ಮನೆ ಕ್ರೀಡೆ ಅಂತರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಮಿಥಾಲಿ ರಾಜ್

ಅಂತರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಮಿಥಾಲಿ ರಾಜ್

0

ಮುಂಬೈ(Mumbai): ಮಹಿಳಾ ಕ್ರಿಕೆಟ್​ನಲ್ಲಿ ಹತ್ತಾರು ದಾಖಲೆಗಳನ್ನು ನಿರ್ಮಿಸಿರುವ ಭಾರತೀಯ ಮಹಿಳಾ ತಂಡದ ಕ್ಯಾಪ್ಟನ್ ಮಿಥಾಲಿ ರಾಜ್​​ ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ಈ ಬಗ್ಗೆ ಇಂದು ಟ್ವೀಟ್ ಮಾಡಿರುವ ಅವರು, ನಿಮ್ಮ ಆಶೀರ್ವಾದದೊಂದಿಗೆ ಜೀವನದ ಎರಡನೇ ಇನ್ನಿಂಗ್ಸ್​ ಆರಂಭಿಸಲಿದ್ದೇನೆ ಎಂದು ತಿಳಿಸಿದ್ದಾರೆ.

ಭಾರತೀಯ ಮಹಿಳಾ ಕ್ರಿಕೆಟ್​​ನ ದಿಗ್ಗಜ ಪ್ರತಿಭೆ ಎಂದೇ ಗುರುತಿಸಿಕೊಂಡಿದ್ದ ಮಿಥಾಲಿ ರಾಜ್​ ಟೀಂ ಇಂಡಿಯಾ ಪರ 12 ಟೆಸ್ಟ್​​ ಪಂದ್ಯಗಳನ್ನು ಆಡಿದ್ದು 699 ರನ್​ಗಳಿಸಿದ್ದಾರೆ. 232 ಏಕದಿನ ಪಂದ್ಯಗಳಿಂದ 7,805 ರನ್​. ಹಾಗು 89 ಟಿ20 ಪಂದ್ಯಗಳಲ್ಲಿ 2,364ರನ್ ಕಲೆ ಹಾಕಿದ್ದಾರೆ. 39 ವರ್ಷದ ಮಿಥಾಲಿ,​​ 1999ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 23 ವರ್ಷಗಳ ಕಾಲ ಕ್ರಿಕೆಟ್​ ಆಡಿದ್ದಾರೆ. 16 ವರ್ಷದವರಾಗಿದ್ದಾಗಲೇ ಭಾರತ ತಂಡದ ಪರ ಡೆಬ್ಯು ಮಾಡಿದ್ದರು. ನಿನ್ನೆಯಷ್ಟೇ ಬಿಡುಗಡೆಯಾದ ಮಹಿಳಾ ಕ್ರಿಕೆಟ್‌ ಶ್ರೇಯಾಂಕದಲ್ಲಿ ಮಿಥಾಲಿ 7ನೇ ಸ್ಥಾನ ಕಾಯ್ದುಕೊಂಡಿದ್ದರು.

‘ಕ್ರಿಕೆಟ್ ವೃತ್ತಿಜೀವನದಿಂದ ನಿವೃತ್ತಿಯಾಗಲು ಇದು ಸಕಾಲವೆಂದು ಅನ್ನಿಸುತ್ತಿದೆ. ನಮ್ಮ ತಂಡ ಪ್ರತಿಭಾನ್ವಿತ ಆಟಗಾರ್ತಿಯರನ್ನು ಒಳಗೊಂಡಿದೆ. ಭಾರತ ಮಹಿಳಾ ಕ್ರಿಕೆಟ್ ತಂಡದ ಭವಿಷ್ಯ ಮತ್ತಷ್ಟು ಉಜ್ವಲವಾಗಿರಲಿದೆ’ ಎಂದು ಪ್ರಕಟಣೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಿಸಿಸಿಐ, ಜಯ್‌ ಶಾ, ಅಭಿಮಾನಿಗಳು ಸೇರಿದಂತೆ ಎಲ್ಲ ತರಬೇತಿ ಸಿಬ್ಬಂದಿಗೂ ಧನ್ಯವಾದ ಹೇಳಿದ್ದಾರೆ.