ಮನೆ ಅಪರಾಧ ಬೆಂಗಳೂರು: ಕಾರಿನಲ್ಲಿ ಉದ್ಯಮಿಯ ಶವ ಪತ್ತೆ- ಹಲವು ಅನುಮಾನ

ಬೆಂಗಳೂರು: ಕಾರಿನಲ್ಲಿ ಉದ್ಯಮಿಯ ಶವ ಪತ್ತೆ- ಹಲವು ಅನುಮಾನ

0

ಬೆಂಗಳೂರು: ಉದ್ಯಮಿಯೊಬ್ಬರು ಕಾರಿನಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಕೊಡಿಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕೊಡಿಗೇಹಳ್ಳಿ ಫ್ಲೈಓವರ್ ಬಳಿ ನಡೆದಿದ್ದು, ಸಾವಿನ ಸುತ್ತ ಹಲವು ಅನುಮಾನಗಳು ಮೂಡತೊಡಗಿವೆ.

Join Our Whatsapp Group

ಮೃತ ವ್ಯಕ್ತಿಯನ್ನು ಮುತ್ಯಾಲ ನಗರದ ನಿವಾಸಿ ಅಶ್ವಿನ್ ಕುಮಾರ್ ಎಂದು ಗುರುತಿಸಲಾಗಿದೆ. ಶನಿವಾರ ರಾತ್ರಿ ಮನೆಯಿಂದ ಕಾರಿನಲ್ಲಿ ಹೊರಟಿದ್ದ ಅಶ್ವಿನ್ ಕುಮಾರ್ ತಡರಾತ್ರಿಯಾದರೂ ಮನೆಗೆ ಬಾರದ ಕಾರಣ ಆತಂಕಗೊಂಡ ಕುಟುಂಬಸ್ಥರು ಅವರ ಮೊಬೈಲ್‍ಗೆ ಕರೆ ಮಾಡಿದ್ದಾರೆ. ಯಾವುದೇ ಪ್ರತಿಕ್ರಿಯೆ ಸಿಗದಿದ್ದಾಗ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೊಡಿಗೇಹಳ್ಳಿ ಠಾಣೆ ಪೊಲೀಸರು ಮೊಬೈಲ್ ನಂಬರ್ ಪಡೆದು ಕಾರ್ಯಾಚರಣೆ ಕೈಗೊಂಡಾಗ ಅಶ್ವಿನ್ ಕುಮಾರ್ ಅವರು ತಿಂಡ್ಲು ಮುಖ್ಯ ರಸ್ತೆಯ ಮೇಲೇತುವೆ ಬಳಿ ಇರುವುದು ಗೊತ್ತಾಗಿ ರಾತ್ರಿ ಸುಮಾರು 11.30ರಲ್ಲಿ ಅಲ್ಲಿಗೆ ಹೋಗಿದ್ದಾರೆ.

ಮಲಗಿದ್ದ ಸ್ಥಿತಿಯಲ್ಲಿದ್ದ ಅಶ್ವಿನ್ ಕುಮಾರ್ ಅವರನ್ನು ಕಾರಿನ ಗಾಜು ತಟ್ಟಿ ಎಬ್ಬಿಸಲು ಪ್ರಯತ್ನಿಸಿದಾಗ ಯಾವುದೇ ಸ್ಪಂದನೆ ಬಂದಿಲ್ಲ. ನಂತರ ಗಾಜು ಒಡೆದು ಪರಿಶೀಲಿಸಿದಾಗ ಅವರು ಮೃತಪಟ್ಟಿರುವುದು ತಿಳಿದುಬಂದಿದೆ.

ಸಾವಿನ ಕುರಿತಂತೆ ಕುಟುಂಬ ಸದಸ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಪ್ರಾಥಮಿಕ ತನಿಖೆ ವೇಳೆ ಉಸಿರುಗಟ್ಟಿ ಸಾವನ್ನಪ್ಪಿರಬಹುದು ಅಥವಾ ಹೃದಯಾಘಾತವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಕೊಡಿಗೇಹಳ್ಳಿ ಠಾಣೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರೆಸಿದ್ದಾರೆ.