ಬಾರಾಬಂಕಿ (ಉತ್ತರ ಪ್ರದೇಶ): ದೆಹಲಿಗೆ ತೆರಳುತ್ತಿದ್ದ ಅಯೋಧ್ಯಾ ಎಕ್ಸ್ ಪ್ರೆಸ್ ರೈಲಿಗೆ ಶುಕ್ರವಾರ ಬಾಂಬ್ ಬೆದರಿಕೆಯೊಡ್ಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿನ್ನೆಲೆ ಬಾರಾಬಂಕಿ ರೈಲು ನಿಲ್ದಾಣದಲ್ಲಿ ರೈಲನ್ನು ನಿಲ್ಲಿಸಿದ ಅಧಿಕಾರಿಗಳು ಸುಮಾರು 2 ಗಂಟೆಗಳ ಕಾಲ ಶೋಧ ನಡೆಸಿದ್ದಾರೆ. ಆದರೆ ಯಾವುದೇ ಸ್ಫೋಟಕಗಳು ಅಥವಾ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ಅವರು ಹೇಳಿದ್ದಾರೆ.
112 ತುರ್ತು ಸಂಖ್ಯೆಗೆ ಬೆದರಿಕೆ ಕರೆ ಬಂದಿತ್ತು. ಅಯೋಧ್ಯಾ ಎಕ್ಸ್‌ಪ್ರೆಸ್ ( 14205) ನಲ್ಲಿ ಬಾಂಬ್ ಇಡಲಾಗಿದ್ದು, ರೈಲು ಲಖನೌದ ಚಾರ್‌ಬಾಗ್ ರೈಲು ನಿಲ್ದಾಣ ತಲುಪುವ ಮೊದಲು ಅದು ಸ್ಫೋಟಗೊಳ್ಳುತ್ತದೆ ಎಂದು ಕರೆ ಮಾಡಿದವರು ಹೇಳಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಜೆ 7.30ರ ಸುಮಾರಿಗೆ ರೈಲು ಬಾರಾಬಂಕಿ ನಿಲ್ದಾಣಕ್ಕೆ ತಲುಪುವ ವೇಳೆ, ಭಾರಿ ಪೊಲೀಸ್ ಬಂದೋಬಸ್ತ್ ಇತ್ತು. ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್), ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ಮತ್ತು ಬಾಂಬ್ ನಿಷ್ಕ್ರಿಯ ದಳ ರೈಲಿನ ಪ್ರತಿಯೊಂದು ಬೋಗಿಯಲ್ಲಿಯೂ ಶೋಧ ನಡೆಸಿತು ಎಂದು ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್ ಸಿಂಗ್ ಹೇಳಿದ್ದಾರೆ.
ಶೋಧದ ವೇಳೆ ಯಾವುದೇ ಸ್ಫೋಟಕಗಳು ಪತ್ತೆಯಾಗದ ಕಾರಣ, ಸುಮಾರು 2 ಗಂಟೆಗಳ ನಂತರ ರೈಲು ಬಾರಾಬಂಕಿ ನಿಲ್ದಾಣದಿಂದ ಹೊರಟಿತು ಎಂದು ಜಿಆರ್‌ಪಿ ಉಸ್ತುವಾರಿ ಜೈರಾಮ್ ಯಾದವ್ ತಿಳಿಸಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಮುಂದುವರಿದೆ ಎಂದೂ ಅವರು ಹೇಳಿದ್ದಾರೆ.