ವಿಜಯಪುರ : ಉತ್ತರ ಕರ್ನಾಟಕದಲ್ಲಿ ಕ್ರಾಂತಿವೀರ ಬ್ರಿಗೇಡ್‌ಗೆ ವ್ಯಾಪಕ ಬೆಂಬಲ ದೊರಕುತ್ತಿದ್ದು, 1008 ಸ್ವಾಮೀಜಿಗಳ ಪಾದಪೂಜೆ ಮೂಲಕ ಬಸವ ಜನ್ಮಭೂಮಿ ಬಸವನ ಬಾಗೇವಾಡಿಯಲ್ಲಿ ಫೆ. 4 ರಂದು ಕ್ರಾಂತಿವೀರ ಬ್ರಿಗೇಡ್ ಲೋಕಾರ್ಪಣೆಯಾಗಲಿದೆ.
ಈ ವಿಷಯದ ಕುರಿತು ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ಬ್ರಿಗೇಡ್ ಸಂಚಾಲಕರೂ ಆಗಿರುವ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಹಿಂದೂ ಸಮಾಜದ ರಕ್ಷಣೆಯ ದೃಷ್ಟಿಯಿಂದ ಈ ಬ್ರಿಗೇಡ್ ಸೃಜಿಸಲಾಗಿದೆ. ಇದು ರಾಜಕೀಯ ರಹಿತವಾದ ಸಂಘಟನೆ ಕೇಂದ್ರಿತ ಬ್ರಿಗೇಡ್ ಆಗಿದ್ದು, ಈಗಾಗಲೇ ಉತ್ತರ ಕರ್ನಾಟಕ ಭಾಗದಿಂದ ಬ್ರಿಗೇಡ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ, ಯಾವುದೇ ರಾಜಕೀಯದ ನಾಯಕರು ಬಂದರೂ ಸ್ವಾಗತ ಮಾಡುತ್ತೇವೆ. ಬ್ರಿಗೇಡ್ ಗೂ ರಾಜಕೀಯಕ್ಕೂ ಸಂಬಂಧವಿಲ್ಲ ಎಂದರು.
ಕಳೆದ ಫೆ.೨೨ರಂದು ಬ್ರಿಗೇಡ್ ಬಗ್ಗೆ ಸಭೆ ಆಗಿತ್ತು. ಐದು ತಿಂಗಳಲ್ಲಿ ನಿರೀಕ್ಷೆ ಮೀರಿ ಉತ್ತರ ಕರ್ನಾಟಕದಲ್ಲಿ ಬೆಂಬಲ ಸಿಗುತ್ತಿದೆ. ಆರಂಭದಲ್ಲಿ ೧೦೦೮ ಸ್ವಾಮಿಗಳು ಪಾದಪೂಜೆ ಮೂಲಕ ಬ್ರಿಗೇಡ್ ಉದ್ಘಾಟನೆಯಾಗಲಿದ್ದು, ಕನ್ನೇರಿಯ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಕಾಗಿನೆಲೆ ಗುರುಪೀಠ ತಿಂಥಣಿ ಪೀಠದ ಶ್ರೀ ಸಿದ್ಧರಾಮಾನಂದ ಸ್ವಾಮೀಜಿಗಳು ಸೇರಿದಂತೆ ಹಲವಾರು ಹರ-ಗುರು-ಚರ ಮೂರ್ತಿಗಳ ಪಾವನ ಸಾನಿಧ್ಯದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, 1 ಲಕ್ಷಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆ ಇದೆ, ಇದೇ ಸಂದರ್ಭದಲ್ಲಿ 1008 ಜನ ಮಹಿಳೆಯರ ಕುಂಭ ಮೆರವಣಿಗೆ ನಡೆಯಲಿದೆ ಎಂದರು.
ಎಲ್ಲ ಗುರು ಪೀಠಗಳ ಸ್ವಾಮೀಜಿಗಳು ತಾವೇ ಸ್ವಯಂಪ್ರೇರಿತವಾಗಿ ಬರುತ್ತೇವೆ ಎಂದು ಹೇಳಿದ್ದಾರೆ, ಅನೇಕ ಸ್ವಾಮೀಜಿಗಳು ಇಂದಿಗೂ ಗುಡಿಸಲಿನಲ್ಲಿ ವಾಸವಾಗಿದ್ದಾರೆ, ಸಮಾಜಕ್ಕೆ ಆಧ್ಯಾತ್ಮ ಹಾಗೂ ಜ್ಞಾನ ಬಲ ತುಂಬುವ ಈ ಮಠಾಧೀಶರ ಮೇಲೆ ಜನರಿಗೆ ಅಪಾರವಾದ ನಂಬಿಕೆ ಹಾಗೂ ಭಕ್ತಿ ಇದೆ ಎಂದರು.
ಅನೇಕ ಅರ್ಚಕರಲ್ಲಿ ಭಕ್ತಿ ತುಂಬಿ ತುಳುಕುತ್ತದೆ, ಆದರೆ ತರಬೇತಿ ಕೊರತೆ ಇದೆ, ಹೀಗಾಗಿ ತರಬೇತಿ ನೀಡುವ ಉದ್ದೇಶವನ್ನೂ ಸಹ ಬ್ರಿಗೇಡ್ ಹೊಂದಿದೆ, ಇಂದು ಅನ್ನ ನೀಡುವ ಅನ್ನದಾತ ಸಹ ನೋವು ಅನುಭವಿಸುತ್ತಿದ್ದಾರೆ, ಈ ಎಲ್ಲರ ನೋವಿಗೆ ಸ್ಪಂದಿಸುವುದೇ ಬ್ರಿಗೇಡ್ ಗುರಿಯಾಗಿದೆ ಎಂದರು.
ರಾಜಕಾರಣ ಗಬ್ಬೆದ್ದು ಹೋಗಿದೆ….
ಕರ್ನಾಟಕದಲ್ಲಿ ರಾಜಕಾರಣ ಗಬ್ಬೆದು ಹೋಗಿದೆ. ರಾಜಕೀಯ ಕಾರ್ಯಕರ್ತರು ನಾಚಿಕೆ ಪಡುವಂತೆ ಆಗಿದೆ. ರಾಷ್ಟ್ರೀಯ ನಾಯಕರು ಇದ್ದರೋ, ಇಲ್ಲವೋ ಇಲ್ಲ ಗೊತ್ತಾಗುತ್ತಿಲ್ಲ. ಬಿಜೆಪಿ ಒಂದು ಕುಟುಂಬದ ಕೈಯಲ್ಲಿ ಸಿಲುಕಿದೆ. ಹೊಂದಾಣಿಕೆ ರಾಜಕೀಯವು ಹಿರಿಯ ಕಾರ್ಯಕರ್ತರಿಗೆ ನೋವಾಗಿದೆ. ಕಾಂಗ್ರೆಸ್ ನಲ್ಲಿ ಎಲ್ಲರೂ ನಾನು ಸಿಎಂ ಆಗುತ್ತೇನೆ ಎಂದು ಹೇಳುತ್ತಿದ್ದಾರೆ. ಬಾಯಿ ಮುಚ್ಚಿಕೊಂಡು ಇರುವಂತೆ ಸ್ವತಃ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿದರೂ ಬೆಲೆ ಕೊಡುತ್ತಿಲ್ಲ ಎಂದು ಪ್ರಸ್ತುತ ರಾಜಕೀಯ ವಿದ್ಯಮಾನವನ್ನು ಈಶ್ವರಪ್ಪ ಖಾರವಾಗಿ ವಿಶ್ಲೇಷಿಸಿದರು.
ಖರ್ಗೆ ಸಾಹೇಬರು ಮುತ್ಸದ್ಧಿ ರಾಜಕಾರಣಿ, ಅವರ ಬಗ್ಗೆ ನನಗೆ ಗೌರವವಿದೆ, ಆದರೆ ಕುಂಭಮೇಳಕ್ಕೆ ಸಂಬಂಧಿಸಿದಂತೆ ಅವರು ನೀಡಿದ ಹೇಳಿಕೆ ಖಂಡನೀಯ, ಹಿಂದೂ ಸಮಾಜದ ಬಗ್ಗೆ ಖರ್ಗೆ ಬಾಯಿ ಮುಚ್ಚಿಕೊಂಡು ಇರಬೇಕು. ಸಮಾಜವನ್ನು ಕೆಣಕಬೇಡಿ. ಕುಂಭ ಮೇಳ ಬಗ್ಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಕುಂಭ ಮೇಳದಲ್ಲಿ ಭಾಗಿಯಾದ ಯು.ಟಿ.ಖಾದರ್ ಅವರ ನಡೆಯನ್ನು ಖಂಡಿಸುತ್ತೀರಾ? ಕಾಂಗ್ರೆಸ್‌ನಿಂದ ಯಾರೂ ಭಾಗಿಯಾಗಬೇಡಿ ಎಂದು ಹೇಳಲು ಸಾಧ್ಯವೇ? ಎಂದು ಪ್ರಶ್ನಿಸಿದರು.














