ಮನೆ ರಾಜಕೀಯ ಆಹಾರ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ: ದಿನೇಶ್​ ಗುಂಡೂರಾವ್​

ಆಹಾರ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ: ದಿನೇಶ್​ ಗುಂಡೂರಾವ್​

0

ಬೆಂಗಳೂರು: “ಹೋಳಿಗೆ, ಇಡ್ಲಿ ಸೇರಿದಂತೆ ಅನೇಕ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಪ್ಲಾಸ್ಟಿಕ್​ ಬಳಕೆಗೆ ಸಂಪೂರ್ಣ ಕಡಿವಾಣ ಹಾಕಲಾಗುವುದು” ಎಂದು ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​ ತಿಳಿಸಿದ್ದಾರೆ.

Join Our Whatsapp Group

ಈ ಬಗ್ಗೆ ಸಾಮಾಜಿಕ ಜಾಲತಾಣ ‘ಎಕ್ಸ್’​ನಲ್ಲಿ ಪೋಸ್ಟ್​ ಹಂಚಿಕೊಂಡಿರುವ ಅವರು, “ಹೋಳಿಗೆ ಮತ್ತು ಇಡ್ಲಿಗಳಂತಹ ನಮ್ಮ ಅನೇಕ ನೆಚ್ಚಿನ ಆಹಾರಗಳನ್ನು ಬಿಸಿ ಪ್ಯಾನ್​ಗಳ ಮೇಲೆ ಪ್ಲಾಸ್ಟಿಕ್‌ ಹಾಳೆಗಳನ್ನು ಬಳಸಿ ತಯಾರಿಸಲಾಗುತ್ತಿದೆ. ಈ ಅಪಾಯಕಾರಿ ಅಭ್ಯಾಸ ನಮ್ಮ ಆಹಾರಕ್ಕೆ ಹಾನಿಕಾರಕ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ ಮತ್ತು ನಮ್ಮ ಹಾರ್ಮೋನುಗಳು, ಚಯಾಪಚಯ ಕ್ರಿಯೆಗಳು ಮತ್ತು ದೀರ್ಘಕಾಲದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ” ಎಂದು ಎಚ್ಚರಿಸಿದ್ದಾರೆ.

“ಹಾಗಾಗಿ ನಮ್ಮ ಆರೋಗ್ಯಕರ ನಾಳೆಗಾಗಿ ಆಹಾರ ತಯಾರಿಕೆಯಲ್ಲಿ ಪ್ಲಾಸ್ಟಿಕ್​ ಬಳಕೆಗೆ ಕಡಿವಾಣ ಹಾಕೋಣ. ಸುರಕ್ಷಿತ ಹಾಗೂ ಪ್ಲಾಸ್ಟಿಕ್​ ಮುಕ್ತ ಪರ್ಯಾಯಗಳನ್ನು ಆಯ್ಕೆ ಮಾಡಿಕೊಳ್ಳಿ. ಪ್ಲಾಸ್ಟಿಕ್​ ಬಳಕೆಯನ್ನು ತಡೆಯಲು ನಮ್ಮ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ ಆ ಕುರಿತು ಜಾಗೃತಿ ನಿಮ್ಮಿಂದಲೇ ಪ್ರಾರಂಭವಾಗಬೇಕು. ಮಾಹಿತಿಯುಕ್ತರಾಗಿರಿ, ಸುರಕ್ಷಿತವಾಗಿರಿ” ಎಂದು ಪೋಸ್ಟ್​ ಮಾಡಿದ್ದಾರೆ.

ಶಿರಸಿ- ಉಪಹಾರ ಗೃಹದ ಮೇಲೆ ಅಧಿಕಾರಿಗಳ ದಾಳಿ: ಶಿರಸಿಯಲ್ಲಿಂದು ಬೆಳಗ್ಗೆ ಪ್ಲಾಸ್ಟಿಕ್ ಬಳಸಿ ಇಡ್ಲಿ ತಯಾರಿಸುತ್ತಿದ್ದ ಉಪಹಾರ ಗೃಹದ ಮೇಲೆ ದಾಳಿ ನಡೆಸಿರುವ ನಗರಸಭೆಯ ಅಧಿಕಾರಿಗಳು, ಓರ್ವ ಮಾಲೀಕನಿಗೆ ನೋಟಿಸ್ ನೀಡಿದ್ದಾರೆ.

ಶಿವಾಜಿ ಚೌಕ್ ಬಳಿ ಇರುವ ಮಲ್ಲಿಕಾ ಹೋಟೆಲ್ ಪಕ್ಕದಲ್ಲಿ ಪ್ಲಾಸ್ಟಿಕ್ ಬಳಸಿ ಇಡ್ಲಿ ಮಾಡುತ್ತಿರುವುದು ಕಂಡು ಬಂದಿದ್ದರಿಂದ ಅಂಗಡಿ ಮಾಲೀಕನ ಮೇಲೆ ಕ್ರಮ ಜರುಗಿಸಲಾಗಿದೆ.

ನಗರಸಭೆಯ ಪೌರಾಯುಕ್ತ ಕಾಂತರಾಜ ಮಾರ್ಗದರ್ಶನ ಹಾಗು ಹಿರಿಯ ಆರೋಗ್ಯಾಧಿಕಾರಿ ಆರ್.ಎಂ.ವೆರ್ಣೇಕರ್ ನೇತೃತ್ವದಲ್ಲಿ ದಾಳಿ ನಡೆದಿದೆ.