ದಾವಣಗೆರೆ: ಹೊನ್ನಾಳಿಯಲ್ಲಿ ಖಾಸಗಿ ಫೈನಾನ್ಸ್ ಕಾಟದ ಆರೋಪ ಕೇಳಿ ಬಂದಿದೆ. ಕಾಟಕ್ಕೆ ಹೆದರಿ (ಭಾನುವಾರ) ಸರ್ಕಾರಿ ಶಾಲಾ ಶಿಕ್ಷಕಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ತುಂಗಾಭದ್ರ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅಗ್ನಿಶಾಮಕ ಸಿಬ್ಬಂದಿ, ಮುಳುಗು ತಜ್ಞರು ಮೃತ ದೇಹಕ್ಕಾಗಿ ಹುಡುಕಾಟ ನಡೆಸಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ರಾಘವೇಂದ್ರ ಮಠದ ಮುಂಭಾಗವಿರುವ ತುಂಗಾಭದ್ರ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸರ್ಕಾರಿ ಶಾಲೆ ಶಿಕ್ಷಕಿ ಪುಷ್ಪಲತ (46) ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕಿ. ಇವರು ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ನಿವಾಸಿಯಾಗಿದ್ದಾರೆ.
ಹೊನ್ನಾಳಿ ಪಟ್ಟಣದಲ್ಲಿ ಮನೆ ಕಟ್ಟಲು ಶಿವಮೊಗ್ಗ ಮೂಲದ ಖಾಸಗಿ ಮೈಕ್ರೋ ಫೈನಾನ್ಸ್ನಲ್ಲಿ 40 ಲಕ್ಷ ಸಾಲ ಮಾಡಿಕೊಂಡಿದ್ದೆವು. ಸಾಲದ 01 – 02 ಕಂತು ಪಾವತಿ ಮಾಡದೇ ಇದ್ದಿದ್ದರಿಂದ ಸಾಲ ಹಿಂದಿರುಗಿಸುವಂತೆ ಫೈನಾನ್ಸ್ನವರು ಶಾಲೆ ಹಾಗೂ ಮನೆ ಬಾಗಿಲಿಗೆ ಬರುತ್ತಿದ್ದರು. ಪುಷ್ಪಲತಾ ಅವರು ರಟ್ಟಿಹಳ್ಳಿ ತಾಲೂಕಿನ ತುಮ್ಮಿನಕಟ್ಟೆ ಗ್ರಾಮದಲ್ಲಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅಲ್ಲಿಗೂ ಸಾಲ ಪಾವತಿಗೆ ಫೈನಾನ್ಸ್ನವರು ಬರುತ್ತಿದ್ದರು, ಸೆನ್ಸಿಟೀವ್ ಆಗಿದ್ದ ಪುಷ್ಪಲತ ಸಾಕಷ್ಟು ನೊಂದಿದ್ದರು. ಅದು ಸಾಲದು ಎಂಬಂತೆ ಪೊಲೀಸ್ ಸ್ಟೇಷನ್ನಲ್ಲಿ ಕೇಸ್ ಕೂಡ ಹಾಕಿದ್ದರು ಎಂದರು.














