ಗೋರಖ್‌ಪುರ(ಉತ್ತರ ಪ್ರದೇಶ): ಯುವಕನೊಬ್ಬ ತನ್ನ ಅಜ್ಜ-ಅಜ್ಜಿ ಸೇರಿದಂತೆ ತನ್ನ ಕುಟುಂಬದ ಮೂವರು ಸದಸ್ಯರನ್ನು ಸಲಿಕೆಯಿಂದ ಹೊಡೆದು ಕೊಂದಿರುವ ಘಟನೆ ಜಗಲ್ ಪೊಲೀಸ್ ಠಾಣೆ ಪ್ರದೇಶದ ಮೋತಿರಾಮ್ ಅಡ್ಡಾದ ಕೊಯಿರಾನ್ ಟೋಲಾದಲ್ಲಿ ನಡೆದಿದೆ.
ರಾಮದಯಾಳ್ ಎಂಬಾತ ಆರೋಪಿಯಾಗಿದ್ದು, ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಮೊದಲು ಸಾಕು ಪ್ರಾಣಿ ಮೇಲೆ ಹಲ್ಲೆ: ಇಂದು ಬೆಳಗ್ಗೆ ರಾಮದಯಾಳ್ ಮನೆಯಲ್ಲಿ ಜಗಳವಾಡಿದ್ದಾನೆ. ಬಳಿಕ 200 ಮೀಟರ್ ದೂರದಲ್ಲಿರುವ ಕೊಟ್ಟಿಗೆಗೆ ಹೋಗಿ ಅಲ್ಲಿದ್ದ ಸಾಕು ಪ್ರಾಣಿಯ ಮೇಲೆ ಹಲ್ಲೆ ಮಾಡಿದ್ದಾನೆ. ನಂತರ ತನ್ನ ಹಿರಿಯ ಅಜ್ಜ(ಮುತ್ತಜ್ಜ) ಸಾಧು (70), ಅಜ್ಜ ಕುಬೇರ್ (69) ಮತ್ತು ಅಜ್ಜಿ ದ್ರೌಪದಿ ದೇವಿ (65) ಅವರನ್ನು ಅದೇ ಸಲಿಕೆಯಿಂದ ಗಂಭೀರವಾಗಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ.
ಅಪಘಾತದಿಂದ ಆರೋಪಿ ಅಸ್ವಸ್ಥ: ಆರೋಪಿಯ ತಾಯಿ ಘಟನೆ ಬಳಿಕ ಮಾತನಾಡಿ, ಒಂದು ವಾರದ ಹಿಂದೆ ರಸ್ತೆ ಅಪಘಾತದಲ್ಲಿ ಮಗ(ಆರೋಪಿ) ಗಾಯಗೊಂಡಿದ್ದನು. ಅಲ್ಲಿಂದ ಮಾನಸಿಕವಾಗಿ ಆತ ಅಸ್ವಸ್ಥರಾಗಿದ್ದಾನೆ. ಬೆಳಗ್ಗೆ ಅವನು ಗಲಾಟೆ ಮಾಡಲು ಆರಂಭಿಸಿದಾಗ ನಾನು ಮತ್ತು ನನ್ನ ಗಂಡ ಇಬ್ಬರೂ ಮನೆಯಿಂದ ಹೊರಟುಹೋದೆವು. ಅದಾದ ಮೇಲೆ ಮಗ ಈ ಕೃತ್ಯ ಎಸೆಗಿದ್ದಾನೆ ಎಂದು ಹೇಳಿದ್ದಾರೆ.














