ಮನೆ ದೇಶ ಮಗನ ಶವ ನೀಡಲು 50 ಸಾವಿರಕ್ಕೆ ಬೇಡಿಕೆ ಇಟ್ಟ ಆಸ್ಪತ್ರೆ:  ಭಿಕ್ಷೆ ಬೇಡುತ್ತಿರುವ ಪೋಷಕರು

ಮಗನ ಶವ ನೀಡಲು 50 ಸಾವಿರಕ್ಕೆ ಬೇಡಿಕೆ ಇಟ್ಟ ಆಸ್ಪತ್ರೆ:  ಭಿಕ್ಷೆ ಬೇಡುತ್ತಿರುವ ಪೋಷಕರು

0

ಸಮಸ್ತೀಪುರ(ಬಿಹಾರ): ಮೃತ ಮಗನ ಶವ ನೀಡಲು ಸರ್ಕಾರಿ ಆಸ್ಪತ್ರೆ ಸಿಬ್ಬಂದಿ 50 ಸಾವಿರ ರೂಪಾಯಿ ಲಂಚ ಕೇಳಿದ್ದು, ಬಡ ದಂಪತಿ ಮನೆ ಮನೆಗೆ ತೆರಳಿ ಭಿಕ್ಷೆ ಬೇಡುತ್ತಿರುವ ಘಟನೆ ಬಿಹಾರದ ಸಮಸ್ತೀಪುರದಲ್ಲಿ ನಡೆದಿದೆ.

 ಮಗನ ಮೃತದೇಹ ನೀಡಲು ಸದರ್​ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಯೊಬ್ಬ 50 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾನೆ. ಇಷ್ಟೊಂದು ಹಣ ಇಲ್ಲದ ಕಾರಣ ಬಡ ದಂಪತಿ ಮನೆ ಮನೆಗೆ ತೆರಳಿ, ಭಿಕ್ಷೆ ಬೇಡುತ್ತಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಏನಿದು ಪ್ರಕರಣ?: ಕಳೆದ ಕೆಲ ದಿನಗಳ ಹಿಂದೆ ಬಡ ದಂಪತಿ ಮಗ ಮನೆಯಿಂದ ಕಾಣೆಯಾಗಿದ್ದನು. ಇದಾದ ಬಳಿಕ ಆತನ ಮೃತದೇಹ ಸಮಸ್ತೀಪುರ ಸದರ್​ ಆಸ್ಪತ್ರೆಯಲ್ಲಿದೆ ಎಂದು ದಂಪತಿಗೆ ಕರೆ ಬಂದಿದೆ. ಶವ ಪಡೆದುಕೊಳ್ಳಲು ಅಲ್ಲಿಗೆ ಹೋದಾಗ 50 ಸಾವಿರ ರೂಪಾಯಿ ಲಂಚ ಕೇಳಿದ್ದಾರೆ. ನಾವು ಬಡವರಾಗಿದ್ದು, ಅಷ್ಟೊಂದು ಹಣ ನೀಡಲು ಸಾಧ್ಯವಿಲ್ಲ ಎಂದು ಕೇಳಿಕೊಂಡಿರುವ ಹೊರತಾಗಿ ಕೂಡ ಇವರ ಮಾತನ್ನು ಸಿಬ್ಬಂದಿ ಕೇಳಿಲ್ಲ. ಹೀಗಾಗಿ, ಹಣ ಹೊಂದಿಸಲು ಮನೆ ಮನೆಗೆ ತೆರಳಿ ಭಿಕ್ಷೆ ಕೇಳುತ್ತಿದ್ದಾರೆ.

ಈ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಬಹುತೇಕ ಸಿಬ್ಬಂದಿ ಗುತ್ತಿಗೆ ಆದಾರದ ಮೇಲೆ ದುಡಿಯುತ್ತಿದ್ದು, ತಿಂಗಳಿಗೆ ಸರಿಯಾಗಿ ಸಂಬಳ ಸಿಗುವುದಿಲ್ಲ. ಹೀಗಾಗಿ, ಇಲ್ಲಿಗೆ ಚಿಕಿತ್ಸೆಗೆ ಬರುವ ರೋಗಿಗಳ ಸಿಬ್ಬಂದಿ ಬಳಿ ಹಣ ಕೀಳುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆ ಹೆಚ್ಚು ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಶವ ಹಸ್ತಾಂತರಿಸಲು ಹಣ ಕೇಳಿದವರನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲ. ಇದು ಮಾನವೀಯತೆಗೆ ಮಾಡಿದ ಅವಮಾನ’ ಎಂದು ಸಮಷ್ಟಿಪುರದ ಸರ್ಕಾರಿ ಆಸ್ಪತ್ರೆ ಶಸ್ತ್ರಚಿಕಿತ್ಸಕ ಡಾ.ಎಸ್.ಕೆ.ಚೌಧರಿ ಹೇಳಿದ್ದಾರೆ.