ಮನೆ ಸ್ಥಳೀಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಅನುದಾನ ಕೊರತೆ ಎದುರಿಸುತ್ತಿದೆ: ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್‌

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಅನುದಾನ ಕೊರತೆ ಎದುರಿಸುತ್ತಿದೆ: ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್‌

0

ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಅಗತ್ಯ ಆರ್ಥಿಕ ಅನುದಾನದ ಕೊರತೆ ಎದುರಿಸುತ್ತಿದೆ. ಸದ್ಯ ಪರಿಸ್ಥಿತಿ ನಿಭಾಯಿಸಬಹುದಾದರು, ಇದೇ ಸ್ಥಿತಿ ಮುಂದುವರೆದಲ್ಲಿ ಭವಿಷ್ಯದಲ್ಲಿ ಆತಂಕ ಕಟ್ಟಿಟ್ಟ ಬುತ್ತಿ ಎಂದು ವಿಟಿಯು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್‌ ಅಭಿಪ್ರಾಯ ವ್ಯಕ್ತಪಡಿಸಿದರು.

Join Our Whatsapp Group

ವಿಟಿಯು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್‌ ಅವರು ಮಾತನಾಡಿ, ‘ವಿಟಿಯು  ಸ್ಥಾಪನೆಗೊಂಡು  ೨೬ ವರ್ಷಗಳು ಕಳೆದಿದೆ. ಈ ಅವಧಿಯಲ್ಲಿ ಹಲವಾರು ಮೈಲುಗಲ್ಲುಗಳನ್ನು ಸ್ಥಾಪಿಸಿದೆ. ಆದರೆ, ಪ್ರಸ್ತುತ ಆರ್ಥಿಕ ಸಮಸ್ಯೆ ಎದುರಿಸುತ್ತಿದೆ ಎಂದು ಹೇಳಲು ವಿಷಾದವಾಗುತ್ತದೆ. ಇಂಥ ಪ್ರಮುಖ ವಿವಿ ತನ್ನ ಆರ್ಥಿಕ ಮೂಲ ತಾನೇ ಸೃಷ್ಟಿಸಿಕೊಳ್ಳಬೇಕು (ಸೆಲ್ಫ್‌  ಫೈನಾನ್ಸ್ ಸ್ಕೀಂ) ಎಂಬ ನಿಯಮ ಇಲ್ಲ. ಯುಜಿಸಿಯಲ್ಲೂ ನಿಯಮಗಳಿಲ್ಲ. ಇದರಿಂದ ಆರ್ಥಿಕ ಮುಗ್ಗಟ್ಟು ಎದುರಿಸುವಂತಾಗಿದೆ.

ವಿಪರ್ಯಾಸವೆಂದರೆ ಎಂಜಿನಿಯರಿಂಗ್‌ನಂಥ ವೃತ್ತಿಪರ ಕೋರ್ಸ್‌ಗಳಿಗೆ ಶುಲ್ಕ ಹೆಚ್ಚು ಬರುವುದೆಂದು ಸರ್ಕಾರ ಅನುದಾನ ನೀಡುತ್ತಿಲ್ಲ. ಜತೆಗೆ ಸೆಲ್ಫ್‌ ಪೈನಾನ್ಸ್‌ ಸ್ಕೀಂ ಮೂಲಕ ಸಂಪನ್ಮೂಲ ಕ್ರೂಢೀಕರಿಸಲು ಅನುಮತಿ ನೀಡುತ್ತಿಲ್ಲ. ಮೈಸೂರು ವಿವಿಯಲ್ಲಿ ಸೆಲ್ಫ್‌ ಫೈನಾನ್ಸ್‌ ಸ್ಕೀಂ ಮೂಲಕ ಸಂಪನ್ಮೂಲ ಸಂಗ್ರಹ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದೆ. ಇದೇ ರೀತಿ ವಿಟಿಯುಗೂ ಅನುಮತಿ ನೀಡುವಂತೆ ಕೋರಿ ಸರಕಾರಕ್ಕೆ ಪತ್ರೆ ಬರೆಯಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ  ಎಂದು ವಿಟಿಯು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ  ವಿಷಾಧಿಸಿದರು.

ವಿಟಿಯು ವಾರ್ಷಿಕ ಅಂದಾಜು ₹200 ಕೋಟಿ ನೋಂದಣಿ ಶುಲ್ಕ ಸಂಗ್ರಹಿಸುತ್ತದೆ. ಈ ಪೈಕಿ ವೇತನಕ್ಕಾಗಿಯೇ 198 ಕೋಟಿ ರೂ. ವ್ಯಯವಾಗುತ್ತದೆ. ಇದರಿಂದ ಸಂಶೋಧನೆ, ಕೌಶಲ ಅಭಿವೃದ್ಧಿ ಹಾಗೂ ಅನ್ವೇಷಣಾ ಪ್ರಕ್ರಿಯೆಗೆ ಹಿನ್ನಡೆ ಉಂಟಾಗಿದೆ. ಆದ್ದರಿಂದ ಸರಕಾರ, ವೇತನ ಅನುದಾನ ನೀಡಿದರೆ ವಿಶ್ವವಿದ್ಯಾಲಯದ ದೊಡ್ಡ ಕೊರತೆ ನೀಗುತ್ತದೆ. ವಾರ್ಷಿಕ ಅನುದಾನವಾಗಿ ₹100 ಕೋಟಿ ನೀಡಿದರೂ ಸಾಕಷ್ಟು ಬೆಳವಣಿಗೆ ಸಾಧ್ಯವಾಗಲಿದೆ ಎಂದು ಪ್ರೊ.ಎಸ್.ವಿದ್ಯಾಶಂಕರ್‌ ಅಭಿಪ್ರಾಯಪಟ್ಟರು.

ವಿಟಿಯು ರಾಜ್ಯದ ಏಕಮಾತ್ರ ಸರ್ಕಾರಿ ತಾಂತ್ರಿಕ ವಿಶ್ವವಿದ್ಯಾಲಯ- ವಾಗಿದ್ದು, ಇದರ ವ್ಯಾಪ್ತಿಯಲ್ಲಿ 3 ಲಕ್ಷ ವಿದ್ಯಾರ್ಥಿಗಳು ಇದ್ದಾರೆ. ‘ತಾಂತ್ರಿಕ ಕ್ಷೇತ್ರಕ್ಕೆ ಹಿನ್ನಡೆಯಾದರೆ, ಅದರ ಪರಿಣಾಮ ಕೃಷಿ, ಕೈಗಾರಿಕೆ ಮತ್ತು ಸಾಮಾಜಿಕ ಅಭಿವೃದ್ಧಿ ಮೇಲೆ ಆಗುತ್ತದೆ. ಅಧುನಿಕ ಜಗತ್ತಿಗೆ ಸೂಕ್ತ ಮಾನವ ಸಂಪನ್ಮೂಲ ಸಿದ್ದಗೊಳಿಸುವ ಸಾಮರ್ಥ್ಯ ವಿಟಿಯುಗೆ ಇದೆ. ವರ್ಷಕ್ಕೆ ಎರಡು ಘಟಿಕೋತ್ಸವ ಮಾಡುತ್ತೇವೆ. ಪರೀಕ್ಷೆ ಮುಗಿದ ಮೂರು ಗಂಟೆಯಲ್ಲಿ ಫಲಿತಾಂಶ ನೀಡುತ್ತೇವೆ. ಇಂಥ ಸುಧಾರಣಾ ಕ್ರಮಗಳಿಗೆ ಆರ್ಥಿಕ ಮುಗ್ಗಟ್ಟು ಕಾಡುತ್ತಿದೆ ಎಂದು ವಿದ್ಯಾಶಂಕರ ತಿಳಿಸಿದರು.