ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ ಕಮ್ಯುನಲ್ ಮತ್ತು ಕ್ರಿಮಿನಲ್ ರಾಜಕಾರಣಕ್ಕೆ ಪ್ರೋತ್ಸಾಹ ನೀಡುವಂಥ ಬಜೆಟ್ ಮಂಡಿಸಿದ್ದಾರೆ. ಈ ಮೂಲಕ ಮುಸ್ಲಿಂ ಲೀಗ್ ಅಜೆಂಡಾ ಮುಂದುವರಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆರೋಪಿಸಿದರು.
ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಬಜೆಟ್ ಹಿಂದು ಮತ್ತು ಮುಸ್ಲಿಮರ ಮಧ್ಯೆ ಒಡಕು ಮೂಡಿಸುತ್ತದೆ. ಕಾಂಗ್ರೆಸ್‌ನವರು ಮುಸ್ಲಿಂ ಲೀಗ್‌ನ ಅಜೆಂಡಾ ಅನುಸರಿಸುವ ಮೂಲಕ ಒಂದು ವರ್ಗ ಓಲೈಸುವ ರಾಜಕಾರಣದಲ್ಲಿ ತೊಡಗಿದ್ದಾರೆ. ಭವಿಷ್ಯದ ದೃಷ್ಟಿಯಿಂದ ಇದು ಅಪಾಯಕಾರಿ ಬೆಳವಣಿಗೆ ಎಂದರು.
ಮುಹಮ್ಮದ್ ಅಲಿ ಜಿನ್ನಾ ಧಾರ್ಮಿಕತೆ ಆಧಾರದಲ್ಲಿ ದೇಶ ವಿಭಜಿಸಿದ್ದರು. ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಿಂದ ಈಗ ಅವರ ಆತ್ಮವು ಸಂತಸಗೊಂಡಿರಬೇಕು’ ಎಂದು ವ್ಯಂಗ್ಯವಾಡಿದ ಅವರು, ‘ಇದು ಮುಸ್ಲಿಂ ಲೀಗ್‌ನ ಬಜೆಟ್ ಅಥವಾ ಕಾಂಗ್ರೆಸ್ ಬಜೆಟ್ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಬೇಕು’ ಎಂದು ಸವಾಲು ಹಾಕಿದರು.
ಧಾರ್ಮಿಕ ಆಧಾರದಲ್ಲಿ ಮೀಸಲಾತಿಗೆ ಸಂವಿಧಾನದಲ್ಲಿ ಯಾವುದೇ ಅವಕಾಶ ಇರಲಿಲ್ಲ. ಸಂವಿಧಾನ ರಚನಾ ಸಮಿತಿಯೂ ಧಾರ್ಮಿಕ ಆಧಾರದ ಮೇಲೆ ಮೀಸಲಾತಿ ಬೇಡಿಕೆಯನ್ನು ತಿರಸ್ಕರಿಸಿತ್ತು. ಆದರೆ, ಸಿದ್ದರಾಮಯ್ಯ ಅವರು ಸರ್ಕಾರಿ ಒಪ್ಪಂದಗಳು, ಶೈಕ್ಷಣಿಕ ಶುಲ್ಕಗಳ ರಿಯಾಯಿತಿ ಮತ್ತು ಸಂಸ್ಥೆಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ಘೋಷಿಸಿದ್ದಾರೆ. ಹಿಂದು ಸಮುದಾಯದ ಬಡವರಿಗೆ ಈ ಬಜೆಟ್‌ನಲ್ಲಿ ಅಂಥ ಸವಲತ್ತುಗಳನ್ನು ಘೋಷಿಸಿಲ್ಲ’ ಎಂದು ಆರೋಪಿಸಿದರು.
ವಿಧಾನಸಭೆ ಚುನಾವಣೆ ವೇಳೆ, ತಾವು ಹಿಂದು ಎಂದು ಸಿದ್ದರಾಮಯ್ಯ ಹೇಳಿಕೊಂಡಿದ್ದರು. ತಾವು ಹಿಂದು ಆಗಿ ಹುಟ್ಟಿ, ಹಿಂದು ಆಗಿಯೇ ಸಾಯುವುದಾಗಿ ಶಿವಕುಮಾರ್ ಅವರೂ ತಿಳಿಸಿದ್ದರು. ಕಾಂಗ್ರೆಸ್‌ಗೆ ಮುಸ್ಲಿಮರಷ್ಟೇ ಮತ ಹಾಕಿಲ್ಲ. ನಿಮಗೆ ಮತ ಹಾಕಿರುವ ಹಿಂದು ಸಮುದಾಯದವರೂ ಹಿಂದುಗಳೇ. ಆದರೆ, ಕಾಂಗ್ರೆಸ್‌ನವರು ಮುಸ್ಲಿಂ ತುಷ್ಟೀಕರಣಕ್ಕೆ ಪೂರಕವಾದ ಬಜೆಟ್ ಮಂಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದವರ ವಿರುದ್ಧ ದಾಖಲಾದ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯುವ ನಿರ್ಣಯ ಕೈಗೊಂಡಿದ್ದಾರೆ’ ಎಂದು ದೂರಿದರು.
ಸಿದ್ದರಾಮಯ್ಯ 16ನೇ ಬಾರಿ ಬಜೆಟ್ ಮಂಡಿಸಿ ದಾಖಲೆ ಬರೆದಿದ್ದಾರೆ. ಇದರೊಂದಿಗೆ ಮತ್ತೊಂದು ದಾಖಲೆಯನ್ನೂ ಸೃಷ್ಟಿಸಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪಡೆದಷ್ಟು ಸಾಲಗಳು ರಾಜ್ಯದ ಹಿಂದಿನ ಎಲ್ಲ ಮುಖ್ಯಮಂತ್ರಿಗಳನ್ನು ಮೀರಿಸಿವೆ. ಆಸ್ತಿ ನೋಂದಣಿ, ವಾಹನ ನೋಂದಣಿ, ಆಸ್ಪತ್ರೆ ಸೆಸ್, ವಿದ್ಯುತ್ ವಾಹನಗಳ ನೋಂದಣಿ, ಆಸ್ತಿ ತೆರಿಗೆ ಹಾಗೂ ಇತರೆ ತೆರಿಗೆಗಳಲ್ಲಿ ಹೆಚ್ಚಳವಾಗಿದೆ. ಆದರೆ, ಸರ್ಕಾರಕ್ಕೆ ಬರಬೇಕಿದ್ದ ₹10 ಸಾವಿರ ಕೋಟಿ ಆದಾಯದಲ್ಲಿ ಕೊರತೆ ಉಂಟಾಗಿದೆ’ ಎಂದು ಆಪಾದಿಸಿದರು.
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ₹4 ಲಕ್ಷ ಕೋಟಿ ಸಾಲ ಪಡೆದಿದೆ. ಕಳೆದ ಬಜೆಟ್‌ನಲ್ಲಿ ಘೋಷಿಸಿದ್ದರ ಪೈಕಿ, ಈವರೆಗೆ ಶೇ 55ರಷ್ಟು ಮಾತ್ರ ಖರ್ಚು ಮಾಡಲಾಗಿದೆ. ಪ್ರಸಕ್ತ ಆರ್ಥಿಕ ವರ್ಷ ಮುಗಿಯಲು 23 ದಿನಗಳಷ್ಟೇ ಬಾಕಿ ಉಳಿದಿವೆ. ಅಷ್ಟರೊಳಗೆ ಉಳಿದ ಶೇ 45ರಷ್ಟು ಹಣ ಖರ್ಚು ಮಾಡಲು ಸಾಧ್ಯವಾಗುತ್ತದೆಯೇ’ ಎಂದು ಪ್ರಶ್ನಿಸಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 19ರಂದು ನಡೆದ ಘಟನೆ ಆಗಬಾರದಿತ್ತು. ಅಂದು ರಾತ್ರಿ ಪೊಲೀಸರು ನನ್ನನ್ನು ಸವದತ್ತಿಗೆ ಕರೆದೊಯ್ಯುವಾಗ, ಸಂಕಷ್ಟದಿಂದ ಪಾರುಮಾಡುವಂತೆ ಯಲ್ಲಮ್ಮ ದೇವಿ ಬಳಿ ಕೇಳಿಕೊಂಡಿದ್ದೆ. ಹಾಗಾಗಿ ಶುಕ್ರವಾರ ಯಲ್ಲಮ್ಮನಗುಡ್ಡಕ್ಕೆ ಕುಟುಂಬದೊಂದಿಗೆ ತೆರಳಿ ಹರಕೆ ತೀರಿಸಿದ್ದೇನೆ. ಈ ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಇದ್ದು, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕೂಡ ತೀರ್ಪು ನೀಡಿದ್ದಾರೆ. ಹಾಗಾಗಿ ಅಂದಿನ ಘಟನೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಈ ಪ್ರಕರಣದಲ್ಲಿ ನಾನು ತಪ್ಪು ಮಾಡಿದ್ದೇನೆಯೋ ಅಥವಾ ಬೇರೆಯವರು ಮಾಡಿದ್ದಾರೋ ಎಂಬುದು ಅವರವರಿಗೆ ಗೊತ್ತು. ಎಲ್ಲರೂ ತಮ್ಮ ಅಂತರಂಗ ಪರೀಕ್ಷಿಸಿಕೊಳ್ಳಬೇಕು ಎಂದು ಹೇಳಿದರು.
ಬಿಜೆಪಿ ಈಗ ಒಡೆದ ಮನೆಯಾಗಿದೆಯಲ್ಲ’ ಎಂಬ ಪ್ರಶ್ನೆಗೆ ಉತ್ತರಿಸಿದ ರವಿ, ‘ಪಕ್ಷದ ಹೈಕಮಾಂಡ್ ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಲಿದೆ. ಈ ವಿಷಯವನ್ನು ಮಾಧ್ಯಮಗಳಲ್ಲಿ ಚರ್ಚಿಸಲಾಗುವುದಿಲ್ಲ’ ಎಂದರು.
ಇದಕ್ಕೂ ಮುನ್ನ, ಬೆಳಗಾವಿಯ ಶಹಾಪುರದ ಕಪಿಲೇಶ್ವರ ದೇಗುಲಕ್ಕೆ ತೆರಳಿ ಜಲಾಭಿಷೇಕ ಮಾಡಿದರು.














