ಮನೆ ಅಂತಾರಾಷ್ಟ್ರೀಯ ಪ್ರವಾದಿ ವಿರುದ್ಧ ಹೇಳಿಕೆ: ಭಾರತಕ್ಕೆ ಆತ್ಮಾಹುತಿ ದಾಳಿ ಎಚ್ಚರಿಕೆ ನೀಡಿದ ಅಲ್ ಖೈದಾ ಸಂಘಟನೆ

ಪ್ರವಾದಿ ವಿರುದ್ಧ ಹೇಳಿಕೆ: ಭಾರತಕ್ಕೆ ಆತ್ಮಾಹುತಿ ದಾಳಿ ಎಚ್ಚರಿಕೆ ನೀಡಿದ ಅಲ್ ಖೈದಾ ಸಂಘಟನೆ

0

ನವದೆಹಲಿ(NewDelhi): ಪ್ರವಾದಿ ಮೊಹಮ್ಮದ್ದರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ಪಕ್ಷದ ಮಾಜಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮ ವಿರುದ್ಧ ಉಗ್ರ ಸಂಘಟನೆಯಾಗಿರುವ ಆಲ್ ಖೈದ ಸಂಘಟನೆ ಕೆಂಡಕಾರಿದ್ದು, ಉಗ್ರ ಸಂಘಟನೆ ಇದಕ್ಕೆ ಪ್ರತಿಕಾರ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದೆ.

ಜೂನ್ 6ರ ದಿನಾಂಕವಿರುವ ಈ ಪತ್ರ ಅಲ್ ಖೈದಾ ಉಗ್ರ ಸಂಘಟನೆಯಿಂದ ಬಂದಿದ್ದು, ಭಾರತದ ಪ್ರಮುಖ ನಗರಗಳಾದ ದೆಹಲಿ, ಮುಂಬೈ, ರಾಜ್ಯಗಳಾದ ಉತ್ತರ ಪ್ರದೇಶ ಹಾಗ್ ಗುಜರಾತಿನಲ್ಲಿ ವಿಧ್ವಂಸಕ ಕೃತ್ಯ, ಸರಣಿ ಆತ್ಮಾಹುತಿ ದಾಳಿ ಕೈಗೊಳ್ಳುವುದಾಗಿ ಪತ್ರದಲ್ಲಿ ಹೇಳಲಾಗಿದೆ.

ಪತ್ರದಲ್ಲಿ “ನಮ್ಮ ಪ್ರವಾದಿಯನ್ನು ಅವಮಾನಿಸುವವರನ್ನು ನಾವು ಕೊಲ್ಲುತ್ತೇವೆ ಮತ್ತು ನಮ್ಮ ಪ್ರವಾದಿಯನ್ನು ಅವಮಾನಿಸುವ ಧೈರ್ಯವಿರುವವರನ್ನು ಸ್ಫೋಟಿಸಲು ನಾವು ನಮ್ಮ ದೇಹ ಮತ್ತು ನಮ್ಮ ಮಕ್ಕಳ ದೇಹಗಳೊಂದಿಗೆ ಸ್ಫೋಟಕಗಳನ್ನು ಹೊತ್ತು ಬರುತ್ತೇವೆ. ಕೇಸರಿ ಭಯೋತ್ಪಾದಕರು ಈಗ ದೆಹಲಿ, ಬಾಂಬೆ, ಯುಪಿ ಮತ್ತು ಗುಜರಾತ್ ರಾಜ್ಯದಲ್ಲಿ ತಮ್ಮ ಅಂತ್ಯಕ್ಕಾಗಿ ಕಾಯಬೇಕು ,” ಎಂದು ಹೇಳಲಾಗಿದೆ.

ಪ್ರವಾದಿ ಮುಹಮ್ಮದ್ ಬಗ್ಗೆ ಕೆಲವು ಬಿಜೆಪಿ ನಾಯಕರು ಹೇಳಿಕೆ ನೀಡಿದ ನಂತರ ಭುಗಿಲೆದ್ದಿರುವ ವಿವಾದದ ಬೆನ್ನಲ್ಲೇ ಈ ಪತ್ರ ಕಾಣಿಸಿಕೊಂಡಿದೆ.

ಪ್ರವಾದಿ ಮೊಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆಗಳ ವಿವಾದ ಉಲ್ಭಣವಾಗುತ್ತಿದ್ದಂತೆ ಕೆಲವು ಮುಸ್ಲಿಂ ರಾಷ್ಟ್ರಗಳ ಪ್ರತಿಭಟನೆ ಹಾದಿ ಹಿಡಿದು, ಭಾರತದ ವಿರುದ್ಧ ನಿಂತಿವೆ. ಈ ನಡುವೆ ಬಿಜೆಪಿ ತನ್ನ ರಾಷ್ಟ್ರೀಯ ವಕ್ತಾರ ಸ್ಥಾನದಲ್ಲಿದ್ದ ನೂಪುರ್ ಶರ್ಮಾರನ್ನು ಅಮಾನತುಗೊಳಿಸಿದೆ ಮತ್ತು ದೆಹಲಿಯ ಮಾಧ್ಯಮ ಮುಖ್ಯಸ್ಥ ನವೀನ್ ಕುಮಾರ್ ಜಿಂದಾಲ್ ಉಚ್ಚಾಟಿಸಿದೆ.

ಕುವೈತ್, ಕತಾರ್ ಮತ್ತು ಇರಾನ್‌ನಂತಹ ದೇಶಗಳ ತೀಕ್ಷ್ಣ ಪ್ರತಿಕ್ರಿಯೆಯ ನಡುವೆ, ಬಿಜೆಪಿ ಈ ಬಗ್ಗೆ ಪ್ರತಿಕ್ರಿಯಿಸಿ, ನಮ್ಮ ಪಕ್ಷ ಎಲ್ಲಾ ಧರ್ಮಗಳನ್ನು ಗೌರವಿಸುತ್ತದೆ ಮತ್ತು ಯಾವುದೇ ಧಾರ್ಮಿಕ ವ್ಯಕ್ತಿತ್ವದ ಅವಮಾನಗಳನ್ನು ಬಲವಾಗಿ ಖಂಡಿಸುತ್ತದೆ ಎಂದಿದೆ.