ನವದೆಹಲಿ: ದಶಕಗಳಿಗೆ ಒಮ್ಮೆ ಮಾಡುವ ಜನಗಣತಿಯನ್ನು ವಿಳಂಬ ಮಾಡಿದರೆ ಹಲವು ಸಾಮಾಜಿಕ ನೀತಿಗಳಿಗೆ ಧಕ್ಕೆಯುಂಟಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.
ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ‘2021ರಿಂದ ಜನಗಣತಿ ಬಾಕಿಯಾಗಿಯೇ ಉಳಿದಿದೆ.
ಈ ವರ್ಷ ನಡೆಸುವುದೂ ಅನುಮಾನವಾಗಿದೆ. ದೇಶದಲ್ಲಿ ಜನನ ಮತ್ತು ಮರಣಗಳ ಕುರಿತು ಕನಿಷ್ಠ ಎರಡು ಪ್ರಮುಖ ವರದಿಗಳನ್ನು ಕೇಂದ್ರ ಗೃಹ ಸಚಿವಾಲಯವು ಕಳೆದ ಐದು ವರ್ಷಗಳಿಂದ ಬಿಡುಗಡೆ ಮಾಡಿಲ್ಲ. ಇದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಮತ್ತು ಆಹಾರ ಭದ್ರತೆಯ ಹಕ್ಕುಗಳು ಸೇರಿದಂತೆ ಅನೇಕ ಸಾಮಾಜಿಕ ನೀತಿಗಳು ಮತ್ತು ಕಾರ್ಯಕ್ರಮಗಳಿಗೆ ಹಾನಿಯುಂಟುಮಾಡುತ್ತಿದೆ’ ಎಂದು ಬರೆದುಕೊಂಡಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಭಾಷಣದಲ್ಲಿ ಜನಗಣತಿಗೆ ಹಣ ಬಿಡುಗಡೆ ಮಾಡುವ ಬಗ್ಗೆ ಯಾವುದೇ ಪ್ರಸ್ತಾಪ ಮಾಡದಿರುವುದು ನಿರಾಸೆಯನ್ನುಂಟು ಮಾಡಿದೆ ಎಂದು ಕಾಂಗ್ರೆಸ್ ಹೇಳಿದೆ.
ಜನಗಣತಿಯನ್ನು ಸಮಯಕ್ಕೆ ಸರಿಯಾಗಿ ನಡೆಸಲು ಸರ್ಕಾರ ವಿಫಲವಾಗಿರುವುದು ರಾಜ್ಯದ ಆಡಳಿತಾತ್ಮಕ ಸಾಮರ್ಥ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಉಂಟು ಮಾಡಲಿದೆ ಎಂದು ಪಕ್ಷ ಅಭಿಪ್ರಾಯಪಟ್ಟಿದೆ.














