ಮನೆ ಕಾನೂನು ನಿವೃತ್ತ ಪ್ರಾಧ್ಯಾಪಕರಿಗೆ ಪಿಂಚಣಿ ಪರಿಷ್ಕರಿಸಿ ಪಾವತಿಸಲು ಸೂಚನೆ ನೀಡಿದ್ದ ಆದೇಶ ರದ್ದು

ನಿವೃತ್ತ ಪ್ರಾಧ್ಯಾಪಕರಿಗೆ ಪಿಂಚಣಿ ಪರಿಷ್ಕರಿಸಿ ಪಾವತಿಸಲು ಸೂಚನೆ ನೀಡಿದ್ದ ಆದೇಶ ರದ್ದು

0

ಬೆಂಗಳೂರು: ಕೇಂದ್ರೀಯ 6ನೇ ವೇತನ ಆಯೋಗ ಮತ್ತು ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ವೇತನ ಪರಿಷ್ಕರಣೆಗೆ ಅನುಗುಣವಾಗಿ ನಿವೃತ್ತ ಪ್ರಾಧ್ಯಾಪಕರ ವೇತನ ಪರಿಷ್ಕರಿಸಿ ಅವರಿಗೆ ನಾಲ್ಕು ತಿಂಗಳಲ್ಲಿ ಪಿಂಚಣಿ ಪಾವತಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದ್ದ ಹೈಕೋರ್ಟ್‌ ಏಕ ಸದಸ್ಯ ಪೀಠದ ಆದೇಶವನ್ನು ದ್ವಿಸದಸ್ಯ ಪೀಠ ರದ್ದುಪಡಿಸಿ ಆದೇಶಿಸಿದೆ.

Join Our Whatsapp Group

ಏಕಸದಸ್ಯ ಪೀಠದ ಆದೇಶದ ರದ್ದತಿಗೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನು ಶಿವರಾಮನ್‌ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಎಸ್‌.ಎ.ಅಹಮದ್‌ ವಾದ ಮಂಡಿಸಿ, ಮೈಸೂರಿನ ನಿವೃತ್ತ ಪ್ರಾಧ್ಯಾಪಕ ಕೆ.ಗೋಪಾಲ್‌ ಸೇರಿದಂತೆ 18ಕ್ಕೂ ಹೆಚ್ಚು ನಿವೃತ್ತ ಪ್ರಾಧ್ಯಾಪಕರು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿ ತಮ್ಮ ನಿವೃತ್ತ ವೇತನ ಪರಿಷ್ಕರಿಸಿ, ಪಿಂಚಣಿ ಪಾವತಿಸಲು ಸರ್ಕಾರಕ್ಕೆ ಆದೇಶಿಸುವಂತೆ ಕೋರಿದ್ದರು. ಆ ಅರ್ಜಿ ಪುರಸ್ಕರಿಸಿದ್ದ ಏಕ ಸದಸ್ಯ ಪೀಠ, ನಿವೃತ್ತ ಪ್ರಾಧ್ಯಾಪಕರ ನಿವೃತ್ತ ವೇತನ ಪರಿಷ್ಕರಿಸಿ, ನಾಲ್ಕು ತಿಂಗಳಲ್ಲಿ ಪರಿಷ್ಕೃತ ಪಿಂಚಣಿ ಪಾವತಿಸುವಂತೆ ಸರ್ಕಾರಕ್ಕೆ 2019ರ ಮಾ.23ರಂದು ಆದೇಶಿಸಿದೆ. ಆದರೆ, ತಕರಾರು ಅರ್ಜಿದಾರರೆಲ್ಲರೂ ಸದ್ಯ ನಿವೃತ್ತರಾಗಿದ್ದಾರೆ. ಅವರ ನಿವೃತ್ತಿ ವೇತನವು ಅರ್ಜಿದಾರರ ಕೊನೆಯ ವೇತನವನ್ನು ಆಧರಿಸಿದೆ. ಹಾಗಾಗಿ, ನಿವೃತ್ತಿ ವೇತನ ಪರಿಷ್ಕರಣೆಯಲ್ಲಿ ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲ. ಒಂದೊಮ್ಮೆ ಏಕ ಸದಸ್ಯ ಪೀಠದ ಆದೇಶವನ್ನು ಪಾಲಿಸಲು ಮುಂದಾದರೆ ರಾಜ್ಯದ ಬೊಕ್ಕಸಕ್ಕೆ 477 ಕೋಟಿ ರೂ. ಹೆಚ್ಚಿನ ಹೊರೆಯಾಗುತ್ತದೆ. ಆದ್ದರಿಂದ ಆದೇಶ ರದ್ದುಪಡಿಸಬೇಕು ಎಂದು ಕೋರಿದ್ದರು.

ವಾದ-ಪ್ರತಿ ವಾದ ಆಲಿಸಿದ ನ್ಯಾಯಪೀಠ, ವೇತನ ಪರಿಷ್ಕರಣೆಯ ದಿನದಂದು ಉದ್ಯೋಗದಲ್ಲಿ ಇಲ್ಲದ ನೌಕರರಿಗೆ ವೇತನ ಪರಿಷ್ಕರಣೆಯ ಲಾಭ ದೊರಕುವುದಿಲ್ಲ ಎಂದು ಸ್ಪಷ್ಟಪಡಿಸಿ, ಏಕ ಸದಸ್ಯ ಪೀಠದ ಆದೇಶ ರದ್ದುಪಡಿಸಿದೆ.