ಮನೆ ಮನರಂಜನೆ ಮಹಾರಾಣಿ ಯೇಸುಬಾಯಿ ನೋಟದಲ್ಲಿ ರಶ್ಮಿಕಾ ಮಂದಣ್ಣ

ಮಹಾರಾಣಿ ಯೇಸುಬಾಯಿ ನೋಟದಲ್ಲಿ ರಶ್ಮಿಕಾ ಮಂದಣ್ಣ

0

ಬಾಲಿವುಡ್​ ಬಹುಬೇಡಿಕೆ ನಟ ವಿಕ್ಕಿ ಕೌಶಲ್ ಹಾಗೂ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅಭಿನಯದ ಪೀರಿಯಾಡಿಕಲ್​​ ಡ್ರಾಮಾ ‘ಛಾವಾ’ದ ಬಿಡುಗಡೆ ದಿನಾಂಕ ಸಮೀಪಿಸುತ್ತಿದೆ. ನಿನ್ನೆಯಷ್ಟೇ, ಚಿತ್ರದಿಂದ ವಿಕ್ಕಿ ಕೌಶಲ್ ಅವರ ಮೋಷನ್ ಪೋಸ್ಟರ್ ಅನಾವರಣಗೊಳಿಸಲಾಗಿತ್ತು. ವಿವಿಧ ನೋಟಗಳಲ್ಲಿ ನಾಯಕ ನಟನ ದರ್ಶನವಾಗಿತ್ತು. ಇದೀಗ ಚಿತ್ರದಿಂದ ರಶ್ಮಿಕಾ ಮಂದಣ್ಣ ಅವರ ಫಸ್ಟ್ ಲುಕ್ ಅನ್ನು ಬಿಡುಗಡೆಗೊಳಿಸಲಾಗಿದೆ.

Join Our Whatsapp Group

‘ಛಾವಾ’ ಚಿತ್ರದ ಹಿಂದಿರುವ ‘ಮ್ಯಾಡಾಕ್​ ಫಿಲ್ಮ್ಸ್’ ಇಂದು ನಾಯಕ ನಟಿ ರಶ್ಮಿಕಾ ಮಂದಣ್ಣ ಅವರ ಫಸ್ಟ್ ಲುಕ್ ಪೋಸ್ಟರ್‌ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ಎರಡು ಪೋಸ್ಟರ್‌ಗಳನ್ನು ಶೇರ್ ಮಾಡಲಾಗಿದ್ದು, ಇದರಲ್ಲಿ ರಶ್ಮಿಕಾ ‘ಯೇಸುಬಾಯಿ ಭೋಸಲೆ’ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

‘ಛಾವಾ’ ಚಿತ್ರದ ಟ್ರೇಲರ್ ನಾಳೆ ರಿಲೀಸ್​ ಆಗಲಿದೆ. ಅದಕ್ಕೂ ಮುನ್ನ ಹಿಸ್ಟಾರಿಕಲ್​ ಆ್ಯಕ್ಷನ್​ ಸಿನಿಮಾದಿಂದ ‘ರಶ್ಮಿಕಾ ಮಂದಣ್ಣ’ ಅವರ ನೋಟ ಅನಾವರಣಗೊಳಿಸಿ ಸಿನಿಮಾ ಸುತ್ತಲಿನ ಕ್ರೇಜ್​ ಹೆಚ್ಚಿಸಿದ್ದಾರೆ ನಿರ್ಮಾಪಕರು. ಮಹಾರಾಣಿ ಯೇಸುಬಾಯಿ ಪಾತ್ರಕ್ಕೆ ರಶ್ಮಿಕಾ ಸಂಪೂರ್ಣವಾಗಿ ಜೀವ ತುಂಬಿದ್ದಾರೆ ಅನ್ನೋದು ಈ ಪೋಸ್ಟರ್​​ಗಳಲ್ಲಿ ಗೊತ್ತಾಗುತ್ತಿದೆ. ಸಿನಿಮಾ ಫೆಬ್ರವರಿ 14, 2025ರಂದು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

ಪೋಸ್ಟರ್ ಹಂಚಿಕೊಂಡ ನಿರ್ಮಾಪಕರು, “ಪ್ರತೀ ಮಹಾನ್ ರಾಜನ ಹಿಂದೆ, ಅಪ್ರತಿಮ ಶಕ್ತಿಯುಳ್ಳ ರಾಣಿ ನಿಂತಿರುತ್ತಾಳೆ. ರಶ್ಮಿಕಾ ಮಂದಣ್ಣ ಅವರನ್ನು ಸ್ವರಾಜ್ಯದ ಹೆಮ್ಮೆ, ಮಹಾರಾಣಿ ಯೇಸುಬಾಯಿಯಾಗಿ ಪರಿಚಯಿಸಲಾಗುತ್ತಿದೆ” ಎಂದು ಬರೆದುಕೊಂಡಿದ್ದಾರೆ. ಪೋಸ್ಟರ್‌ ಗಳಲ್ಲಿ, ನ್ಯಾಷನಲ್​ ಕ್ರಶ್​​ ಸೀರೆ ಧರಿಸಿ, ಅಲೌಕಿಕ ಸೌಂದರ್ಯ ಬೀರಿದ್ದಾರೆ.

ಮೊದಲ ಪೋಸ್ಟರ್‌ನಲ್ಲಿ, ರಶ್ಮಿಕಾ ಹಸಿರು ಸೀರೆ ಉಟ್ಟು, ಆಭರಣಗಳನ್ನು ತೊಟ್ಟು ನಗುಮೊಗದಲ್ಲಿ ಮಹಾರಾಣಿಯ ನೋಟ ಬೀರಿದ್ದಾರೆ. ಮತ್ತೊಂದು ಪೋಸ್ಟರ್‌ನಲ್ಲಿ, ನಟಿಯ ಗಂಭೀರ ಮುಖಭಾವವನ್ನು ಕಾಣಬಹುದು. ಪೋಸ್ಟರ್‌ಗಳಿಗೆ ಪ್ರತಿಕ್ರಿಯಿಸುತ್ತಾ, ಸಾಮಾಜಿಕ ಮಾಧ್ಯಮ ಬಳಕೆದಾರರೋರ್ವರು, “ರಶ್ಮಿಕಾ ಅವರ ಮತ್ತೊಂದು ಬ್ಲಾಕ್‌ಬಸ್ಟರ್ ಬರುತ್ತಿದೆ” ಎಂದು ತಿಳಿಸಿದ್ದಾರೆ.

ರಶ್ಮಿಕಾ ಅವರ ನೋಟವನ್ನು ಹೊಗಳುತ್ತಾ, “ರಶ್ಮಿಕಾ ಮಂದಣ್ಣ ಯೇಸುಬಾಯಿ ನೋಟದಲ್ಲಿ ಅದ್ಭುತವಾಗಿ ಕಾಣಿಸುತ್ತಿದ್ದಾರೆ. ಅವರ ರಾಜಮನೆತನದ ಮತ್ತು ಆಕರ್ಷಕ ನೋಟವು ನಿಜವಾಗಿಯೂ ಐತಿಹಾಸಿಕ ಪಾತ್ರದ ಸಾರವನ್ನು ಸೆರೆಹಿಡಿಯುತ್ತಿದೆ. ಅವರು ಪ್ರಬಲ ಪಾತ್ರವನ್ನು ನಿರ್ವಹಿಸುವುದನ್ನು ನೋಡುವುದು ಅದ್ಭುತ” ಎಂದು ತಿಳಿಸಿದ್ದಾರೆ.

ಚಿತ್ರದಲ್ಲಿ ವಿಕ್ಕಿ ಕೌಶಲ್​​ ಮರಾಠಾ ರಾಜ ಛತ್ರಪತಿ ಸಂಭಾಜಿ ಮಹಾರಾಜ್ ಪಾತ್ರದಲ್ಲಿ ನಟಿಸಿದ್ದಾರೆ. ಶಿವಾಜಿ ಸಾವಂತ್ ಬರೆದ ಮರಾಠಿ ಕಾದಂಬರಿ “ಛಾವಾ”ದ ಕಥೆಯನ್ನು ಆಧರಿಸಿದೆ. ಈ ಬಹುನಿರೀಕ್ಷಿತ ಚಿತ್ರವನ್ನು ಲಕ್ಷ್ಮಣ್ ಉಟೇಕರ್ ನಿರ್ದೇಶಿಸಿದ್ದಾರೆ. ಸಿನಿಮಾಗೆ ಮ್ಯಾಡಾಕ್ ಫಿಲ್ಮ್ಸ್‌ನ ದಿನೇಶ್ ವಿಜನ್ ಬಂಡವಾಳ ಹೂಡಿದ್ದಾರೆ. ವಿಕ್ಕಿ, ರಶ್ಮಿಕಾ ಜೊತೆಗೆ ಅಕ್ಷಯ್ ಖನ್ನಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.