ನವದೆಹಲಿ: ಛತ್ರಪತಿ ಶಿವಾಜಿ ಮಹಾರಾಜರ 395ನೇ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಗಣ್ಯರು ನುಡಿನಮನ ಸಲ್ಲಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ‘ನಾನು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ಈ ದಿನ ಅವರಿಗೆ ಗೌರವ ಸಲ್ಲಿಸುತ್ತೇನೆ. ಅವರ ಶೌರ್ಯ ಮತ್ತು ದೂರದೃಷ್ಟಿಯ ನಾಯಕತ್ವ ಸ್ವರಾಜ್ಯಕ್ಕೆ ಅಡಿಪಾಯ ಹಾಕಿತ್ತು. ಅವರು ಬಲಿಷ್ಠ, ಸಮೃದ್ಧ ಸ್ವಾಲಂಭಿ ಭಾರತ ನಿರ್ಮಾಣಕ್ಕೆ ನಮಗೆ ಸ್ಪೂರ್ತಿಯಾಗಿದ್ದಾರೆ‘ ಎಂದು ಮೋದಿ ಹೇಳಿದ್ದಾರೆ.
ನಿಮ್ಮೆಲ್ಲರಿಗೂ ಶಿವಾಜಿ ಜಯಂತಿಯ ಶುಭಾಶಯಗಳು. ಮರಾಠ ಸಾಮ್ರಾಜ್ಯದ ಸ್ಥಾಪಕ, ಜನತಾ ಸಿದ್ಧಾಂತದ ಮೊದಲ ಮುಂದಾಳು, ಧೈರ್ಯಶಾಲಿ ಯೋಧ, ಛತ್ರಪತಿ ಶಿವಾಜಿ ಮಹಾರಾಜ್ ಅವರ ಜಯಂತಿಯಂದು ನಾನು ಛತ್ರಪತಿ ಶಿವಾಜಿ ಮಹಾರಾಜ್ ಅವರಿಗೆ ನಮಿಸುತ್ತೇನೆ ಎಂದು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ತಮ್ಮ ಶೌರ್ಯ, ರಾಷ್ಟ್ರಭಕ್ತಿ, ಆಡಳಿತಗಳಿಂದ ಹಿಂದೂಸ್ಥಾನವನ್ನು ಒಗ್ಗೂಡಿಸಲು ಶ್ರಮಿಸಿದ್ದ ವೀರ ಕೇಸರಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ಶುಭಾಶಯಗಳು. ದಕ್ಷಿಣ ಭಾರತದಲ್ಲಿ ಇಂದಿಗೂ ಪ್ರಾಚೀನ ಹಿಂದೂ ದೇವಾಲಯಗಳು ಅಳಿಯದೇ ಉಳಿದಿರಲು ಮುಖ್ಯ ಕಾರಣ ಛತ್ರಪತಿ ಶಿವಾಜಿ ಅವರ ನ್ಯಾಯಯುತ ಆಡಳಿತ. ಅವರ ಶೌರ್ಯ, ರಾಷ್ಟ್ರಭಕ್ತಿ, ಸಾಹಸಮಯ ಬದುಕು ಸರ್ವಕಾಲಿಕ ಪ್ರೇರಣೆ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ವಿಜಯೇಂದ್ರ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
;ಮಧ್ಯಕಾಲೀನ ಕರಾಳ ಯುಗದಿಂದ ಬಿಡಿಸಿ ಹಿಂದವೀ ಸಾಮ್ರಾಜ್ಯ ನಿರ್ಮಿಸಿದ ವೀರ ಪರಾಕ್ರಮಿ, ಮಹಾನ್ ದೇಶಭಕ್ತ ಹಿಂದೂಗಳ ಹೃದಯದಲ್ಲಿ ಇಂದಿಗೂ ನೆಲೆಸಿರುವ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ಶುಭಾಶಯಗಳು ಎಂದು ಬಿಜೆಪಿ ನಾಯಕ ಸಿಟಿ ರವಿ ಪೋಸ್ಟ್ ಮಾಡಿದ್ದಾರೆ.
ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಅವಿರತವಾಗಿ ಶ್ರಮಿಸಿದ ಮಹಾನ್ ಕಲಿ ಶಿವಾಜಿ ಮಹಾರಾಜರನ್ನು ಭಕ್ತಿಪೂರ್ವಕವಾಗಿ ಸ್ಮರಿಸೋಣ. ಅವರ ಹೋರಾಟ, ಶೌರ್ಯ, ಛಲ ನಮಗೆಲ್ಲರಿಗೂ ಪ್ರೇರಣೆ. ಎಲ್ಲರಿಗೂ ಅವರ ಜನ್ಮದಿನದ ಹಾರ್ದಿಕ ಶುಭಾಶಯಗಳು ಎಂದು ಜೆಡಿಎಸ್ ನಾಯಕ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.