ಮನೆ ಮನರಂಜನೆ ‘ಭುವನಂ ಗಗನಂ’ ಸಿನಿಮಾ ವಿಮರ್ಶೆ

‘ಭುವನಂ ಗಗನಂ’ ಸಿನಿಮಾ ವಿಮರ್ಶೆ

0

ಎಲ್ಲೆಡೆ ವ್ಯಾಲೆಂಟೈನ್ಸ್ ಡೇ ಸಡಗರ ಇದೆ. ಪ್ರೇಮಿಗಳಿಗೆ ಈ ದಿನ ಹಬ್ಬ. ಸಿನಿಪ್ರಿಯರು ಕೂಡ ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ಲವ್ ಸ್ಟೋರಿ ಇರುವ ಸಿನಿಮಾ ನೋಡಲು ಇಷ್ಟಪಡುತ್ತಾರೆ. ಅಂಥವರಿಗಾಗಿ ‘ಭುವನಂ ಗಗನಂ’ ಸಿನಿಮಾ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಪ್ರೇಮ್​ ಕಹಾನಿಯೇ ಪ್ರಮುಖವಾಗಿದೆ. ನಿಜವಾದ ಪ್ರೀತಿ ಹೇಗಿರುತ್ತದೆ ಎಂಬುದನ್ನು ನಿರ್ದೇಶಕ ಗಿರೀಶ್ ಮೂಲಿಮನಿ ಅವರು ತಮ್ಮದೇ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಸಿನಿಮಾ ಹೇಗಿದೆ ತಿಳಿಯಲು ಈ ವಿಮರ್ಶೆ ಓದಿ..

Join Our Whatsapp Group

ಎರಡು ಬೇರೆ ಬೇರೆ ಕಥೆಯನ್ನು ‘ಭುವನಂ ಗಗನಂ’ ಸಿನಿಮದಲ್ಲಿ ವಿವರಿಸಲಾಗಿದೆ. ಒಂದು ಕಥೆಯಲ್ಲಿ ಪ್ರಮೋದ್ ಮತ್ತು ರೇಚಲ್ ಡೇವಿಡ್ ಅವರು ಜೋಡಿ ಆಗಿದ್ದಾರೆ. ಇನ್ನೊಂದು ಕಥೆಯಲ್ಲಿ ಅಶ್ವತಿ ಹಾಗೂ ಪೃಥ್ವಿ ಅಂಬಾರ್ ಅವರು ಜೋಡಿಯಾಗಿ ನಟಿದ್ದಾರೆ. ಈ ಎರಡೂ ಕಥೆಗಳು ಬೇರೆ ಬೇರೆ ಆಗಿದ್ದರೂ ಅವುಗಳ ಸಾರಾಂಶ ಪ್ರೀತಿಯೇ ಆಗಿದೆ. ಯಾವುದೋ ಒಂದು ಸಂದರ್ಭದಲ್ಲಿ ಈ ಎರಡು ಕಥೆಗಳು ಒಟ್ಟಿಗೆ ಸೇರುತ್ತವೆ. ಅದು ಹೇಗೆ ಎಂಬುದನ್ನು ಸಿನಿಮಾದಲ್ಲಿಯೇ ನೋಡಿ ತಿಳಿಯಬೇಕು.

ನೋಡಿದ ತಕ್ಷಣ ಹುಟ್ಟುವ ಪ್ರೀತಿ ಒಂದು ರೀತಿ ಇರುತ್ತದೆ. ಹಲವು ದಿನಗಳ ಒಡನಾಟದಿಂದ ಹುಟ್ಟಿದ ಪ್ರೀತಿ ಬೇರೊಂದು ರೀತಿ ಇರುತ್ತದೆ. ಈ ಎರಡೂ ಬಗೆಯ ಲವ್​ ಸ್ಟೋರಿಯನ್ನು ‘ಭುವನಂ ಗಗನಂ’ ಸಿನಿಮಾದಲ್ಲಿ ತೋರಿಸಲಾಗಿದೆ. ಯೌವನದ ಹುಮ್ಮಸ್ಸಿನಲ್ಲಿ ಐ ಲವ್ ಯೂ ಎಂದು ಹೇಳುವುದು ತುಂಬ ಸುಲಭ. ಆದರೆ ಆ ಪ್ರೀತಿಯನ್ನು ಕೊನೇ ತನಕ ಕಾಪಾಡಿಕೊಳ್ಳುವುದು ಸಖತ್ ಕಷ್ಟ. ಮದುವೆ ಆದ ಬಳಿಕ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಅವುಗಳ ಬಗ್ಗೆ ‘ಭುವನಂ ಗಗನಂ’ ಸಿನಿಮಾದಲ್ಲಿ ತೋರಿಸಲಾಗಿದೆ.

ನಟ ಪ್ರಮೋದ್ ಅವರು ಈ ಸಿನಿಮಾದಲ್ಲಿ ರಫ್ ಆ್ಯಂಡ್ ಟಫ್​ ಯುವಕನಾಗಿ ಕಾಣಿಸಿಕೊಂಡಿದ್ದಾರೆ. ನೇರ ನಿಷ್ಠುರ ಗುಣ ಇರುವ ಪಾತ್ರವನ್ನು ಅವರು ಚೆನ್ನಾಗಿ ನಿಭಾಯಿಸಿದ್ದಾರೆ. ಆ್ಯಕ್ಷನ್ ದೃಶ್ಯಗಳಲ್ಲೂ ಮಿಂಚಿದ್ದಾರೆ. ಸೌಮ್ಯ ಸ್ವಭಾವದ ಹುಡುಗಿಯಾಗಿ ರೇಚಲ್ ಡೇವಿಡ್ ಅವರು ನಟಿಸಿದ್ದಾರೆ. ಇಬ್ಬರ ಕಾಂಬಿನೇಷನ್ ಚೆನ್ನಾಗಿದೆ. ಇನ್ನು, ಈ ಸಿನಿಮಾದಲ್ಲಿ ಪೃಥ್ವಿ ಅಂಬಾರ್ ಅವರು ಸವಾಲಿನ ಪಾತ್ರ ಮಾಡಿದ್ದಾರೆ. ಬುದ್ಧಿಮಾಂದ್ಯ ವ್ಯಕ್ತಿಯಾಗಿ ಅವರು ನಟಿಸಿದ್ದಾರೆ. ತಮ್ಮದೇ ರೀತಿಯಲ್ಲಿ ಅವರು ಆ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಟಿ ಅಶ್ವತಿ ಅವರು ಕೆಲವೇ ದೃಶ್ಯಗಳಲ್ಲಿ ಕಾಣಿಸಿಕೊಂಡರೂ ಗಮನ ಸೆಳೆಯುತ್ತಾರೆ. ಪೋಷಕ ಪಾತ್ರಗಳಲ್ಲಿ ಇರುವ ಅಚ್ಯುತ್ ಕುಮಾರ್​, ಶರತ್ ಲೋಹಿತಾಶ್ವ ಮುಂತಾದ ಹಿರಿಯ ಕಲಾವಿದರು ಈ ಸಿನಿಮಾದ ಮೆರುಗು ಹೆಚ್ಚಿಸಿದ್ದಾರೆ.

ಒಟ್ಟಾರೆ ಈ ಸಿನಿಮಾದ ಕಥೆ ಸಿಂಪಲ್ ಆಗಿದೆ. ತುಂಬ ಫ್ರೆಶ್ ಎಂಬಂತಹ ವಿಷಯಗಳೇನಿಲ್ಲ. ಈಗಾಗಲೇ ತಿಳಿದಿರುವ ವಿಷಯಗಳನ್ನು ಪ್ರೇಕ್ಷಕರಿಗೆ ಮತ್ತೊಮ್ಮೆ ನೆನಪಿಸುವ ರೀತಿಯಲ್ಲಿ ‘ಭುವನಂ ಗಗನಂ’ ಸಿನಿಮಾ ಮೂಡಿಬಂದಿದೆ. ಕೆಲವು ದೃಶ್ಯಗಳು ದೀರ್ಘ ಎನಿಸುತ್ತವೆ. ಅವುಗಳ ಬಗ್ಗೆ ಗಮನ ಹರಿಸಿ ಚಿತ್ರದ ಅವಧಿಯನ್ನು ತಗ್ಗಿಸಬಹುದಿತ್ತು. ಪ್ರೀತಿ ಮತ್ತು ದಾಂಪತ್ಯದಲ್ಲಿನ ಹೊಸ ಸವಾಲುಗಳ ಬಗ್ಗೆ ಬೆಳಕು ಚೆಲ್ಲಬಹುದಿತ್ತು. ಇಂತಹ ಸಾಧ್ಯತೆಗಳ ಬಗ್ಗೆ ನಿರ್ದೇಶಕರು ಗಮನ ಹರಿಸಿದ್ದರೆ ಸಿನಿಮಾ ತೂಕ ಇನ್ನಷ್ಟು ಹೆಚ್ಚುತ್ತಿತ್ತು ಎನಿಸುತ್ತದೆ.