ಟಾಟಾ ಹಾಗೂ ಟಾಟಾ ಸಮೂಹದ ಹೆಸರನ್ನು ಅಕ್ರಮವಾಗಿ ಬಳಸಿಕೊಂಡು ‘ರತನ್ ಟಾಟಾ ಐಕಾನ್’ ಹೆಸರಿನ ಪ್ರಶಸ್ತಿ ನೀಡಲು ಮುಂದಾಗಿದ್ದ ರಜತ್ ಶ್ರೀವಾಸ್ತವ ಎಂಬುವರಿಗೆ ಅಂತಹ ಪ್ರಶಸ್ತಿ ನೀಡದಿರಲು ನಿರ್ಬಂಧಿಸಿ ದೆಹಲಿ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ. ಸರ್ ರತನ್ ಟಾಟಾ ಟ್ರಸ್ಟ್ ಮತ್ತು ಟಾಟಾ ಟ್ರಸ್ಟ್‌ಗಳು ಸಲ್ಲಿಸಿರುವ ಬೌದ್ಧಿಕ ಆಸ್ತಿ ಉಲ್ಲಂಘನೆ ಪ್ರಕರಣದಲ್ಲಿ ಈ ಆದೇಶ ನೀಡಲಾಗಿದೆ.
ರತನ್ ಟಾಟಾ ಮತ್ತು ಟಾಟಾ ಟ್ರಸ್ಟ್‌ಗಳಿಗೆ ಸಂಬಂಧಿಸಿದ ಲೋಗೋ ಮತ್ತು ಚಿತ್ರಗಳನ್ನು ಸಹ ಆರೋಪಿತ ವ್ಯಕ್ತಿಯು ಬಳಸುವಂತಿಲ್ಲ ಎಂದು ನ್ಯಾಯಾಲಯವು ತೀರ್ಪು ನೀಡಿದೆ.
ಕುತೂಹಲಕಾರಿ ಅಂಶವೆಂದರೆ, ತಮ್ಮ ಜನಪ್ರಿಯತೆಯ ಕಾರಣದಿಂದಾಗಿ ‘ರತನ್ ಟಾಟಾ’ ಅವರನ್ನು ಪ್ರಸಿದ್ಧ ಟ್ರೇಡ್‌ಮಾರ್ಕ್ ಎಂದು ಘೋಷಿಸಬಹುದೇ ಎನ್ನುವ ಅಂಶವನ್ನೂ ನ್ಯಾಯಾಲಯವು ಪರಿಗಣಿಸುತ್ತಿದೆ. ನ್ಯಾಯಮೂರ್ತಿ ಮಿನಿ ಪುಷ್ಕರ್ಣ ಅವರು ವಿಚಾರಣೆಯ ವೇಳೆ, “ಟಾಟಾ ಅವರು ಪ್ರಸಿದ್ಧ ಹೆಗ್ಗುರುತು ಎಂಬುದನ್ನು ಈ ನ್ಯಾಯಾಲಯ ಗಮನಿಸುತ್ತದೆ. ದಿವಂಗತ ಶ್ರೀ ರತನ್ ಟಾಟಾ ಅವರು ಪ್ರಸಿದ್ಧ ವ್ಯಕ್ತಿಯಾಗಿದ್ದಾರೆ. ಅವರ ಹೆಸರು ಸಹ ರಕ್ಷಣೆಗೆ ಅರ್ಹವಾಗಿದೆ” ಎಂದರು.
ವಿಚಾರಣೆಯ ಸಂದರ್ಭದಲ್ಲಿ, ಪ್ರತಿವಾದಿ ಶ್ರೀವಾಸ್ತವ ಅವರು ರತನ್ ಟಾಟಾ ಅವರ ಹೆಸರನ್ನು ಬಳಸದಿರಲು ಮತ್ತು ಪ್ರಶಸ್ತಿಗಳನ್ನು ರದ್ದು ಪಡಿಸಲು ಒಪ್ಪಿಕೊಂಡರು. ಇದರ ಪರಿಣಾಮವಾಗಿ ನ್ಯಾಯಾಲಯವು ಮೊಕದ್ದಮೆಗೆ ಸಂಬಂಧಿಸಿದಂತೆ ಡಿಕ್ರಿ ಆದೇಶ ಮಾಡಿದೆ. ಆದಾಗ್ಯೂ, ಪ್ರತಿವಾದಿಗಳಿಗೆ ಮುಚ್ಚಳಿಕೆ ನೀಡುವಂತೆ ಸೂಚಿಸಿದ್ದು, ಫೆಬ್ರವರಿ 12 ರಂದು ವಿಚಾರಣೆಗೆ ಪಟ್ಟಿ ಮಾಡಿದೆ.
ಪ್ರಸಕ್ತ ವಿವಾದವು ಟಾಟಾ ಗ್ರೂಪ್‌ಗೆ ಸಂಬಂಧಿಸಿದ ಪ್ರಸಿದ್ಧ ಟ್ರೇಡ್‌ಮಾರ್ಕ್‌ಗಳು, ಲೋಗೊಗಳು ಮತ್ತು ವೈಯಕ್ತಿಕ ಹೆಸರುಗಳ ಅನಧಿಕೃತ ಬಳಕೆಯ ಕುರಿತದ್ದಾಗಿದೆ. ನಿರ್ದಿಷ್ಟವಾಗಿ ಟ್ರೇಡ್‌ಮಾರ್ಕ್‌ಗಳಾದ ಟಾಟಾ, ಟಾಟಾ ಟ್ರಸ್ಟ್‌ಗಳು ಮತ್ತು ದಿವಂಗತ ರತನ್ ಟಾಟಾ ಅವರ ಹೆಸರು ಮತ್ತು ಚಿತ್ರಗಳನ್ನು ಇದು ಒಳಗೊಂಡಿದೆ.
ಸರ್ ರತನ್ ಟಾಟಾ ಟ್ರಸ್ಟ್ ಮತ್ತು ಟಾಟಾ ಸನ್ಸ್ ತಮ್ಮ ಬೌದ್ಧಿಕ ಆಸ್ತಿ ಹಕ್ಕುಗಳು, ಖ್ಯಾತಿ ಮತ್ತು ಒಂದು ಶತಮಾನಕ್ಕೂ ಹೆಚ್ಚು ಕಾಲ ಸಾರ್ವಜನಿಕವಾಗಿ ಗಳಿಸಿರುವ ಸದ್ಭಾವನೆಯನ್ನು ರಕ್ಷಿಸಲು ಈ ಮೊಕದ್ದಮೆಯನ್ನು ಹೂಡಿದ್ದಾರೆ.
ಪ್ರಸಕ್ತ ಪ್ರಕರಣದಲ್ಲಿ ಶ್ರೀವಾಸ್ತವ ಮತ್ತು ಅವರ ಕಂಪನಿ ಯುಸಿ ಮೆಂಟರ್ಸ್ ಪ್ರೈವೇಟ್ ಲಿಮಿಟೆಡ್ ನೇತೃತ್ವದ ಪ್ರತಿವಾದಿಗಳು, ಟಾಟಾ ಟ್ರಸ್ಟ್ ಮತ್ತು ರತನ್ ಟಾಟಾ ಜೊತೆಗೆ ತಮಗೆ ಒಡನಾಟವಿದೆ ಎಂದು ತಪ್ಪಾಗಿ ಬಿಂಬಿಸಿಕೊಂಡು ಮೋಸದ ಕಾರ್ಯಕ್ರಮಗಳು ಮತ್ತು ಪ್ರಶಸ್ತಿಗಳನ್ನು ಆಯೋಜಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಆ ಮೂಲಕ ಸಾರ್ವಜನಿಕರನ್ನು ದಾರಿ ತಪ್ಪಿಸುವುದರೊಂದಿಗೆ ಫಿರ್ಯಾದಿಗಳ ಪ್ರತಿಷ್ಠೆಗೆ ಗಣನೀಯ ಹಾನಿಯನ್ನು ಮಾಡಲಾಗಿದೆ ಎಂದು ಆಕ್ಷೇಪಿಸಲಾಗಿದೆ.
ರಜತ್ ಶ್ರೀವಾಸ್ತವ ಅವರು “ರತನ್ ಟಾಟಾ ನ್ಯಾಷನಲ್ ಐಕಾನ್ ಅವಾರ್ಡ್” ನಂತಹ ಅನಧಿಕೃತ ಕಾರ್ಯಕ್ರಮಗಳು ಮತ್ತು ಪ್ರಶಸ್ತಿಗಳನ್ನು ಆಯೋಜಿಸಿದ್ದರು. ಟಾಟಾ ಟ್ರಸ್ಟ್‌ಗಳು ಮತ್ತು ರತನ್ ಟಾಟಾ ಅವರ ಬೆಂಬಲ ಮತ್ತು ಸಹಯೋಗ ತಮಗಿದೆ ಎಂದು ತಪ್ಪಾಗಿ ಪ್ರತಿಪಾದಿಸಿದ್ದರು.
ಇದನ್ನು ಗಮನಿಸಿದ್ದ ದೂರುದಾರರು, ಡಿಸೆಂಬರ್ 2024ರಲ್ಲಿ ಟಾಟಾ ಹೆಸರನ್ನು ಕೈಬಿಡುವಂತೆ ಸೂಚಿಸಿ ನೋಟಿಸ್ ನೀಡಿದ್ದರು. ಇದರ ಹೊರತಾಗಿಯೂ ಪ್ರತಿವಾದಿಗಳು ಅದನ್ನು ಉಲ್ಲಂಘಿಸಿ ಸಾಮಾಜಿಕ ಮಾಧ್ಯಮ ವೇದಿಕೆಗಳು ಹಾಗೂ ವೆಬ್‌ಸೈಟ್‌ನಲ್ಲಿ ಈ ಕುರಿತಾದ ಮಾಹಿತಿ, ಜಾಹೀರಾತು ಹರಿಸುವುದನ್ನು ಮುಂದುವರಿಸಿದ್ದರು.
ಈ ಹಿನ್ನೆಲೆಯಲ್ಲಿ, ತಮ್ಮ ಟ್ರೇಡ್‌ಮಾರ್ಕ್‌ಗಳು, ಲೋಗೋಗಳು ಮತ್ತು ರತನ್ ಟಾಟಾ ಅವರ ಹೆಸರು ಹಾಗೂ ಚಿತ್ರವನ್ನು ಅನಧಿಕೃತವಾಗಿ ಬಳಸುವುದನ್ನು ತಡೆಯಲು ಶಾಶ್ವತ ಪ್ರತಿಬಂಧಕಾಜ್ಞೆಯನ್ನು ಟಾಟಾ ಸಮೂಹ ಕೋರಿತ್ತು. ತಮ್ಮ ಪ್ರತಿಷ್ಠೆ ಮತ್ತು ಸದ್ಭಾವನೆಗೆ ಉಂಟಾದ ಹಾನಿಗಾಗಿ ₹ 2 ಕೋಟಿ ನಷ್ಟ ಪರಿಹಾರ ಸಹ ಕೋರಲಾಗಿತ್ತು.
ಪ್ರಕರಣದಲ್ಲಿ ಟಾಟಾ ಸಮೂಹವನ್ನು ಆನಂದ್ ಮತ್ತು ಆನಂದ್‌ನ ವಕೀಲರಾದ ಪ್ರವೀಣ್ ಆನಂದ್ ಮತ್ತು ಅಚ್ಯುತನ್ ಶ್ರೀಕುಮಾರ್ ಅವರೊಂದಿಗೆ ಹಿರಿಯ ವಕೀಲ ರಾಜೀವ್ ನಾಯರ್ ಅವರು ಪ್ರತಿನಿಧಿಸಿದ್ದರು.