ಅರ್ಜಿ, ದಾಖಲೆ, ಅಫಿಡವಿಟ್ ಇತ್ಯಾದಿಗಳನ್ನು ನ್ಯಾಯಾಲಯಗಳು ಪರಿಗಣಿಸುವ ಮೊದಲೇ ಮಾಧ್ಯಮಗಳಿಗೆ ಬಿಡುಗಡೆ ಮಾಡುವ ಪ್ರವೃತ್ತಿ ವಕೀಲರು ಮತ್ತು ದಾವೆದಾರರಲ್ಲಿ ಬೆಳೆಯುತ್ತಿರುವುದಕ್ಕೆ ದೆಹಲಿ ಹೈಕೋರ್ಟ್ ಇತ್ತೀಚೆಗೆ ಅಸಮಾಧಾನ ವ್ಯಕ್ತಪಡಿಸಿದೆ.
ಇದು ಕಕ್ಷಿದಾರರಿಗೆ ಪೂರ್ವಗ್ರಹವನ್ನು ಉಂಟುಮಾಡಬಹುದಲ್ಲದೆ ಸಂಬಂಧಪಟ್ಟ ನ್ಯಾಯಾಲಯದ ಸ್ವತಂತ್ರ ನಿರ್ಧಾರಗಳ ಮೇಲೂ ಪರಿಣಾಮ ಬೀರಬಹುದು ಎಂದು ನ್ಯಾಯಮೂರ್ತಿಗಳಾದ ಪ್ರತಿಭಾ ಎಂ ಸಿಂಗ್ ಮತ್ತು ಅಮಿತ್ ಶರ್ಮಾ ಅವರಿದ್ದ ಪೀಠ ತಿಳಿಸಿತು.
ಹೀರೋ ಮೋಟೊಕಾರ್ಪ್ ಲಿಮಿಟೆಡ್ಗೆ ಬ್ರೈನ್ ಲಾಜಿಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್ ನೀಡಿದ್ದ ದಿನಾಂಕವಿಲ್ಲದ, ಸಹಿ ಮಾಡದ ಲೀಗಲ್ ನೋಟಿಸನ್ನು ದ ನ್ಯೂ ಇಂಡಿಯನ್ ಸುದ್ದಿ ಜಾಲತಾಣದ ಪತ್ರಕರ್ತರೊಬ್ಬರು ತಮ್ಮ ಎಕ್ಸ್ ಖಾತೆಯಲ್ಲಿ ಪ್ರಕಟಿಸಿದ್ದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.
ಹೈಕೋರ್ಟ್ ರಿಜಿಸ್ಟ್ರಿಯ ಕಾರ್ಯಚಟುವಟಿಕೆ, ಅನುಕೂಲಕರ ತೀರ್ಪು ಪಡೆಯುವುದು, ನ್ಯಾಯಾಲಯದೆದುರು ಪ್ರಕರಣ ಮಂಡಿಸುವಲ್ಲಿ ಅವ್ಯವಹಾರ ಮತ್ತಿತರ ವಿಚಾರಗಳಿಗೆ ಸಂಬಂಧಿಸಿದಂತೆ ಲೀಗಲ್ ನೋಟಿಸ್ನಲ್ಲಿ ಸುಳ್ಳು, ವೃಥಾ ಆರೋಪ ಮತ್ತು ಅವಹೇಳನ ಮಾಡಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಿತ್ತು.
ಬ್ರೈನ್ ಲಾಜಿಸ್ಟಿಕ್ಸ್ನ ನಿರ್ದೇಶಕ ರೂಪ್ ದರ್ಶನ್ ಪಾಂಡೆ ಅವರು ಉದ್ದೇಶಪೂರ್ವಕವಾಗಿ ಹೀರೋ ಮೋಟೋಕಾರ್ಪ್ನ ಪ್ರತಿಷ್ಠೆಗೆ ಧಕ್ಕೆ ತರಲು ಲೀಗಲ್ ನೋಟಿಸನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಲೀಗಲ್ ನೋಟಿಸ್ ನೀಡಿದ್ದ ಇಬ್ಬರು ವಕೀಲರು ನ್ಯಾಯಾಲಯಕ್ಕೆ ಬೇಷರತ್ ಕ್ಷಮೆ ಯಾಚಿಸಿಸ್ದು ಲೀಗಲ್ ನೋಟಿಸ್ನಲ್ಲಿ ಸುಳ್ಳು ಆರೋಪ ಮಾಡಿದ್ದಾಗಿ ಒಪ್ಪಿಕೊಂಡರು. ಈ ವೇಳೆ ವಕೀಲರು, ಪತ್ರಕರ್ತರು, ಮಾಧ್ಯಮ ಸಂಸ್ಥೆಗಳು ಹಾಗೂ ಪಕ್ಷಕಾರರ ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ನ್ಯಾಯಾಲಯ ವಿವರಿಸಿತು.
“ನ್ಯಾಯಾಂಗ ವ್ಯವಸ್ಥೆಯ ಮೇಲಿನ ನಂಬಿಕೆ ಕಡಿಮೆ ಮಾಡುವ ಯಾವುದೇ ನಡೆ ಆಶ್ರಯಿಸದಂತೆ ನೋಡಿಕೊಳ್ಳುವುದು ನ್ಯಾಯಾಲಯದ ಮುಂದೆ ಇರುವ ಪ್ರತಿಯೊಬ್ಬ ವಕೀಲರು ಮತ್ತು ದಾವೆದಾರರ ಜವಾಬ್ದಾರಿಯಾಗಿರುತ್ತದೆ ಎಂಬುದನ್ನು ಹೇಳಲು ನ್ಯಾಯಾಲಯಕ್ಕೆ ನೋವುಂಟಾಗುತ್ತಿದೆ” ಎಂದು ಅದು ಹೇಳಿದೆ.
ನ್ಯಾಯಾಲಯ ಮತ್ತು ತಮ್ಮ ಕಕ್ಷಿದಾರರ ಬಗ್ಗೆ ವಕೀಲರ ಕರ್ತವ್ಯಗಳಿಗೆ ಸಂಬಂಧಿಸಿದಂತೆ ಭಾರತೀಯ ವಕೀಲರ ಪರಿಷತ್ತು (ಬಿಸಿಐ) ಸೂಚಿಸಿದ ನಿಯಮಗಳ ಪ್ರಕಾರ ಪ್ರಸ್ತುತ ಪ್ರಕರಣದ ವಕೀಲರು ಕಾರ್ಯನಿರ್ವಹಿಸಿಲ್ಲ ಎಂದು ನ್ಯಾಯಾಲಯ ಟೀಕಿಸಿದೆ.
ವಕೀಲರ ಹೆಸರುಗಳು ಮತ್ತು ವಕೀಲರ ಪರಿಷತ್ ನೋಂದಣಿ ಸಂಖ್ಯೆಗಳನ್ನು ಲೀಗಲ್ ನೋಟಿಸ್ನಲ್ಲಿ ಉಲ್ಲೇಖಿಸದೆ ಇರುವುದು ದೆಹಲಿ ಹೈಕೋರ್ಟ್ ಮತ್ತು ಬಿಸಿಐ ನಿಯಮಗಳು ಸೂಚಿಸಿದ ಪ್ರಾಕ್ಟೀಸ್ ನಿರ್ದೇಶನಗಳಿಗೆ ವಿರುದ್ಧವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಅದರಂತೆ, ಇಬ್ಬರು ವಕೀಲರ ಮೇಲೆ ಶಿಸ್ತು ಕ್ರಮಗಳನ್ನು ಆರಂಭಿಸುವಂತೆ ದೆಹಲಿ ವಕೀಲರ ಪರಿಷತ್ಗೆ ನ್ಯಾಯಾಲಯ ಸೂಚಿಸಿದೆ.
ಲೀಗಲ್ ನೋಟಿಸ್ ಬಹಿರಂಗಪಡಿಸುವ ಮುನ್ನ ಆರೋಪಗಳನ್ನು ಪರಿಶೀಲಿಸುವುದು ಪತ್ರಕರ್ತರ ಕರ್ತವ್ಯ. ಭವಿಷ್ಯದಲ್ಲಿ ಎಚ್ಚರಿಕೆ ವಹಿಸಬೇಕು ಮತ್ತು ಹೆಚ್ಚಿನ ಜವಾಬ್ದಾರಿಯೊಂದಿಗೆ ಪತ್ರಿಕಾ ವೃತ್ತಿಯಲ್ಲಿ ತೊಡಗಬೇಕು ಎಂದು ತಿಳಿಸಿದ ನ್ಯಾಯಾಲಯ ಪತ್ರಕರ್ತನನ್ನು ಖುಲಾಸೆಗೊಳಿಸಿತು.
ಲೀಗಲ್ ನೋಟಿಸ್ ನೀಡಿದ್ದ ಪಾಂಡೆಯವರು ರೂಢಿಗತ ಅಪರಾಧಿಯಾಗಿದ್ದು ಅವರು ಕ್ಷಮೆಯಾಚನೆ ಮೂಲಕ ಪ್ರಕರಣದಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದ ನ್ಯಾಯಾಲಯ ಅವರಿಗೆ 2 ವಾರಗಳ ಸಾದಾ ಜೈಲು ಶಿಕ್ಷೆ ವಿಧಿಸಿತು.














