ಪ್ರಯಾಗ್ ರಾಜ್(ಉತ್ತರ ಪ್ರದೇಶ)/ಬೆಳಗಾವಿ: ಪವಿತ್ರ ಮಹಾಕುಂಭ ಮೇಳ ನಡೆಯುತ್ತಿರುವ ಇಲ್ಲಿನ ತ್ರಿವೇಣಿ ಸಂಗಮದ ಸಮೀಪ ತಡರಾತ್ರಿ ಸಂಭವಿಸಿದ ಕಾಲ್ತುಳಿತದಲ್ಲಿ ಹಲವಾರು ಭಕ್ತರು ಗಾಯಗೊಂಡಿದ್ದು, ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಯಿತು.
ಕಾಲ್ತುಳಿತದ ವೇಳೆ ನೂಕು ನುಗ್ಗಲು ಉಂಟಾದಾಗ ಸ್ನಾನಕ್ಕೆ ಸೇರಿದ್ದ ಭಕ್ತರು ಚೆಲ್ಲಾಪಿಲ್ಲಿಯಾಗಿ ಓಡಿದ್ದು, ಹಲವರು ನಾಪತ್ತೆಯಾಗಿರುವುದಾಗಿ ವರದಿಯಾಗಿದೆ. ತೀವ್ರ ಗಾಯಗೊಂಡವರನ್ನು ತಕ್ಷಣವೇ ಆಂಬ್ಯುಲೆನ್ಸ್ನಲ್ಲಿ ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕಾಲ್ತುಳಿತದ ವೇಳೆ ಕರ್ನಾಟಕದ ಬೆಳಗಾವಿಯಿಂದ ತೆರಳಿದ್ದ ಕೆಲವರು ನಾಪತ್ತೆಯಾಗಿರುವ ಮಾಹಿತಿ ಲಭ್ಯವಾಗಿದೆ.
ಬೆಳಗಾವಿಯ ಮಹಿಳೆ ಸರೋಜಿನಿ ಅವರು, “ನಾವು ಎರಡು ಬಸ್ ಗಳಲ್ಲಿ 60 ಜನ ಮಹಾಕುಂಭ ಮೇಳಕ್ಕೆ ಬಂದಿದ್ದೇವೆ. ಇದ್ದಕ್ಕಿದ್ದಂತೆ ಕಾಲ್ತುಳಿತ ಉಂಟಾಯಿತು. ನಮ್ಮ ಜೊತೆ ಬಂದರಲ್ಲಿ ನಾಲ್ಕೈದು ಜನ ಕಾಣುತ್ತಿಲ್ಲ. ನಮ್ಮದು ಒಂಭತ್ತು ಜನರ ಗುಂಪು ಇತ್ತು. ಇದರಲ್ಲಿ ಮೂರ್ನಾಲ್ಕು ಜನರು ಇಲ್ಲೇ ಇದ್ದಾರೆ. ಉಳಿದವರು ಕಾಣುತ್ತಿಲ್ಲ” ಎಂದು ಆತಂಕ ವ್ಯಕ್ತಪಡಿಸಿದರು.
ಘಟನೆಯಲ್ಲಿ ಕೆಲವರು ಮೃತಪಟ್ಟಿರಬಹುದೆಂದೂ ಶಂಕಿಸಲಾಗಿದೆ. ಆದರೆ ಸಾವು-ನೋವಿನ ಬಗ್ಗೆ ಅಧಿಕೃತ ಮಾಹಿತಿ ದೊರೆತಿಲ್ಲ. ಕಾಲ್ತುಳಿತ ವೇಳೆ ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಶೂ, ಚಪ್ಪಲಿ, ಬಟ್ಟೆಗಳು ಘಟನೆಯ ಗಂಭೀರತೆಯನ್ನು ಸೂಚಿಸುತ್ತಿವೆ.
ಇಂದು 10 ಕೋಟಿ ಭಕ್ತರಿಂದ ಪವಿತ್ರ ಸ್ನಾನ ಸಾಧ್ಯತೆ: ಪ್ರಯಾಗರಾಜ್ನಲ್ಲಿ ಈಗಾಗಲೇ ಮಕರ ಸಂಕ್ರಾಂತಿ, ಪೌರ್ಣಿಮೆ ಸೇರಿದಂತೆ ಮಹತ್ವದ ದಿನಗಳಂದು ಕೋಟ್ಯಂತರ ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ. ಇಂದು ಮೌನಿ ಅಮಾವಾಸ್ಯೆಯಾಗಿದ್ದು ಮತ್ತೊಂದು ಪವಿತ್ರ ಸ್ನಾನಕ್ಕೆ ಪ್ರಮುಖವಾದ ದಿನ. ಈ ದಿನ 10 ಕೋಟಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಸ್ನಾನ ನಡೆಸುವ ಸಾಧ್ಯತೆ ಇದೆ ಎಂದು ಉತ್ತರ ಪ್ರದೇಶ ಸರ್ಕಾರ ಅಂದಾಜಿಸಿದೆ. ಈ ನಿಟ್ಟಿನಲ್ಲಿ ಹೆಚ್ವಿನ ಭದ್ರತಾ ಕ್ರಮಗಳನ್ನೂ ಸಹ ತೆಗೆದುಕೊಳ್ಳಲಾಗಿದೆ.
ಮೇಳದ ವಿಶೇಷ ಕರ್ತವ್ಯ ಅಧಿಕಾರಿ ಆಕಾಂಕ್ಷಾ ರಾಣಾ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ, “ಕಾಲ್ತುಳಿತದಿಂದ ಕೆಲವರು ಗಾಯಗೊಂಡಿದ್ದಾರೆ. ಗಾಯಾಳುಗಳ ನಿಖರ ಲೆಕ್ಕ ಲಭ್ಯವಾಗಿಲ್ಲ” ಎಂದು ತಿಳಿಸಿದರು.














