ನಿಮ್ಮ ಪ್ರಕಾರ ಕಲಿಕೆ ಅಂದರೆ ಏನು? ಓದುವುದು. ಓದಿ ಅರ್ಥಮಾಡಿಕೊಳ್ಳುವುದು ಅಥವಾ ಬಾಯಿ ಪಾಠ ಮಾಡುವುದು. ಪರೀಕ್ಷೆಯಲ್ಲಿ ಚೆನ್ನಾಗಿ ಉತ್ತರ ಬರೆಯುವುದು. ಒಳ್ಳೆಯ ಅಂಕಗಳನ್ನು ಪಡೆದು ಸರ್ಟಿಫಿಕೇಟ್ ಪಡೆಯುವುದು. ಇದು ಕಲಿಕೆಯ ಕುರಿತ ಸಾಮಾನ್ಯ ಕಲ್ಪನೆಯಾಗಿದೆ. ಇನ್ನು ಸ್ವಲ್ಪ ಮುಂದೆ ಹೋದರೆ ಪಾಠಗಳನ್ನು ಅದರ ಪಾಡಿಗೆ ಬಿಟ್ಟು ಪ್ರಶೋತ್ತರಗಳನ್ನು ಮಾತ್ರ ಅಭ್ಯಾಸ ಮಾಡಿ ಪರೀಕ್ಷೆ ಬರೆದು ಸರ್ಟಿಫಿಕೇಟ್ ಪಡೆಯುವುದು ಎಂದು ಆಗಿಬಿಡುತ್ತದೆ. ಪಾಠ ಕೇಳುವುದು, ಪಾಠ ಹೇಳುವುದು ಎಲ್ಲವೂ ಪರೀಕ್ಷೆಯ ಯಶಸ್ಸಿಗೆ ಸೀಮಿತವಾಗಿ ಇರಿಸಿ ನಡೆಸುವುದೇ ಕಲಿಕೆ ಎನಿಸಿಬಿಟ್ಟಿದೆ.
ಆದರೆ ಡ್ರೈವಿಂಗ್ ಲೈಸನ್ಸ್ ಪಡೆಯುವುದು ಮೊದಲೋ? ಡ್ರೈವಿಂಗ್ ಕಲಿಯುವುದು ಮೊದಲೋ ಎಂದು ಯೋಚಿಸಿ ನೋಡಿ. ಒಂದು ವೇಳೆ ಹಾಗೂ ಹೀಗೂ ಡ್ರೈವಿಂಗ್ ಕಲಿತ ಹಾಗೆ ಮಾಡಿ ಲೈಸನ್ಸ್ ಪಡೆದುಕೊಂಡಿರೆಂದು ಭಾವಿಸಿ. ಡ್ರೈವಿಂಗ್ ಗೊತ್ತಿಲ್ಲದಿದ್ದರೆ ಲೈಸನ್ಸ್ ಇಟ್ಟುಕೊಂಡು ವಾಹನವನ್ನು ಮಾರ್ಗಕ್ಕಿಳಿಸಲು ಆಗುತ್ತದಾ? ಪ್ರಶೋತ್ತರಗಳನ್ನು ಕಲಿತು ಪರೀಕ್ಷೆ ಬರೆದು ಪಡೆದ ಸರ್ಟಿಫಿಕೇಟ್ ಕೂಡ ಇಷ್ಟೇ ಉಪಯುಕ್ತವಾಗಿರುತ್ತದೆ! ಕಲಿಕೆ ನಡೆದುದರ ಪರಿಣಾಮವಾಗಿ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳು ಬರಬೇಕೆ ಹೊರತು ಪರೀಕ್ಷೆಯಲ್ಲಿ ಹೇಗೋ ಒಳ್ಳೆಯ ಅಂಕಗಳನ್ನು ಪಡೆದುಕೊಂಡ ಕೂಡಲೇ ಕಲಿಕೆ ನಡೆಯತೆಂದು ಅರ್ಥವಲ್ಲ.
ಹಾಗಾದರೆ ಕಲಿಕೆ ಎಂದರೆ ಏನು? ಗಿಬ್ಬನ್ ಎಂಬ ಶೈಕ್ಷಣಿಕ ಮನೋವಿಜ್ಞಾನಿ ಹೇಳುವ ಪ್ರಕಾರ, “ಕಲಿಕೆಯು ವ್ಯಕ್ತಿ ಮತ್ತು ಪರಿಸರದ ಪರಸ್ಪರ ಕ್ರಿಯೆಗಳಿಂದ ಉಂಟಾಗುವ ಬಹುತೇಕ ಶಾಶ್ವತ ಎನ್ನಬಹುದಾದ ವರ್ತನೆಯ ಪರಿವರ್ತನೆಯಾಗಿದೆ’. ಅಂದರೆ ಕಲಿಕೆಯು ನಮ್ಮ ನಡೆವಳಿಕೆಗಳಲ್ಲಿ ಧನಾತ್ಮಕವಾಗಿ ಪರಿವರ್ತನೆಯಾಗಿದೆ.
ವರ್ತನೆಯಲ್ಲಿ ಪರಿವರ್ತನೆ ಎನ್ನುವುದು ಎರಡು ರೀತಿಯಲ್ಲಿ ಅರ್ಥಮಾಡಿಕೊಳ್ಳಬೇಕಾದ ಸಂಗತಿಯಾಗಿದೆ. ಮೊದಲನೆಯದು ನಾವು ಬೆಳೆಯುತ್ತಿದ್ದ ಹಾಗೆ ಪರಿಸರದಿಂದ ಅನೇಕ ವಿಚಾರಗಳನ್ನು ತಿಳಿದುಕೊಂಡು-ಅನುಭವಗಳನ್ನು ಗಳಿಸಿಕೊಂಡು ಯಾವ ಸನ್ನಿವೇಶವನ್ನು ನಾವು ಯಾವ ರೀತಿ ನಿರ್ವಹಿಸಬೇಕು, ಯಾರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬಿತ್ಯಾದಿ ವಿಷಯಗಳಲ್ಲಿ ಉಂಟಾಗುವ ಪರಿವರ್ತನೆಗಳು. ಈ ಪರಿವರ್ತನೆಗಳು ಮೇಲ್ನೋಟಕ್ಕೇನೆ ಗೊತ್ತಾಗುತ್ತದೆ. ಉದಾಹರಣೆಗೆ ಯಾರ ಬಗ್ಗೆಯೋ ನಾವು ನಾಲ್ಕು ವರ್ಷಗಳ ಕೆಳಗೆ ಅವನು ಬಹಳ ಸಿಡುಕನಾಗಿದ್ದ. ಈಗ ತಾಳ್ಮೆಯ ವ್ಯಕ್ತಿಯಾಗಿದ್ದಾನೆ” ಎನ್ನುತ್ತೇವಲ್ಲ, ಈ ಮಾತನಲ್ಲಿ ವಕ್ತವಾಗುವ ವರ್ತನಾ ಪರಿವರ್ತನೆಗಳು ಮೇಲ್ನೋಟಕ್ಕೆನೆ ವ್ಯಕ್ತವಾಗುವ ನಡೆವಳಿಕೆಯ ಪರಿವರ್ತನೆಯಾಗಿದೆ. ಎರಡನೆಯದು ಹೀಗಲ್ಲ. ಅಮೂರ್ತವಾದ ಜ್ಞಾನದ ರೂಪಗಳನ್ನು ನಮ್ಮಲ್ಲಿ ನಾವು ಒಳಗೊಳಿಸಿಕೊಳ್ಳುವುದರಲ್ಲಿ ಉಂಟಾಗುವ ಪರಿವರ್ತನೆಯಾಗಿದೆ. ಉದಾಹರಣೆಗೆ ಪ್ರಾಥಮಿಕ ಶಾಲೆಯಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಮವು ಒಂದು ಕಥೆಯ ಹಾಗೆ ಕಾಣುತ್ತದೆ. ಹೈಸ್ಕೂಲಿಗೆ ಬಂದಾಗ ಅನೇಕ ವಾಸ್ತವಿಕ ಘಟನೆಗಳ ಅನುಭವವಾಗಿ ಕಾಣುತ್ತದೆ. ಪದವಿ ಹಂತದಲ್ಲಿ ಅದನ್ನೇ ಅಭ್ಯಾಸ ಮಾಡಿದಾಗ ವಿಮರ್ಶೆಗೆ, ಜನಜೀವನದ ಸ್ವಭಾವದ ಅರ್ಥೈಸುವಿಕೆಗೆ ಕಾರಣವಾಗುವ ಸಂಗತಿಗಳಂತೆ ಕಾಣುತ್ತದೆ. ಹೀಗೆ ಕಂಡಾಗಲೇ ಅದು ಕಲಿಕೆ ಎಂದು ಅನಿಸುತ್ತದೆ.














