ಮನೆ ಕಾನೂನು ತಾಜ್ ಮಹಲ್ ಟ್ರಪೀಜಿಯಂ ವಲಯದಲ್ಲಿ ಕೃಷಿ-ಅರಣ್ಯಕ್ಕಾಗಿ ಮರ ಕಡಿಯುವುದಕ್ಕೆ ಅನುಮತಿಸಿದ್ದನ್ನು ಪ್ರಶ್ನಿಸಿದ ಸುಪ್ರೀಂ

ತಾಜ್ ಮಹಲ್ ಟ್ರಪೀಜಿಯಂ ವಲಯದಲ್ಲಿ ಕೃಷಿ-ಅರಣ್ಯಕ್ಕಾಗಿ ಮರ ಕಡಿಯುವುದಕ್ಕೆ ಅನುಮತಿಸಿದ್ದನ್ನು ಪ್ರಶ್ನಿಸಿದ ಸುಪ್ರೀಂ

0

ಆಗ್ರಾದ ವಿಶ್ವವಿಖ್ಯಾತ ತಾಜ್‌ಮಹಲ್‌ ಸ್ಮಾರಕವನ್ನು ಮಾಲಿನ್ಯದಿಂದ ಸಂರಕ್ಷಿಸುವುದಕ್ಕಾಗಿ ತಾಜ್‌ ಟ್ರಪೀಜಿಯಂ ವಲಯ (ಟಿಟಿಝಡ್‌) ಎಂದು ಗುರುತಿಸಲಾದ ಅದರ ಸುತ್ತಲಿನ 10,400 ಚದರ ಕಿ.ಮೀ ವಿಸ್ತೀರ್ಣ ಪ್ರದೇಶದಲ್ಲಿ ನ್ಯಾಯಾಲಯದ ಪೂರ್ವಾನುಮತಿ ಪಡೆಯದೆ ಮರ ಕಡಿಯಲು ಅವಕಾಶ ಕಲ್ಪಿಸಿದ ಆದೇಶದ ಬಗ್ಗೆ ಸುಪ್ರೀಂ ಕೋರ್ಟ್ ಬುಧವಾರ ತೀವ್ರ ಕಳವಳ ವ್ಯಕ್ತಪಡಿಸಿದೆ.

Join Our Whatsapp Group

ಈ ಸಂಬಂಧ 2019ರ ಡಿಸೆಂಬರ್‌ 11ರಂದು ಸರ್ವೋಚ್ಚ ನ್ಯಾಯಾಲಯ ಹೊರಡಿಸಿದ್ದ ಆದೇಶಕ್ಕೆ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರನ್ನೊಳಗೊಂಡ ಪೀಠ ಆಕ್ಷೇಪ ವ್ಯಕ್ತಪಡಿಸಿತು.

“ನಾವು ಈ ಆದೇಶವನ್ನು ವಿರೋಧಿಸುತ್ತೇವೆ. ಇದರ ಪ್ರಕಾರ ಪ್ರತಿಯೊಬ್ಬರೂ ಕೃಷಿ-ಉದ್ಯಮದ ಹೆಸರಿನಲ್ಲಿ ಮರಗಳನ್ನು ಕಡಿಯಲು ಇಡಿಯಾಗಿ ಅನುಮತಿ ನೀಡಲಾಗಿದೆ. ಕೃಷಿ ಉದ್ಯಮ ಅಥವಾ ಆಗ್ರೋ ಫಾರ್ಮಿಂಗ್‌ ಎಂದರೇನು ಎಂಬುದು ಯಾರಿಗೂ ತಿಳಿದಿಲ್ಲ. (ತಮ್ಮ ಜಮೀನಿನಲ್ಲಿ) 2-3 ಮರ ಇರುವ ಸಾಮಾನ್ಯ ವ್ಯಕ್ತಿ ಅವುಗಳನ್ನು ಕಡಿಯಲು  ಅನುಮತಿ ಪಡೆಯಬೇಕು. ಹೀಗಿರುವಾ, ವಾಣಿಜ್ಯ ಉದ್ದೇಶಗಳಿಗಾಗಿ ಹೀಗೆ ಮಾಡುತ್ತಿರುವ ಯಾರಿಗಾದರೂ ಸಂಪೂರ್ಣ ಅನುಮತಿ ನೀಡಲು ಸಾಧ್ಯವೇ? ಉತ್ತರ ಪ್ರದೇಶ ವೃಕ್ಷ ಸಂರಕ್ಷಣಾ ಕಾಯಿದೆ- 1976ಕ್ಕೆ ತಿದ್ದುಪಡಿ ಮಾಡದ ವಿನಾ ಹೀಗೆ ಮಾಡಲು ಆಗದು” ಎಂದಿತು.

ಅಂತೆಯೇ ಆದೇಶ ಮರುಪರಿಶೀಲನೆ ಸಂಬಂಧ ಅದು ನೋಟಿಸ್‌ ಜಾರಿ ಮಾಡಿತು. ಅಲ್ಲದೆ ಕೃಷಿ-ಅರಣ್ಯ ಪರಿಕಲ್ಪನೆ ಎಂಬುದು ಅಸ್ಪಷ್ಟವಾಗಿದ್ದು ಅದನ್ನು ವ್ಯಾಖ್ಯಾನಿಸಲಾಗಿಲ್ಲ, ಇದು ದುರುಪಯೋಗಕ್ಕೆ ಕಾರಣವಾಗುತ್ತದೆ ಎಂದು ನ್ಯಾಯಾಲಯ  ಹೇಳಿತು. ಕೃಷಿ-ಅರಣ್ಯವನ್ನು ಒಂದು ನೀತಿಯಾಗಿ ಪ್ರಚಾರ ಮಾಡಲಾಗುತ್ತಿದ್ದರೂ, ಮರಗಳನ್ನು ಕಡಿಯಲು ಅನಿಯಂತ್ರಿತ ಅನುಮತಿ ನೀಡಿದರೆ ಪರಿಸರಕ್ಕೆ ವ್ಯಾಪಕ ಹಾನಿ ಉಂಟಾಗಬಹುದು ಎಂದು ಅದು ಹೇಳಿತು.

ಅಮಿಕಸ್ ಕ್ಯೂರಿಯಾಗಿ ಹಾಜರಾದ ಹಿರಿಯ ವಕೀಲ ಎ ಡಿ ಎನ್ ರಾವ್,  ನ್ಯಾಯಾಲಯದ ಹಿಂದಿನ ಆದೇಶ ಅಧಿಕಾರಿಗಳು ಒಡ್ಡುವ ಅಡೆತಡೆಗಳನ್ನು ನಿವಾರಿಸಿ ಮರ ನೆಡುವುದನ್ನು ಪ್ರೋತ್ಸಾಹಿಸುತ್ತಿತ್ತು. ಮರ ಕಡಿಯಲು ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿದರೆ ರೈತರು ಮತ್ತು ಕೃಷಿ ಅರಣ್ಯ ವೃತ್ತಿಪರರು ಮಾವು, ನಿಂಬೆಯಂತಹ ವಾಣಿಜ್ಯ ಬೆಳೆ ಬೆಳೆಯುವುದನ್ನು ನಿರುತ್ಸಾಹಗೊಳಿಸುತ್ತದೆ ಎಂದರು. ಆದರೆ ಈ ವಾದವನ್ನು ಒಪ್ಪದ ನ್ಯಾಯಾಲಯ ಕೃಷಿ ಅನುಕೂಲತೆಯ ಹೆಸರಿನಲ್ಲಿ ಪರಿಸರ ಕಾಳಜಿಯನ್ನು ತ್ಯಾಗ ಮಾಡಲು ಸಾಧ್ಯವಿಲ್ಲ ಎಂದಿತು.

ಟಿಟಿಝಡ್‌ನಲ್ಲಿ ಕೃಷಿ-ಅರಣ್ಯ ಚಟುವಟಿಕೆಗಳನ್ನು ಮುಂದುವರಿಸಲು ಅನುಮತಿ ಕೋರಿ ವಕೀಲ ಕಿಶನ್ ಚಂದ್ ಜೈನ್ 2018 ರಲ್ಲಿ ಅರ್ಜಿ ಸಲ್ಲಿಸಿದ್ದರು. ಡಿಸೆಂಬರ್ 2019ರಲ್ಲಿ ಜೈನ್ ಅವರ ಅರ್ಜಿ ಆಲಿಸಿದ್ದ ಸುಪ್ರೀಂ ಕೋರ್ಟ್‌ ಕೃಷಿ-ಅರಣ್ಯ ಚಟುವಟಿಕೆಗಳಿಗಾಗಿ ಮರಗಳನ್ನು ಕಡಿಯುವ ಮೊದಲು ಕಡ್ಡಾಯ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ಆದೇಶ  ಹೊರಡಿಸಿತ್ತು.

ಆದರೆ, ಈ ಆದೇಶಕ್ಕೆ ಪ್ರಸ್ತುತ ಪೀಠವು ಸಹಮತಿಸಲಿಲ್ಲ. ಪ್ರಸ್ತುತ ಪೀಠದ ಮನವಿಯು ಪರಿಸರ ಹಿತಾಸಕ್ತಿಗೆ ವಿರುದ್ಧವಾಗಿದೆ. ಅರ್ಜಿದಾರ ಜೈನ್ ಅವರಿಗೆ ನೋಟಿಸ್ ಜಾರಿ ಮಾಡಿ, ವಿನಾಯಿತಿ ನೀಡಿದ್ದ ಹಿಂದಿನ ಆದೇಶವನ್ನು ಏಕೆ ಹಿಂಪಡೆಯಬಾರದು? ಕೃಷಿ-ಅರಣ್ಯ ಉದ್ಯಮವನ್ನು ವಿವೇಚನಾರಹಿತ ಅರಣ್ಯನಾಶಕ್ಕೆ ನೆಪವಾಗಿ ಬಳಸಲಾಗುತ್ತಿದೆ ಎಂದಿತು.

ಪ್ರಬಲ ಲಾಬಿಗಾರರು ನಿಯಮಗಳು ಸಡಿಲವಾಗಿರಲಿ ಎಂದು ಒತ್ತಾಯಿಸುತ್ತಿದ್ದಾರೆ. ಇದರಿಂದ ನ್ಯಾಯಾಲಯ ಹಲವು ವರ್ಷಗಳಿಂದ ಬೆಂಬಲಿಸುತ್ತ ಬಂದಿರುವ ವೃಕ್ಷ ಸಂರಕ್ಷಣಾ ಯತ್ನಗಳ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದಿತು.  ಅಂತೆಯೇ ಮುಂದಿನ ಆದೇಶ ನೀಡುವವರೆಗೆ, ಯುಪಿ ವೃಕ್ಷ ಸಂರಕ್ಷಣಾ ಕಾಯಿದೆ 1976ರ ನಿಬಂಧನೆಗಳು ಕೃಷಿ-ಅರಣ್ಯಕ್ಕೆ ಅನ್ವಯಿಸುವುದನ್ನು ಮುಂದುವರಿಸಬೇಕೆಂದು ಅದು ನಿರ್ದೇಶಿಸಿತು. ನಿಬಂಧನೆಯ ಪ್ರಕಾರ ಟಿಟಿಝಡ್‌ನಲ್ಲಿ ಯಾವುದೇ ಮರಗಳನ್ನು ಕಡಿಯುವ ಮೊದಲು ನ್ಯಾಯಾಲಯದಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕಾಗುತ್ತದೆ.