ಪುಣೆ: ಪೆರೋಲ್ ವೇಳೆ ಪರಾರಿಯಾಗಿದ್ದ 2002ರ ಗೋಧ್ರಾ ರೈಲು ಹತ್ಯಾಕಾಂಡದ ಅಪರಾಧಿಯನ್ನು ಕಳ್ಳತನ ಪ್ರಕರಣದಲ್ಲಿ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಸಲೀಂ ಜರ್ದಾ ಬಂಧಿತ ಅಪರಾಧಿ. ಈತ ಗೋಧ್ರಾ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ. ಈತ 2024ರ ಸೆಪ್ಟೆಂಬರ್ 17ರಂದು ಏಳು ದಿನಗಳ ಪೆರೋಲ್‌ನಲ್ಲಿ ಜೈಲಿನಿಂದ ಹೊರಬಂದಿದ್ದ ಆದರೆ ಪೆರೋಲ್ ಅವಧಿ ಮುಗಿದ ಬಳಿಕ ಜೈಲಿಗೆ ವಾಪಸಾಗದೆ ತಲೆಮರೆಸಿಕೊಂಡಿದ್ದ.
ಪುಣೆಯ ಗ್ರಾಮೀಣ ಪ್ರದೇಶದಲ್ಲಿ ಕಳ್ಳತನ ನಡೆಸುತ್ತಿದ್ದ ಆರೋಪದ ಮೇಲೆ ಜರ್ದಾ ಸೇರಿ ಆತನ ಸಹಚರರನ್ನು ಜ.22ರಂದು ಬಂಧಿಸಲಾಗಿದ್ದು. ತನಿಖೆಯ ವೇಳೆ ಈತ ಗೋಧ್ರಾ ರೈಲು ಹತ್ಯಾಕಾಂಡ ಪ್ರಕರಣದಲ್ಲಿ ಅಪರಾಧಿ ಎನ್ನುವುದು ಬಹಿರಂಗವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈತ ತನ್ನ ಗ್ಯಾಂಗ್‌ನೊಂದಿಗೆ ಗುಜರಾತ್‌ನ ಗೋಧ್ರಾದಿಂದ ಪುಣೆ ಜಿಲ್ಲೆಗೆ ಬಂದು ಕಳ್ಳತನ ನಡೆಸುತ್ತಿದ್ದ ಎಂದು ಅಧಿಕಾರಿ ತಿಳಿಸಿದ್ದಾರೆ.
2002ರ ಫೆ. 27 ರಂದು ಗೋಧ್ರಾದಲ್ಲಿ ಸಾಬರಮತಿ ಎಕ್ಸ್‌ಪ್ರೆಸ್‌ನ S-6 ಕೋಚ್‌ಗೆ ಬೆಂಕಿ ಹಚ್ಚಿ 59 ಜನರನ್ನು ಕೊಂದ ಆರೋಪದಲ್ಲಿ ಜರ್ದಾ ಮತ್ತು ಇತರರು ದೋಷಿಗಳಾಗಿದ್ದರು.














