ಮನೆ ಕಾನೂನು ನಮ್ಮಿಂದಲೇ ಕೆಪಿಎಸ್​ಸಿ ಶುದ್ಧೀಕರಣ, ಅಕ್ರಮಗಳನ್ನು ಸಾರ್ವಜನಿಕರ ಮುಂದಿಡಲಾಗುವುದು: ಹೈಕೋರ್ಟ್

ನಮ್ಮಿಂದಲೇ ಕೆಪಿಎಸ್​ಸಿ ಶುದ್ಧೀಕರಣ, ಅಕ್ರಮಗಳನ್ನು ಸಾರ್ವಜನಿಕರ ಮುಂದಿಡಲಾಗುವುದು: ಹೈಕೋರ್ಟ್

0

ಬೆಂಗಳೂರು: ಸರ್ಕಾರಿ ಉದ್ಯೋಗಗಳ ಕುರಿತ ನೇಮಕಾತಿಗಳಲ್ಲಿನ ಅಕ್ರಮಗಳ ಸಂಬಂಧ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್​ಸಿ) ವಿರುದ್ಧ ತರಾಟೆ ತೆಗೆದುಕೊಂಡಿರುವ ಹೈಕೋರ್ಟ್, ಇಡೀ ಆಯೋಗವನ್ನು ಸ್ವಚ್ಛ ಮಾಡಬೇಕಿದ್ದು, ಅದನ್ನು ನ್ಯಾಯಾಲಯವೇ ಆರಂಭಿಸುತ್ತದೆ ಎಂದು ತಿಳಿಸಿದೆ. ಅಲ್ಲದೆ, ಆಯೋಗದಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ಸಾರ್ವಜನಿಕರ ಮುಂದೆ ಬಿಚ್ಚಿಡುತ್ತೇವೆ‌ ಎಂದು ತಿಳಿಸಿದೆ.

Join Our Whatsapp Group

ಸಹಾಯಕ ಎಂಜಿನಿಯರ್‌ಗಳ ನೇಮಕದಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಆಯೋಗ ಮಾಡಿರುವ ಶಿಫಾರಸಿಗೆ ತಡೆ ನೀಡಲು ನಿರಾಕರಿಸಿರುವ ಕೆಎಟಿ ಆದೇಶವನ್ನು ಪ್ರಶ್ನಿಸಿ, ಅಭ್ಯರ್ಥಿಗಳಾದ ವಿಶ್ವಾಸ್‌ ಮತ್ತಿತರರು ಮೇಲ್ಮನವಿಗಳನ್ನು ಸಲ್ಲಿಸಿದ್ದರು. ಅವುಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಮತ್ತು ನ್ಯಾಯಮೂರ್ತಿ ರಾಮಚಂದ್ರ ಡಿ.ಹುದ್ದಾರ್‌ ಅವರಿದ್ದ ವಿಭಾಗೀಯಪೀಠ ಈ ಅಭಿಪ್ರಾಯಪಟ್ಟಿತು.

ಸರ್ಕಾರ ಆಯೋಗವನ್ನು ಶುದ್ಧೀಕರಿಸಬೇಕಿತ್ತು, ಅದು ಮಾಡದ ಹಿನ್ನೆಲೆಯಲ್ಲಿ ನಾವೇ ಸ್ವಚ್ಚತಾ ಕಾರ್ಯ ಆರಂಭಿಸತ್ತೇವೆ. ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯತ್ತೇವೆ ಎಂದು ಪೀಠ ತಿಳಿಸಿತು.

ಶುದ್ಧೀಕರಣ ಪ್ರಕ್ರಿಯೆಯನ್ನು ನಾವೇ ಆರಂಭಿಸುತ್ತೇವೆ. ಯಾರ್ಯಾರು ಸಗಣಿ ತಿನ್ನುತ್ತಾರೋ ಅವರನ್ನು ಸುಮ್ಮನೆ ಬಿಡುವುದಿಲ್ಲ. ಈ ವಿಚಾರದಲ್ಲಿ 4-5 ತಲೆ ಉರುಳಿದರೆ ಸರಿ ಹೋಗುವುದು. ಎಲ್ಲ ಕಡೆ ಕೆಟ್ಟವರು ಇರ್ತಾರೆ ಅಂತಲ್ಲ, ಒಳ್ಳೆಯವರೂ ಇರ್ತಾರೆ. ಆದರೆ ಕೆಟ್ಟ ಜನರು ಒಳ್ಳೆಯವರನ್ನು ಬಿಡೋದಿಲ್ಲ. ಹಾಗಾಗಿ, ನಾವು ಆಯೋಗದ ನೇಮಕದಲ್ಲಿ ಪಾರದರ್ಶಕತೆ ತರಲು ಏನೆಲ್ಲಾ ಮಾಡಬೇಕೋ ಅದನ್ನು ಮಾಡೋಣ. ಆ ವ್ಯವಸ್ಥೆಯನ್ನು ಉಳಿಸಬೇಕಾಗಿದೆ. ಇಲ್ಲವಾದರೆ ಮುಂದಿನ ತಲೆಮಾರಿಗೆ ನಾವು ಏನು ಉತ್ತರ ಹೇಳುವುದು ಎಂದು ಪೀಠ ಹೇಳಿತು.

ದಾಖಲೆಗಳ ಸಲ್ಲಿಕೆ: ಈ ವೇಳೆ ಆಯೋಗದ ಪರ ಹಾಜರಾದ ಹಿರಿಯ ವಕೀಲರು, ನೇಮಕದಲ್ಲಿ ಅಕ್ರಮ ನಡೆಸಲಾಗಿದೆ ಎಂಬ ಕುರಿತು ಒಂಎಂಆರ್‌ ಶೀಟ್‌ಗಳು, ಎಫ್‌ಎಸ್‌ಎಲ್‌ ವರದಿ, ಪೆನ್​ ಡ್ರೈವ್‌ ಸೇರಿದಂತೆ ಎಲ್ಲಾ ದಾಖಲೆಗಳನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದರು.

ಆದನ್ನು ದಾಖಲಿಸಿಕೊಂಡ ನ್ಯಾಯಾಲಯ, ಮೊದಲಿಗೆ ಕೆಲವು ವಕೀಲರ ಸಮಕ್ಷಮದಲ್ಲಿ ತಾವೇ ಮುಚ್ಚಿದ ಲಕೋಟೆಯಲ್ಲಿ ವಿವರಗಳನ್ನು ಪರಿಶೀಲಿಸುತ್ತೇವೆ. ಅಗತ್ಯಬಿದ್ದರೆ ಎಲ್ಲಾ ವಿವರಗಳನ್ನು ಸಾರ್ವಜನಿಕವಾಗಿ ಬಿಚ್ಚಿಡುತ್ತೇವೆ. ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಮಾಧ್ಯಮಗಳಲ್ಲಿ ಹಾಕಿಸಿ ಅದನ್ನು ಆಯೋಗದಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬುದನ್ನು ಬಹಿರಂಗಪಡಿಸಲಾಗುವುದು ಎಂದು ಹೇಳಿತು.

ಇದೇ ವೇಳೆ, ಆಯೋಗವನ್ನು ಸರಿ ಮಾಡಲು ನ್ಯಾಯಾಲಯಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವಂತೆ ವಿಚಾರಣೆ ವೇಳೆ ಹಾಜರಿದ್ದ ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ್‌ ಶೆಟ್ಟಿಗೆ ಸೂಚನೆ ನೀಡಿತು. ಅದಕ್ಕೆ ಸಮ್ಮತಿಸಿದ ಅಡ್ವೋಕೇಟ್ ಜನರಲ್, ವ್ಯವಸ್ಥೆಯನ್ನು ಸುಧಾರಿಸುವ ದೃಷ್ಟಿಯಿಂದ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.