ಮನೆ ಅಪರಾಧ ಮಂಡ್ಯ: ಕುತ್ತಿಗೆ ಕೊಯ್ದು ವ್ಯಕ್ತಿಯ ಭೀಕರ ಕೊಲೆ

ಮಂಡ್ಯ: ಕುತ್ತಿಗೆ ಕೊಯ್ದು ವ್ಯಕ್ತಿಯ ಭೀಕರ ಕೊಲೆ

0

ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ಸಮೀಪದ ಲಕ್ಷ್ಮೇಗೌಡನದೊಡ್ಡಿ ಇಂದು ಬೆಳ್ಳಂಬೆಳಗ್ಗೆ ವ್ಯಕ್ತಿಯೊಬ್ಬನ ಹತ್ಯೆಯಾಗಿದೆ. ಎಲ್. ಕೃಷ್ಣೇಗೌಡ (47) ಹತ್ಯೆಗೀಡಾದ ವ್ಯಕ್ತಿ. ಯಾರೋ ದುಷ್ಕರ್ಮಿಗಳು ಕುತ್ತಿಗೆ ಸೀಳಿ ಬರ್ಬರವಾಗಿ ಹತ್ಯೆಗೈದಿದ್ದಾರೆ ಎಂದು ಶಂಕಿಸಲಾಗಿದೆ.

Join Our Whatsapp Group

ಕೃಷ್ಣೇಗೌಡರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ ದುಷ್ಕರ್ಮಿಗಳು, ಕುತ್ತಿಗೆ ಕೊಯ್ದು ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಎಂದು ಶಂಕೆ ವ್ಯಕ್ತವಾಗುತ್ತಿದೆ. ಬೆಳ್ಳಂಬೆಳಗ್ಗೆ ಹರಿದ ನೆತ್ತರನ್ನು ನೋಡಿ ಗ್ರಾಮದ ಜನರು ಬೆಚ್ಚಿಬಿದ್ದಿದ್ದಾರೆ.

ಎಂದಿನಂತೆ ಇಂದು ಬೆಳಗ್ಗೆ ಡೈರಿಗೆ ತೆರಳಿ ಹಾಲು ಹಾಕಿ ಮನೆಗೆ ತೆರಳಿದ್ದ ಕೃಷ್ಣೇಗೌಡ, ತೋಟದ ಬಳಿ ಎಮ್ಮೆ ಕರು ಕಟ್ಟುತ್ತಿದ್ದರು. ಈ ವೇಳೆ ಘಟನೆ ನಡೆದಿರಬಹುದೆಂದು ಮೃತ ವ್ಯಕ್ತಿಯ ಪೋಷಕರು ಸಹ ಶಂಕೆ ವ್ಯಕ್ತಪಡಿಸಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಕೆ ಎಂ ದೊಡ್ಡಿ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಶ್ವಾನದಳ ಮತ್ತು ಬೆರಳಚ್ಚು ತಜ್ಞರ ಜೊತೆ ಪ್ರಾಥಮಿಕ ತನಿಖೆ ನಡೆಸಿದ್ದಾರೆ. ಸದ್ಯ ಮೃತದೇಹವನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಲ್ಲದೇ ಆರೋಪಿಗಳ ಪತ್ತೆಗೂ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ಯೆಯಾದ ಕೃಷ್ಣೇಗೌಡರಿಗೆ ಇಬ್ಬರು ಮಕ್ಕಳು, ಪತ್ನಿ ಹಾಗೂ ತಾಯಿ ಇದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.