ನಾಗ್ಪುರ: ಮಹಾರಾಷ್ಟ್ರದಲ್ಲಿ ಕಾಣಿಸಿಕೊಂಡಿರುವ ಗಿಲೆನ್ ಬರೆ ಸಿಂಡ್ರೋಮ್ ಕಾಯಿಲೆ (ಜಿಬಿಎಸ್)ಗೆ ನಾಗ್ಪುರದ 45 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ.
ನಾಗ್ಪುರದ ಸರ್ಕಾ ಆಸ್ಪತ್ರೆಯಲ್ಲಿ ಆತ ಸಾವನ್ನಪ್ಪಿದ್ದಾನೆ. ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ಜಿಬಿಎಸ್ ರೋಗಿಗಳಲ್ಲಿ ಒಬ್ಬ ಶುಕ್ರವಾರ ಮೃತಪಟ್ಟಿದ್ದಾರೆ. ಈ ಮೂಲಕ ನಾಗ್ಪರದಲ್ಲಿ ಜಿಬಿಎಸ್ಗೆ ಮೊದಲ ಬಲಿಯಾಗಿದೆ.
ಪಾರ್ಡಿ ಪ್ರದೇಶದ 45 ವರ್ಷದ ವ್ಯಕ್ತಿ ಈ ಸಿಂಡ್ರೋಮ್ ನಿಂದ ಸಾವನ್ನಪ್ಪಿದ್ದಾರೆ. ಈತನನ್ನು ಆರಂಭದಲ್ಲಿ ಪಾರ್ಶ್ವವಾಯು ಪೀಡಿತ ರೋಗಿ ಎಂದು ಗುರುತಿಸಲಾಗಿತ್ತು. ರೋಗಿಯ ಲಕ್ಷಣಗಳನ್ನು ಗಮನಿಸಿದ ಬಳಿಕ ಅವರಿಗೆ ವೆಂಟಿಲೇಟರ್ ಚಿಕಿತ್ಸೆ ನೀಡಬೇಕಾದ ಅಗತ್ಯವನ್ನು ಅರಿತು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಆರಂಭಿಸಲಾಗಿತ್ತು.
ಅಧಿಕ ರಕ್ತದೊತ್ತ ಹೊಂದಿದ್ದ ಇವರಿಗೆ ಪರೀಕ್ಷೆ ನಡೆಸಿದಾಗ ಜಿಬಿಎಸ್ ದೃಢಪಟ್ಟಿತು. ಫೆ.11ರಂದು ದಾಖಲಾಗಿದ್ದ ವ್ಯಕ್ತಿ ಸ್ಥಿತಿ ಗಂಭೀರವಾಗಿತ್ತು. ಶುಕ್ರವಾರ ಅವರ ಪರಿಸ್ಥಿತಿ ಗಂಭೀರಗೊಂಡು ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆ ತಿಳಿಸಿದೆ.
ಏನಿದು ಜಿಬಿಎಸ್?: ಗಿಲೆನ್ ಬರೆ ಸಿಂಡ್ರೋಮ್ ಕಾಯಿಲೆಯು ಈ ವರ್ಷದ ಆರಂಭದಿಂದ ದೇಶದಲ್ಲಿ ಕಂಡು ಬರುತ್ತಿದ್ದು, ಮಹಾರಾಷ್ಟ್ರದಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ. ಇದೊಂದು ರೀತಿಯ ವಿಭಿನ್ನ ಬಗೆಯ ಪಾರ್ಶ್ವವಾಯುವಾಗಿದೆ. ಇದು ಚಲನಶೀಲ ನರಗಳ ಮೇಲೆ ಪರಿಣಾಮ ಬೀರುತ್ತದೆ. ಪ್ರತಿರೋಧಕ ವ್ಯವಸ್ಥೆಯ ನರದ ಮೇಲೆ ದಾಳಿ ಮಾಡುತ್ತದೆ. ಇದರಿಂದ ರೋಗಿ ಓಡಾಡುವುದು ಮತ್ತು ಉಸಿರಾಡುವುದು ಕಷ್ಟವಾಗುತ್ತದೆ.
ಇದು ಮಕ್ಕಳಿಗೆ ಮತ್ತು ಹಿರಿಯ ನಾಗರಿಕರಿಗೆ ಅಪಾಯಕಾರಿಯಾಗಿದೆ. ಈ ಲಕ್ಷಣಗಳು ಕಂಡು ಬಂದಾಕ್ಷಣ ವೈದ್ಯರ ಬಳಿ ಕರೆತರುವುದು ಅಗತ್ಯವಾಗಿದೆ. ರೋಗಿಯ ಲಕ್ಷಣದ ಆಧಾರದ ಮೇಲೆ ಅಂದಾಜು ಮಾಡಲಾಗುವುದು. ನರದ ಮೇಲೆ ಪರಿಣಾಮ ಬೀರುವ ರೋಗವಾಗಿದ್ದು, ರೋಗವೂ ನರದ ಮೇಲೆ ವೇಗವಾಗಿ ಪರಿಣಾಮ ಬೀರುತ್ತದೆ. ತಕ್ಷಣಕ್ಕೆ ಇದಕ್ಕೆ ಚಿಕಿತ್ಸೆ ನೀಡದಿದ್ದರೆ, ಅದು ಪ್ರಮಾದಕ್ಕೆ ಗುರಿಯಾಗುತ್ತದೆ ಎಂದು ಡಾಕ್ಟರ್ಸ್ ತಿಳಿಸಿದ್ದಾರೆ.














