ಮೈಸೂರು : ಕಾವೇರಿ-ಕಬಿನಿ ಅಚ್ಚುಕಟ್ಟು ಭಾಗದಲ್ಲಿ ಬೆಳೆದು ನಿಂತಿರುವ ಅಡಿಕೆ, ತೆಂಗು, ಬಾಳೆ ಇನ್ನಿತರೆ ಬೆಳೆಗಳು ಬಿಸಿಲಿನ ತಾಪಕ್ಕೆ ಒಣಗಿ ಹಾಳಾಗುತ್ತಿದ್ದು ಕೂಡಲೇ ಈ ವ್ಯಾಪ್ತಿಯ ಎಲ್ಲ ನಾಲೆಗಳಿಗೆ ನೀರು ಹರಿಸಿ ರೈತರು ಮತ್ತು ಜನ ಜಾನುವಾರುಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿ ನೂರಾರು ರೈತರು ಕಾಡಾ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಕಾವೇರಿ-ಕಬಿನಿ ಅಚ್ಚುಕಟ್ಟು ಪ್ರದೇಶದ ಕೆರೆ ಕಟ್ಟೆಗಳು ಬರಿದಾಗುತ್ತಿವೆ. ಜನ ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗುತ್ತಿದೆ ಹಾಗೂ ಅಂತರ್ಜಲ ಕುಸಿದ ಪರಿಣಾಮ ಕೃಷಿ ಪಂಪ್ಸೆಟ್ಗಳಲ್ಲಿ ನೀರಿಲ್ಲದೆ ತೋಟದ ಬೆಳೆಗಳಾದ ಪಪ್ಪಾಯ, ತರಕಾರಿ ಇನ್ನಿತರೆ ಬೆಳೆಗಳು ಒಣಗುತ್ತಿದ್ದು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಸಂಕಷ್ಟಕ್ಕೆ ಸಿಲುಕಿತ ಹಾಗೂ ಜನ ಜಾನುವಾರುಗಳ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುತ್ತಿದ್ದು, ಸಮಸ್ಯೆ ಅರಿತು ತುರ್ತಾಗಿ ನಾಲೆಗಳ ಮುಖೇನ ಕಾವೇರಿ ಅಚ್ಚುಕಟ್ಟು ಭಾಗದ ವಿ.ಸಿ ನಾಲೆ, ವರುಣಾ ನಾಲೆಯ ಶಾಖಾ ನಾಲೆ ಹಾಗೂ, ಉಪಶಾಖಾ ನಾಲೆಗಳು, ಚಿಕ್ಕದೇವರಾಯ ಬಡಾವಣೆ ನಾಲೆಗಳಿಗೆ ಹಾಗೂ ಕಬಿನಿ ಜಲಾಶಯದ ಬಲದಂಡೆ ನಾಲೆಗಳಿಗೆ ನೀರು ಹರಿಸಿ ಹಾಲಿ ನಿಂತಿರುವ ಬೆಳೆಗಳಿಗೆ ಹಾಗೂ ಜನ ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಅಂತರ್ಜಲ ಅಭಿವೃದ್ಧಿ ತುರ್ತಾಗಿ ನೀರು ಹರಿಸಿ ಕೆರೆ ಕಟ್ಟೆಗಳನ್ನು ತುಂಬಿಸಬೇಕು. ಕೆ.ಆರ್.ಎಸ್ ವಿಭಾಗದ ನಂ. ೪ ಉಪವಿಭಾಗಕ್ಕೆ ಸೇರಿದ ಬನ್ನೂರು ಕೆರೆ, ಬಲದಂಡೆ ನಾಲೆ, ಎಡದಂಡೆ ನಾಲೆಗಳನ್ನು ಆಧುನೀಕರಣ ಮಾಡುವುದಾಗಿ ಕುಂಟುನೆಪ ಹೇಳಿಕೊಂಡು ಬರುತ್ತಿರುವುದು ಸರಿಯಾದ ಕ್ರಮವಲ್ಲ. ಈ ಬಾರಿ ಕಾಮಗಾರಿ ಪ್ರಾರಂಭ ಮಾಡಿ ಪೂರ್ಣಗೊಳಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಲಕ್ಷ್ಮಿಪುರ ವೆಂಕಟೇಶ, ಅತ್ತಳ್ಳಿ ದೇವರಾಜು, ಬಸವರಾಜು ಸಾತಗಳ್ಳಿ, ಮಾದೇವ, ನಂಜುಂಡ ಮುಂತಾದ ರೈತ ಪ್ರತಿಭಟನಾಕಾರರು ಹಾಜರಿದ್ದರು.














