರ ಸಭೆಯಲ್ಲಿ ಶಾಸಕ ಎಲ್. ನಾಗೇಂದ್ರ, ಮಾಜಿ ಎಂಎಲ್ ಸಿ ತೋಂಟದಾರ್ಯ, ಅಭ್ಯರ್ಥಿ ಮೈ.ವಿ.ರವಿಶಂಕರ್, ಮೇಯರ್ ಸುನಂದಾ ಪಲಾನೇತ್ರ ಮತ್ತಿತರರು ಭಾಗಿಯಾಗಿದ್ದರು.

ವಿವಿಧೆಡೆ ಸೋಮಣ್ಣ ಮತಯಾಚನೆ:

ನಗರದ ಎಸ್‌ ಜೆಸಿ ಕಾಲೇಜು ಸೇರಿದಂತೆ ವಿವಿಧೆಡೆ ವಿ. ಸೋಮಣ್ಣ ಅವರು ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ್ ಪರ ಮತಯಾಚನೆ ಮಾಡಿದ್ದಾರೆ. ಈ ವೇಳೆ ವಿಶೇಷ ಚೇತನ ಮಕ್ಕಳನ್ನ ಭೇಟಿಯಾಗಿ ಅವರೊಂದಿಗೆ ಸೆಲ್ಫಿ ತೆಗೆಸಿಕೊಂಡರು. ಸೋಮಣ್ಣಗೆ ಬಿಜೆಪಿ ಮುಖಂಡರುಗಳು ಸಾಥ್‌ ನೀಡಿದ್ದಾರೆ. ಈ ವೇಳೆ ತಮ್ಮ ಪಕ್ಷದ ಅಭ್ಯರ್ಥಿ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.