
ಯಳಂದೂರು: ಸಿದ್ದರಾಮಯ್ಯರವರು ಮಂಡಿಸಿರುವ ಬಜೆಟ್‌ನಲ್ಲಿ ಎಲ್ಲಾ ವರ್ಗದ ಜನರಿಗೂ ನ್ಯಾಯ ದೊರಕಿದೆ. ಜಿಲ್ಲೆಗೆ ಹೆಚ್ಚಿನ ಅನುದಾನ ಲಭ್ಯವಿಲ್ಲ ಎಂಬುದಕ್ಕೆ ಮುಂದೆ ನಡೆಯಲಿರುವ ಮಲೆ ಮಹದೇಶ್ವರ ಬೆಟ್ಟದಲ್ಲಿ ಜಿಲ್ಲೆಗೆ ಮುಖ್ಯಮಂತ್ರಿಗಳು ಹೆಚ್ಚಿನ ಅನುದಾನ ಘೋಷಣೆ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ತಿಳಿಸಿದರು.
ಅವರು ಚಾಮರಾಜನಗರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ೨೦೯ ಹುಲ್ಲೆಪುರ ಮಾರ್ಗ ಕೆಂಪನಪುರ ಸೇರಿರುವ ಸಂಪರ್ಕ ರಸ್ತೆ ಅಭಿವೃದ್ದಿ ಕಾಮಗಾರಿಗೆ ಭೂಮಿ ಪಜೆ ನೆರವೇರಿಸಿ ಮಾತನಾಡಿದರು. ಜಿಲ್ಲೆಯ ಕೆರೆಗಳನ್ನು ಅಭಿವೃದ್ದಿಪಡಿಸಿ, ನಾಲೆಗಳು ಹಾಗೂ ಕಾಲುವೆಗಳನ್ನು ದುರಸ್ತಿ ಪಡಿಸಿ, ಜಿಲ್ಲೆಯಲ್ಲಿ ಕಾಲುವೆ, ಕೆರೆಗಳ ಅಭಿವೃದ್ದಿ ಮಾಡಿ ಶಾಶ್ವತ ನೀರಾವರಿ ಪ್ರದೇಶವನ್ನಾಗಿಸಲು ಈಗಾಗಲೇ ೫೦೫ ಕೋಟಿ ರೂ.ಗಳ ಕ್ರಿಯಾ ಯೋಜನೆ ತಯಾರು ಮಾಡಲಾಗಿದೆ. ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸಲ್ಲಿಸಲಾಗಿತ್ತು. ಈ ಬಜೆಟ್‌ನಲ್ಲಿ ಅದನ್ನು ಸೇರ್ಪಡೆ ಮಾಡಿ, ಮುಖ್ಯಮಂತ್ರಿಗಳು ಘೋಷಣೆ ಮಾಡುತ್ತಾರೆ ಎಂಬ ವಿಶ್ವಾಸವನ್ನು ಜಿಲ್ಲೆಯ ಶಾಸಕರು ನಂಬಿದ್ದೆವು. ಆದರೆ ಇದು ಸಾಧ್ಯವಾಗಿಲ್ಲ. ಹಾಗಾಗಿ ಮಲೆ ಮಹದೇಶ್ವರ ಬೆಟ್ಟದ ಸಚಿವ ಸಂಪುಟ ಸಭೆಯಲ್ಲಿ ಇದನ್ನು ನೀಡುವ ಪೂರ್ಣ ವಿಶ್ವಾಸವಿದೆ. ಇದಕ್ಕೆ ಕಂತುಕಂತಾಗಿ ವರ್ಷಕ್ಕೆ ೫೦ ರಿಂದ ೧೦೦ ಕೋಟಿ ರೂ. ನೀಡಿದರೂ ಇದು ಹಂತಹಂತವಾಗಿ ಪೂರ್ಣಗೊಳ್ಳಲಿದೆ ಎಂದರು.
ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಬಗ್ಗೆ ಮೊದಲು ಸುತ್ತೂರು ಶ್ರೀಗಳು ಪ್ರಸ್ತಾಪಿಸಿದ್ದರು. ಅದರಂತೆ ಹಿಂದಿನ ಸರ್ಕಾರಗಳು ಇದಕ್ಕೆ ಚಾಲನೆ ನೀಡಿದ್ದವು. ಆದರೆ ಇದು ಇನ್ನೂ ಪೂರ್ಣಗೊಂಡಿಲ್ಲ. ಈ ಹಿಂದೆಯೇ ಕಬಿನಿ ೨ ನೇ ಹಂತದ ಯೋಜನೆಗೆ ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಕ್ರಿಯಾಯೋಜನೆ ತಯಾರಿಸಿ ಇದು ಅನುಮೋದನೆಗೊಂಡು ಇದಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ ರಾಜ್ಯದ ಪ್ರಭಾವಿ ಹಿರಿಯ ರಾಜಕಾರಣಿಯೊಬ್ಬರು ಇದಕ್ಕೆ ಪರಿಸರ ನಾಶವಾಗುತ್ತದೆ ಎಂದು ಅಂದಿನ ಪರಿಸರ ಖಾತೆಯ ಕೇಂದ್ರ ಸಚಿವೆ ಮೇನಕಾಗಾಂಧಿಯವರಿಗೆ ಪತ್ರ ಬರೆದು ಇದನ್ನು ನಿಲ್ಲಿಸಿದ್ದು ಈ ಭಾಗಕ್ಕೆ ಈ ಯೋಜನೆ ಕೈಬಿಡುವಂತೆ ಮಾಡಿದ್ದರು ಎಂದು ಈ ವಿಷಯ ಉಲ್ಲೇಖಿಸಿದರು.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಕೆಂಪನಪುರ ಗ್ರಾಮಸ್ಥರ ಮನವಿಯಂತೆ ಈ ರಸ್ತೆಯ ಅಭಿವೃದ್ದಿಗೆ ೩ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದಾರೆ ಎಂದರು. ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಇದುವರೆವಿಗೂ ೨೫೦ ಕೋಟಿ ರೂ. ಗಳ ಅನುದಾನವನ್ನು ತಂದಿದ್ದೇನೆ. ಕಾಮಗಾರಿಗಳು ನಡೆಯುತ್ತಿದೆ. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕೆಲಸಗಳಿಗೆ ತೊಡಕಾಗಿದೆ ಎಂಬುದು ವಿರೋಧ ಪಕ್ಷಗಳ ಮೋಕರೋಧನವಾಗಿದೆ ಎಂದರು. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಹೊಂಗನೂರು ಚಂದ್ರು, ತಾಲೂಕು ಅಧ್ಯಕ್ಷ ಪ್ರಭುಪ್ರಸಾದ್, ಕೆಂಪನಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್. ಮಾದೇಶ್, ಜಿ.ಪಂ. ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್, ಗ್ರಾ.ಪಂ.ಮಾಜಿ ಅಧ್ಯಕ್ಷ ಗುರುಸಿದ್ದಪ್ಪ, ಕೆ.ಎಂ. ನಾಗರಾಜು ಮಾತನಾಡಿದರು. ಗ್ರಾ.ಪಂ. ಸದಸ್ಯರಾದ ನಾಗೇಶ್, ರಾಮಸ್ವಾಮಿ, ಸೋಮಣ್ಣ, ಗ್ರಾಪಂ. ಮಾಜಿ ಅಧ್ಯಕ್ಷ ನಾಗಲಿಂಗನಾಯಕ, ಪಿಎಸಿಸಿ ಅಧ್ಯಕ್ಷ ಶಿವಶಂಕರ್, ಎಪಿಎಂಸಿ ನಿರ್ದೇಶಕ ಹೊಮ್ಮ ರವಿಶಂಕರ್, ಕೆ.ಎಂ. ಮಹದೇವಸ್ವಾಮಿ, ಕಂದಹಳ್ಳಿ ನಂಜುಂಡಸ್ವಾಮಿ, ಎಇಇ ರಮೇಶ್, ಕೆಆರ್‌ಐಡಿಎಲ್ ಇಇ ಚಿಕ್ಕಲಿಂಗಯ್ಯ ಮುಖಂಡರಾದ ಚನ್ನಬಸಯ್ಯ, ಪುಟ್ಟಮಾದಯ್ಯ, ಪುಟ್ಟರಂಗಯ್ಯ, ಸಿ.ಗೋಪಾಲ್. ಕೆ. ಮರಿಬಸವಯ್ಯ, ಎಂ. ರಂಗಸ್ವಾಮಿ, ಎಂ.ರಾಜು ಮೊದಲಾದವರು ಇದ್ದರು.













