ಮನೆ ರಾಜಕೀಯ ಬಿಜೆಪಿ ಅಲೆ ಮುಂದೆ ಬೇರೆಯವರು ಉಳಿಯುವುದಿಲ್ಲ: ಸಿಎಂ ಬೊಮ್ಮಾಯಿ ವಿಶ್ವಾಸ

ಬಿಜೆಪಿ ಅಲೆ ಮುಂದೆ ಬೇರೆಯವರು ಉಳಿಯುವುದಿಲ್ಲ: ಸಿಎಂ ಬೊಮ್ಮಾಯಿ ವಿಶ್ವಾಸ

0

ಮೈಸೂರು (Mysuru):ಬಿಜೆಪಿಯ ಅಲೆ ಮುಂದೆ ಬೇರೆಯವರು ಉಳಿಯುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ನಡೆದ ಮತದಾರರ ಸಭೆಯಲ್ಲಿ ಅವರು ಮಾತನಾಡಿದರು.

ಬದಲಾಗುತ್ತಿರುವ ಜಗತ್ತಿಗೆ ತಕ್ಕಂತೆ ಚರ್ಚಿಸುವ ವಿಧಾನಪರಿಷತ್ ‌ಸದಸ್ಯರು ಬೇಕು. ಇದಕ್ಕಾಗಿ ‌ಪದವೀಧರರು ಈ ಚುನಾವಣೆಯಲ್ಲಿ ಯೋಗ್ಯ ಅಭ್ಯರ್ಥಿಯನ್ನು ಗೆಲ್ಲಿಸಬೇಕು. ಅಧಿವೇಶನದಲ್ಲಿ ದನಿ ಎತ್ತಲು ಅವಕಾಶ ಕೊಡಬೇಕು ಎಂದು ಕೋರಿದರು.

ರವಿಶಂಕರ್ ಅವರು ಬಹಳ ಶ್ರಮ ಜೀವಿ ಅವರನ್ನ ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸಿಕೊಡಿ. ನಮ್ಮ ಅಭ್ಯರ್ಥಿಗೆ ಮೊದಲ ಪ್ರಾಶಸ್ತ್ಯದ ಮತ ನೀಡಿ ಜಯಶೀಲರನ್ನಾಗಿ ಮಾಡುವಂತೆ ಮನವಿ ಮಾಡಿದರು.

ನಾಡಿಗೆ ಮೈಸೂರು ಮಹಾರಾಜರು ನೀಡಿದ ಕೊಡುಗೆ ನೆನೆದ ಅವರು, ಮೈಸೂರು ಮಹಾರಾಜರು ಹಾಕಿದ ಭದ್ರ ಅಡಿಪಾಯದಿಂದಾಗಿ ಕರ್ನಾಟಕವನ್ನು ಕಟ್ಟಲು ಸಾಧ್ಯವಾಗಿದೆ. ಅವರನ್ನು ನಾವೆಂದಿಗೂ ಮರೆಯಲಾಗದು. ರಾಜ್ಯದಲ್ಲಿ ಅತಿ ಹೆಚ್ಚು ವೈದ್ಯಕೀಯ, ತಾಂತ್ರಿಕ ಕಾಲೇಜುಗಳು ಇರುವುದು ರಾಜರ ಕಾರಣದಿಂದಲೇ. ಎಲ್ಲ ಪ್ರಗತಿಯೂ ಪ್ರಾರಂಭವಾಗಿದ್ದು, ಮೈಸೂರಿನಿಂದಲೇ. ಈ ಕಾರಣದಿಂದಾಗಿಯೇ ಮೈಸೂರಿನಲ್ಲಿ ಪ್ರಗತಿಪರ ಹಾಗೂ ಪ್ರಜ್ಞಾವಂತಿಕೆ‌ ಹೊಂದಿರುವ ಜನರಿದ್ದಾರೆ ಎಂದರು.

ಬೆಂಗಳೂರಿನ ಹೊರಗೆ ಕರ್ನಾಟಕದ ಬೆಳವಣಿಗೆ ಆಗಬೇಕು ಎನ್ನುವುದು ನಮ್ಮ ಸರ್ಕಾರದ ಉದ್ದೇವಾಗಿದೆ. 2ನೇ ಹಂತದ ನಗರಗಳಲ್ಲಿ ಮೈಸೂರಿನ‌ ಅಭಿವೃದ್ಧಿ ಬಹಳ ಮುಖ್ಯವಾದುದು. ಇಲ್ಲಿ ಕೈಗಾರಿಕೆಗೆ ಚೇತರಿಕೆ ನೀಡುವ ಉದ್ದೇಶದಿಂದ ವಿಮಾನ ನಿಲ್ದಾಣ ವಿಸ್ತರಣೆಗೆ ಬಜೆಟ್‌ನಲ್ಲಿ ಅನುದಾನ ನೀಡಲಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಗಳು ಇಲ್ಲಿಗೆ ಬರುವಂತಾಗಲು ಕ್ರಮ ವಹಿಸಲಾಗಿದೆ. ಕೈಗಾರಿಕಾ ಟೌನ್‌ಶಿಪ್ ಅಭಿವೃದ್ಧಿಪಡಿಸುವುದಕ್ಕೂ ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಕೌಶಲವುಳ್ಳ ಮಾನವ ಸಂಪನ್ಮೂಲ ರೂಪಿಸುವುದು ನಮ್ಮ ಉದ್ದೇಶವಾಗಿದೆ. ಪದವೀಧರರ ಅನುಕೂಲಕ್ಕಾಗಿ ಕೌಶಲ ಅಭಿವೃದ್ಧಿ ಕಾರ್ಯಕ್ರಮಗಳನ್ನು ದೊಡ್ಡ ಪ್ರಮಾಣದಲ್ಲಿ ನಡೆಸುತ್ತಿದ್ದೇವೆ. ರಾಜ್ಯದಲ್ಲಿ 1.50 ಲಕ್ಷ ಯುವಕರಿಗೆ ಈ ವರ್ಷ ಕೌಶಲ ತರಬೇತಿ ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದರು.

ಆರ್ಥಿಕತೆ ಬೆಳೆದರೆ ಉದ್ಯೋಗ ಅವಕಾಶಗಳು ಸೃಷ್ಟಿಯಾಗುತ್ತದೆ. ಹೀಗಾಗಿ, ಆ ಕ್ಷೇತ್ರಕ್ಕೆ ಆದ್ಯತೆ ಕೊಡಲಾಗುತ್ತಿದೆ. ಕೃಷಿಯಲ್ಲಿ ಶೇ.1ರಷ್ಟು ಅಭಿವೃದ್ಧಿಯಾದರೆ ಉತ್ಪಾದನಾ ವಲಯದಲ್ಲಿ ಶೇ.4ರಷ್ಟು ಪ್ರಗತಿಯಾಗುತ್ತದೆ ಮತ್ತು ಸೇವಾ ಕ್ಷೇತ್ರದಲ್ಲಿ ಶೇ.10ರಷ್ಟು ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಹೇಳಿದರು.

ಅಭ್ಯರ್ಥಿ ಮೈ.ವಿ.‌ ರವಿಶಂಕರ್ ಮಾತನಾಡಿ, ನಾನು ಸುಮಾರು‌ 30 ವರ್ಷಗಳಿಂದ ಬಿಜೆಪಿಯಲ್ಲಿ ನಿಷ್ಟೆ ಯಿಂದ ಕೆಲಸ ಮಾಡಿದ್ದೇನೆ. ಕಳೆದ ಬಾರಿ ಅಲ್ಪಮತಗಳಿಂದ ಸೋತಿದ್ದೆ. ಮತ್ತೊಮ್ಮೆ ನನಗೆ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಲು ಪಕ್ಷ ಅವಕಾಶ ಕೊಟ್ಟಿದೆ. ಚುನಾವಣೆಯಲ್ಲಿ ನನಗೆ ಮೊದಲ ಪ್ರಾಶಸ್ತ್ಯ ಮತ ನೀಡಿ ಗೆಲ್ಲಿಸಿ. ನನಗೆ ಮತ ಕೊಟ್ಟು ತಪ್ಪು ಮಾಡಿದೆ ಅಂತ ಅಂದು ಕೊಳ್ಳದಂತೆ ಕೆಲಸ ಮಾಡುತ್ತೇನೆ ಎಂದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ಸಚಿವ ನಾರಾಯಣಗೌಡ, ಶಾಸಕರಾದ ಎಲ್. ನಾಗೇಂದ್ರ, ಎಸ್.ಎ. ರಾಮದಾಸ್, ಹರ್ಷವರ್ಧನ್, ವಿಧಾನಪರಿಷತ್‌ ಸದಸ್ಯ ಪುಟ್ಟಣ್ಣ, ಸಂಸದ ಪ್ರತಾಪ ಸಿಂಹ, ಮೇಯರ್‌ ಸುನಂದಾ ಪಾಲನೇತ್ರ, ಬಿಜೆ‍ಪಿ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಳಾ ಸೋಮಶೇಖರ್, ನಗರ ಘಟಕದ ಅಧ್ಯಕ್ಷ ಟಿ.ಎಸ್. ಶ್ರೀವತ್ಸ, ಮುಖಂಡ ಸಿದ್ದರಾಜು ಮೊದಲಾದವರು ಪಾಲ್ಗೊಂಡಿದ್ದರು.